More

    ಮುರಾರ್ಜಿ ಶಾಲೆಯಲ್ಲಿ 14 ಕ್ವಾರಂಟೈನ್​ಗಳು

    ಗಜೇಂದ್ರಗಡ: ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನದಂತೆ ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯನ್ನು ಸುಪರ್ದಿಗೆ ತೆಗೆದುಕೊಂಡು ಕ್ವಾರಂಟೈನ್ ಸೆಂಟರ್ ಆಗಿ ಮಾರ್ಪಡಿಸಿದ್ದು, ಹೊರ ರಾಜ್ಯದಿಂದ ಬಂದ 14 ಜನರನ್ನು ಇಡಲಾಗಿದೆ.

    ಸೋಂಕಿತರ ಸಂಪರ್ಕಕ್ಕೆ ಬಂದವರು ಹಾಗೂ ರೋಗ ಲಕ್ಷಣಗಳಿರುವವರನ್ನು ಈಗ ಅವರ ಮನೆಗಳಲ್ಲಿಯೇ ಪ್ರತ್ಯೇಕವಾಗಿರಿಸಿ ಹೋಂ ಕ್ವಾರಂಟೈನ್ ಮಾಡಲಾಗಿದೆ. ಆದರೂ ಅವರಲ್ಲಿ ಕೆಲವರು ನಿಯಮ ಪಾಲಿಸದೆ ಹೊರಗಡೆ ತಿರುಗಾಡುತ್ತಿದ್ದಾರೆ ಎಂಬ ದೂರಗಳು ಅಲ್ಲಲ್ಲಿ ಕೇಳಿ ಬರುತ್ತಿರುವುದರಿಂದ ಸರ್ಕಾರದ ಕಣ್ಗಾವಲಿನಲ್ಲಿಯೇ ಕ್ವಾರಂಟೈನ್ ಮಾಡಲು ಮುರಾರ್ಜಿ ಶಾಲೆಯ ಕಟ್ಟಡವನ್ನು ಗುರುತಿಸಲಾಗಿದೆ.

    ಕೇರಳದ ಕಾಸರಗೋಡಿಗೆ ಕೂಲಿ ಕೆಲಸ ಮಾಡಲು ತೆರಳಿದ ತಾಲೂಕಿನ ವಿವಿಧ ಗ್ರಾಮಗಳ ಕೂಲಿ ಕಾರ್ವಿುಕರು ನಾಲ್ಕೈದು ದಿನಗಳ ಹಿಂದೆ ಆಗಮಿಸಿದ್ದ ಒಟ್ಟು 14 ಜನರನ್ನು ತಪಾಸಣೆಗೊಳಪಡಿಸಿ ತಾಲೂಕಾಡಳಿತ ಹೋಂ ಕ್ವಾರಂಟೈನ್​ನಲ್ಲಿರಿಸಿದೆ.

    ಈ ವೇಳೆ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಮಾತನಾಡಿ, ವೈದ್ಯಾಧಿಕಾರಿ ಹಾಗೂ ಪೊಲೀಸ್ ಇಲಾಖೆಯವರು ಸಹಾಯದಿಂದ ಮನೆಯಲ್ಲಿ ಕ್ವಾರಂಟೈನ್​ಗಳಾಗಿರುವ 14 ಜನರನ್ನು ಮುರಾರ್ಜಿ ಶಾಲೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಹಾಸ್ಟೆಲ್ ಸ್ವಚ್ಛಗೊಳಿಸಿ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದರು

    ಡಾ. ಮನೋಹರ ಕಣ್ಣಿ ಮಾತನಾಡಿ, ಹೋಂ ಕ್ವಾರಂಟೈನ್​ನಲ್ಲಿ ಇರುವವರ ಆರೋಗ್ಯದ ಮೇಲೆ ನಿಗಾ ಇಡಲು ಹಾಗೂ ಆರೋಗ್ಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದಕ್ಕೆ ಅನುಕೂಲವಾಗುವಂತೆ ಕ್ವಾರಂಟೈನ್​ಗಳನ್ನು ಮುರಾರ್ಜಿ ಹಾಸ್ಟೆಲ್​ಗೆ ಸ್ಥಳಾಂತರಿಸಲಾಗುತ್ತಿದೆ. ಯಾರು ಕ್ವಾರಂಟೈನ್ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲವೋ ಅವರನ್ನು ಈ ಮೂಲಕ ನಿರ್ಬಂಧಿಸಿದಂತಾಗುತ್ತದೆ. 14 ದಿನಗಳ ಕ್ವಾರಂಟೈನ್ ಅವಧಿ ಪೂರೈಸಿದವರನ್ನು ಬಿಟ್ಟು, ಉಳಿದವರನ್ನು ಸ್ಥಳಾಂತರಿಸಲಾಗುತ್ತಿದೆ. ಇಲ್ಲಿ ವೈದ್ಯರು ಸೇರಿ ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಪ್ರತಿದಿನ ಕ್ವಾರಂಟೈನ್​ನಲ್ಲಿರುವವರ ಆರೋಗ್ಯ ಸ್ಥಿತಿಗತಿಯ ಮಾಹಿತಿ ಪಡೆದು ಕರೊನಾ ಸೋಂಕು ಲಕ್ಷಣ ಕಂಡುಬಂದವರ ರಕ್ತ ಹಾಗೂ ಕಫದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗುವುದು ಎಂದರು.

    ಈ ವೇಳೆ ಉಪ ತಹಸೀಲ್ದಾರ್ ವೀರಣ್ಣ ಅಡಗತ್ತಿ, ಡಾ. ಮನೋಹರ ಕಣ್ಣಿ, ಪ್ರಾಚಾರ್ಯ ಬಸವರಾಜ ತಮ್ಮಿನಾಳ, ಕೆ.ಎ. ಹಾದಿಮನಿ, ಇತರರಿದ್ದರು.

    ಗ್ರಾಮಸ್ಥರ ವಿರೋಧ

    ಕಾಲಕಾಲೇಶ್ವರ ದೇವಸ್ಥಾನವು ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ. ಅಪಾರ ಸಂಖ್ಯೆಯ ಭಕ್ತರು ಇಲ್ಲಿ ಆಗಮಿಸುತ್ತಾರೆ. ಕ್ವಾರಂಟೈನ್​ಗಳನ್ನು ಮುರಾರ್ಜಿ ಶಾಲೆಯ ಹಾಸ್ಟೆಲ್​ನಲ್ಲಿ ಇರಿಸಲಾಗಿದ್ದು, ಅದು ಕಾಲಕಾಲೇಶ್ವರ ಗ್ರಾಮದಲ್ಲೇ ಇರುವುದರಿಂದ ಇಲ್ಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಕೂಡಲೇ 3 ಕಿಮೀ ದೂರದಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ಹಾಸ್ಟೆಲ್​ನಲ್ಲಿಯೋ, ಊರ ಹೊರಗಿನ ಕಲ್ಯಾಣ ಮಂಟಪದಲ್ಲಿಯೋ ಅಥವಾ ಪ್ರವಾಸಿ ಮಂದಿರದಲ್ಲಿಯೋ ಕ್ವಾರಂಟೈನ್​ಗಳನ್ನು ಇಡಿ ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

    ರಕ್ತಕ್ಕೂ ಬಂತು ಸಂಚಕಾರ !

    ಗದಗ: ಕರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಘೊಷಣೆಯಾಗಿರುವ ಲಾಕ್​ಡೌನ್ ಆದೇಶದಿಂದ ಜಿಲ್ಲೆಯಲ್ಲಿ ರಕ್ತಕ್ಕೂ ಸಂಚಕಾರ ಬಂದೊದಗಿದೆ. ಗರ್ಭಿಣಿಯರಿಗೆ, ರಕ್ತಹೀನತೆ ಇರುವವರಿಗೆ, ಅಪಘಾತ ಸಂದರ್ಭಗಳಲ್ಲಿ ಗಾಯಾಳುಗಳಿಗೆ, ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ, ಹಿಮೋಫಿಲಿಯಾ, ತಲಸಿಮಿಯಾ, ಡಯಾಲಿಸಿಸ್, ಎಆರ್​ಟಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇಂಥ ರೋಗಿಗಳಿಗೆ ರಕ್ತ ಪೂರೈಸುವ ಬ್ಲಡ್ ಬ್ಯಾಂಕ್​ಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ರಕ್ತ ಸಂಗ್ರಹಣೆಯಾಗುತ್ತಿಲ್ಲ.

    ಜಿಲ್ಲೆಗೆ ಪ್ರತಿದಿನ 20 ರಿಂದ 25 ಯೂನಿಟ್ (ಬಾಟಲ್) ಅವಶ್ಯಕತೆ ಇದ್ದು, ಲಾಕ್​ಡೌನ್ ಘೊಷಣೆಯಾದ ನಂತರ ಕೇವಲ 10 ಯೂನಿಟ್ ಮಾತ್ರ ಲಭ್ಯವಾಗುತ್ತದೆ. ಇದರಿಂದ ನಿತ್ಯ 10ರಿಂದ 15 ಯೂನಿಟ್ ಕಡಿಮೆಯಾಗಿದ್ದರಿಂದ ರೋಗಿಗಳು ತೊಂದರೆ ಎದುರಿಸಬೇಕಾಗಿದೆ.

    ಸಾಮಾನ್ಯ ದಿನಗಳಲ್ಲಿ ರಕ್ತದ ಅವಶ್ಯಕತೆ ಇದ್ದವರು ದಾನಿಗಳ ಮೂಲಕ ಒಂದು ಯೂನಿಟ್ ರಕ್ತ ನೀಡಿ ತಮಗೆ ಬೇಕಿರುವ ರಕ್ತವನ್ನು ಪಡೆದುಕೊಂಡು ಹೋಗುತ್ತಿದ್ದರು. ಇದರಿಂದ ರಕ್ತದ ಕೊರತೆ ಎದುರಾಗುತ್ತಿರಲಿಲ್ಲ. ಇದೀಗ ರಕ್ತ ದಾನಿಗಳಿಗೆ ರಕ್ತದಾನ ಮಾಡಬೇಕು ಎಂಬ ಮನಸ್ಸಿದ್ದರೂ ಕರೊನಾ ಭೀತಿಯಿಂದ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಶೇ. 60ರಷ್ಟು ರಕ್ತದ ಕೊರತೆ ಉಂಟಾಗಿದೆ.

    ಪ್ರತಿ ತಿಂಗಳಿಗೆ ಜಿಲ್ಲೆಗೆ 500 ರಿಂದ 600 ಯೂನಿಟ್ ರಕ್ತ ಬೇಕಾಗುತ್ತದೆ. ಇದೀಗ 200 ರಿಂದ 300 ಯೂನಿಟ್ ರಕ್ತ ಸಂಗ್ರಹವಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ ರಕ್ತ ಸಂಗ್ರಹ ಕಡಿಮೆಯಾಗಿದೆ. ಕರೊನಾ ಭೀತಿಯಿಂದ ಬ್ಲಡ್ ಕ್ಯಾಂಪ್​ಗಳನ್ನು ಆಯೋಜಿಸಲು ಅವಕಾಶವಿಲ್ಲ. ಇದೇ ಕಾರಣದಿಂದ ನಾಲ್ಕು ಬ್ಲಡ್ ಕ್ಯಾಂಪ್ ರದ್ದು ಮಾಡಲಾಗಿದೆ. ತುರ್ತಾಗಿ ರಕ್ತ ಬೇಕಾದರೆ ರೋಗಿಗಳ ಸಂಬಂಧಿಕರು ಹಾಗೂ ಸ್ನೇಹಿತರಿಂದ ರಕ್ತ ಪಡೆದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳುತ್ತಾರೆ.

    ಗದಗ ನಗರದಲ್ಲಿ ಐಎಂಎ ಬ್ಲಡ್ ಬ್ಯಾಂಕ್ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಒಂದು ಬ್ಲಡ್ ಬ್ಯಾಂಕ್ ಇದ್ದು, ರಕ್ತ ದಾನಿಗಳಿಂದ, ಸರ್ಕಾರಿ ಮತ್ತು ಸರ್ಕಾರೇತರ ಸಂಘದ ಸಂಸ್ಥೆಗಳ ವತಿಯಿಂದ ಆಯೋಜಿಸುವ ರಕ್ತದಾನ ಶಿಬಿರದಿಂದ ರಕ್ತವನ್ನು ಸಂಗ್ರಹ ಮಾಡಲಾಗುತ್ತಿದೆ. ಆದರೆ, ಮಾರ್ಚ್ ವಾರದಿಂದಲೇ ಕರೊನಾ ಹಾವಳಿ ಶುರುವಾಯಿತು. ಮಾರ್ಚ್ 10 ನಂತರ ಬಹುತೇಕ ಎಲ್ಲ ಕಾರ್ಯಕ್ರಮ ರದ್ದಾಗತೊಡಗಿದವು. ತದನಂತರ ಲಾಕ್ ಡೌನ್ ಘೊಷಣೆ ಮಾಡಿದ ಮೇಲಂತೂ ರಕ್ತದಾನ ಶಿಬಿರ ಸೇರಿ ಎಲ್ಲ ಕಾರ್ಯಕ್ರಮಗಳು ಸ್ಥಗಿತಗೊಂಡವು. ಹೀಗಾಗಿ ರಕ್ತದ ಅವಶ್ಯಕತೆ ಹೆಚ್ಚಾಗಿದೆ.

    ಕರೊನಾ ಲಾಕ್​ಡೌನ್​ನಿಂದ ಜಿಲ್ಲೆಯಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡದಿರುವುದರಿಂದ ಶೇ.50ರಿಂದ 60ರಷ್ಟು ರಕ್ತದ ಕೊರತೆ ಉಂಟಾಗಿದೆ. ಆದರೆ, ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಇರುವುದು ಮೊದಲೇ ಗೊತ್ತಿರುತ್ತದೆ. ಇದಕ್ಕಾಗಿ ಮುಂಜಾಗ್ರತಾ ಕ್ರಮವಹಿಸಿ ಅಗತ್ಯ ರಕ್ತವನ್ನು ತಂದಿಟ್ಟುಕೊಳ್ಳಲಾಗುತ್ತಿದೆ. ತುರ್ತು ಪ್ರಕರಣಗಳಲ್ಲಿ ರಕ್ತದಾನಿಗಳ ಪಟ್ಟಿ ನಮ್ಮ ಬಳಿ ಇರುತ್ತದೆ. ಯಾವ ಗುಂಪಿನ ರಕ್ತ ಅವಶ್ಯಕತೆ ಇರುತ್ತದೆಯೋ ಅಂತಹ ರಕ್ತ ದಾನಿಗಳನ್ನು ಸಂರ್ಪಸಿ ರಕ್ತ ಪಡೆಯಲಾಗುತ್ತದೆ. ಸದ್ಯ ಕೊಂಚ ಸಮಸ್ಯೆಯಂತೂ ಇದೆ.

    | ಡಾ.ಎಸ್.ಎಸ್. ನೀಲಗುಂದ, ಜಿಲ್ಲಾ ರಕ್ತ ಸುರಕ್ಷತಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಗದಗ

    ಸಂಕಷ್ಟದಲ್ಲಿರುವವರಿಗೆ ಅನ್ನ, ನೀರಿನ ವ್ಯವಸ್ಥೆ

    ಲಕ್ಷ್ಮೇಶ್ವರ: ಕರೊನಾ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಇಡೀ ದೇಶವೇ ಲಾಕ್​ಡೌನ್ ಘೊಷಣೆಯಲ್ಲಿರುವುದರಿಂದ ಸಂಕಷ್ಟ ಅನುಭವಿಸುತ್ತಿರುವ ಭಿಕ್ಷುಕರು, ಅನಾಥರು, ಮಾನಸಿಕ ಅಸ್ವಸ್ಥರು, ಗುಡಿಸಲುವಾಸಿಗಳು, ಅಲೆಮಾರಿ ಕುಟುಂಬಗಳಿಗೆ ಪಟ್ಟಣದ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಅನ್ನ, ನೀರು ಒದಗಿಸುವ ಕಾರ್ಯ ಮಾಡುತ್ತಿದ್ದಾರೆ.

    ಪೌರಕಾರ್ವಿುಕರು, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ, ರೋಗಿಗಳು, ಬಯಲು ಕಮ್ಮಾರರಿಗೆ ಪುಲಾವ್, ಚಹಾ ಮತ್ತು ನೀರಿನ ಬಾಟಲ್​ಗಳನ್ನು ವಿತರಿಸುತ್ತಿದ್ದಾರೆ. ಸಂಘಟನೆಯ ಮಂಜುನಾಥ ಹೊಗೆಸೊಪ್ಪಿನ, ಮೋಹನ ನಂದೆಣ್ಣವರ, ಇಸ್ಮಾಯಿಲ್ ಆಡೂರ, ಸರಸ್ವತಿ ಪಾಟೀಲ, ಝುರೀನಾ ಮುಲ್ಲಾ, ಪ್ರವೀಣ ಆಚಾರ, ಸದಾನಂದ ನಂದೆಣ್ಣವರ, ರಮೇಶ ಹಂಗನಕಟ್ಟಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts