More

    ಮುಗಿಯಿತು ಹತ್ತು ವರ್ಷಗಳ ಗ್ರಾಮಸ್ಥರ ವನವಾಸ

    ಹೊಳೆಆಲೂರ: 2007 ಹಾಗೂ 2009ರ ಮಲಪ್ರಭಾ ನೆರೆ ಹಾವಳಿಯಿಂದ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದವರಿಗೆ 2011ರಲ್ಲಿ ನಿರ್ವಿುಸಲಾಗಿದ್ದ ಮನೆಗಳು ಅಂತೂ ಫಲಾನುಭವಿಗಳಿಗೆ ಸೇರಿವೆ. ಮನೆಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಪಲಾನುಭವಿಗಳಿಗಾಗಿ ತಾಲೂಕು ಆಡಳಿತ ಸತತ 3 ತಾಸು ವಿಶೇಷ ಗ್ರಾಮ ಸಭೆ ನಡೆಸುವ ಮೂಲಕ ಸೋಮವಾರ 10 ವರ್ಷಗಳ ಗೊಂದಲವನ್ನು ವಿವಾರಿಸಿ ಮನೆಗಳನ್ನು ಹಂಚಿಕೆ ಮಾಡಿತು.

    2007ರಲ್ಲಿ ಪಂಚಾಯಿತಿ ದಾಖಲೆ ಪ್ರಕಾರ ಗ್ರಾಮದಲ್ಲಿ 280 ಆಸ್ತಿ ಇದ್ದವು. 2009ರಲ್ಲಿ 400ಕ್ಕೂ ಹೆಚ್ಚು ಆಸ್ತಿ ದಾಖಲೆಗಳು ಸೃಷ್ಟಿಯಾಗಿದ್ದವು. ಅಧಿಕಾರಿಗಳು ಹಾಗೂ ಪ್ರಭಾವಿಗಳು ಸೇರಿಕೊಂಡು ತಮಗೆ ಬೇಕಾದವರಿಗೆ ಮನೆ ಕೊಡುತ್ತಿದ್ದಾರೆ. ಕಾರಣ 2007ರ ದಾಖಲೆಯಂತೆ ಮನೆಗಳನ್ನು ಹಂಚಿಕೆ ಮಾಡಿ ಎಂದು ಕೆಲವರು ಪಟ್ಟು ಹಿಡಿದರೆ, ಕಾಲ ಬದಲಾದಂತೆ ಮನೆಯಲ್ಲಿ ಅಣ್ಣ- ತಮ್ಮಂದಿರು ಬೇರೆ ಬೇರೆಯಾಗಿದ್ದು, 2009ರ ದಾಖಲೆಯಂತೆಯೇ ಮನೆಗಳನ್ನು ಹಂಚಿಕೆ ಮಾಡಿ ಎಂದು ಕೆಲವರು ತಕರಾರು ತೆಗೆದಿದ್ದರು. ಈ ಕುರಿತು ತಹಸೀಲ್ದಾರ್, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳು, ಶಾಸಕರು ಹತ್ತಾರು ಬಾರಿ ಸಭೆ ಮಾಡಿದ್ದರೂ ಇತ್ಯರ್ಥವಾಗಿರಲಿಲ್ಲ.

    ಕಳೆದ ಅಗಸ್ಟ್​ನಲ್ಲಿ ಈ ಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಮತ್ತೆ ಮೂಲ ಗ್ರಾಮದಲ್ಲಿ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದ ಗಾಡಗೋಳಿ ಗ್ರಾಮಸ್ಥರು ರೊಚ್ಚಿಗೆದ್ದು ಹೊಳೆಆಲೂರ-ಕೊಣ್ಣೂರ ರಸ್ತೆ ಬಂದ್ ಮಾಡಿ ಮನೆ ಹಂಚಿಕೆಯಾಗುವವರೆಗೆ ಕದಲುವುದಿಲ್ಲ ಎಂದು ಪ್ರತಿಭಟನೆ ಮಾಡಿದ್ದರು. ಅಂದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ತಿಂಗಳಲ್ಲಿ ಪ್ರಕರಣ ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ತಿಂಗಳ ಹಿಂದೆ ಹೊಳೆಆಲೂರ ಉಪ ತಹಸೀಲ್ದಾರ್, ಕಂದಾಯ ನೀರಿಕ್ಷಕರು. ಗ್ರಾ.ಪಂ. ಪಿಡಿಒ, ಕಾರ್ಯದರ್ಶಿ, ಗ್ರಾಮ ಲೆಕ್ಕಾಧಿಕಾರಿ ಒಳಗೊಂಡ ಸಮಿತಿ ರಚನೆ ಮಾಡಲಾಗಿತ್ತು.

    ಸಮಿತಿ ಅರ್ಹ ಪಲಾನುಭವಿಗಳನ್ನು ಗುರುತಿಸಿ ಪಟ್ಟಿ ತಯಾರಿಸಿದ್ದರು. ಅದರಂತೆ, ಸೋಮವಾರ ಬೆಳಗ್ಗೆ 11 ಗಂಟೆಗೆ ನವ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ, 2009ರ ಪಂಚಾಯಿತಿ ದಾಖಲೆ ಪ್ರಕಾರ 462 ಅರ್ಹ ಪಲಾನುಭವಿಗಳಿಗೆ ಹಾಗೂ ನಂತರದಲ್ಲಿ ಮನೆಗಾಗಿ ಅರ್ಜಿ ಸಲ್ಲಿಸಿದ್ದ 190ರ ಪೈಕಿ 25 ಜನರಿಗೆ ಮನೆ ಹಂಚಿಕೆ ಮಾಡಲಾಯಿತು. ಇನ್ನು ಯಾವುದೇ ಆಸ್ತಿ ಇಲ್ಲದವರಿಗೆ ಮುಂದಿನ ದಿನಗಳಲ್ಲಿ ಸರ್ಕಾರದ ವಸತಿ ಯೋಜನೆಯಡಿ ಆದ್ಯತೆ ಮೇರೆಗೆ ಮನೆ ಒದಗಿಸಲು ತೀರ್ಮಾನ ಕೈಗೊಳ್ಳಲಾಯಿತು.

    ಸಭೆ ಆರಂಭವಾಗುತ್ತಿದ್ದಂತೆ ಸಾರ್ವಜನಿಕರು ಮತ್ತೆ ಹಂಚಿಕೆ ಕುರಿತು ಪರಸ್ಪರ ಮಾತಿನ ಸಮರಕ್ಕೆ ಇಳಿದರು. ಅಧ್ಯಕ್ಷತೆ ವಹಿಸಿದ್ದ ನೋಡಲ್ ಅಧಿಕಾರಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ ಮಾತನಾಡಿ, 10 ವರ್ಷಗಳಿಂದ ಪರಸ್ಪರ ತಿಕ್ಕಾಟದಿಂದ ಮನೆ ಇಲ್ಲದ ಅರ್ಹ ಪಲಾನುಭವಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಈ ಬಾರಿ ಸಮಿತಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಪ್ರಾಮಾಣಿಕತೆಯಿಂದ ಪಟ್ಟಿ ತಯಾರಿಸಿದೆ. ಇದರಲ್ಲಿ ದೋಷಗಳಿದ್ದರೆ ನನ್ನ ಗಮನಕ್ಕೆ ತನ್ನಿ. ಅದನ್ನು ಸರಿಪಡಿಸುತ್ತೇನೆ. ಮನೆ ಇಲ್ಲದವರಿಗೆ ಮುಂದಿನ ದಿನಗಳಲ್ಲಿ ಗ್ರಾಮ ಸಭೆ ಕರೆದು ಕಾನೂನು ಚೌಕಟ್ಟಿನಡಿ ಅನುಕೂಲ ಮಾಡೋಣ. ಪ್ರವಾಹದಿಂದ ಎಲ್ಲರೂ ಕಷ್ಟದಲ್ಲಿದ್ದು, ದೂಡ್ಡ ಮನಸ್ಸು ಮಾಡೋಣ ಎಂದು ಹೇಳಿ ಸಮಾಧಾನಪಡಿಸಿ ಪ್ರಕರಣ ಸುಖಾಂತ್ಯ ಕಾಣುವಂತೆ ಮಾಡಿದರು.

    ಗ್ರಾ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಗಾಣಿಗೇರ, ಉಪಾಧ್ಯಕ್ಷ ಸುರೇಶ ಹುಡೇದ, ಅಲ್ಲಯ್ಯ ಪಟ್ಟದಕಲ್ಲ, ಎಸ್.ವೈ. ಗಾಣಿಗೇರ, ನಿರ್ಮಲಾ ಮುಂಡರಗಿ, ರೇಣುಕಾ ಜೈನಾಪೂರ, ಉಪ ತಹಸೀಲ್ದಾರ್ ಕೆ.ಎಸ್. ಬೆಟಗೇರಿ, ಕಂದಾಯ ನಿರೀಕ್ಷಕ ಕೆ.ಎಸ್. ಬಾರಕೇರ, ಕಂದಾಯ ಇಲಾಖೆಯ ಬಿ.ಆರ್. ಇಟಬುತ್ತಿ, ಗಿರೀಶ ಚನ್ನಪ್ಪಗೌಡ್ರ, ಸೋಮು ಹುಡೇದ, ಎಸ್. ಈರಣ್ಣ ತಳವಾರ, ಶಿವರಾಯಪ್ಪ ಚಲವಾದಿ, ಮಹಾಂತೇಶ ಪೂಜಾರ, ರಮೇಶ ಸಾವನ್ನವರ, ಮಹಾದೇವಪ್ಪ ಗಣಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts