More

    ಮುಗಿಯದ ಕಾಮಗಾರಿ ತಪ್ಪದ ಕಿರಿಕಿರಿ

    ಎಲ್ಲೆಂದರಲ್ಲಿ, ರಸ್ತೆ, ಅಗೆತ, ಜಲಮಂಡಳಿಯ, ಆಮೆಗತಿ, ಕಾರ್ಯವೈಖರಿಗೆ, ಜನ, ಹೈರಾಣ, ಬೆಳಗಾವಿ, Everywhere, Road, Ageta, Jalmandaliya, Amegati, Karvaikhari, Jana, Hairan, Belagavi

    ಮಂಜುನಾಥ ಕೋಳಿಗುಡ್ಡ ಬೆಳಗಾವಿ: ಮಹಾನಗರ ಪಾಲಿಕೆಯು ನೂರಾರು ಕೋಟಿ ರೂ. ವ್ಯಯಿಸಿ ರಸ್ತೆ, ಚರಂಡಿ ನಿರ್ಮಿಸಿದರೂ ಅಗೆಯುವುದು ಮಾತ್ರ ತಪ್ಪುತ್ತಿಲ್ಲ. ವರ್ಷಗಳು ಉರುಳಿದರೂ ಜಲಮಂಡಳಿ ಕಾಮಗಾರಿಗಳು ಪೂರ್ಣಗೊಳ್ಳುತ್ತಿಲ್ಲ. ಜಲಮಂಡಳಿಯ ಆಮೆಗತಿ ಕಾಮಗಾರಿಗಳಿಂದಾಗಿ ಜನರು ಹೈರಾಣಾಗಿದ್ದಾರೆ.

    ಕೇಳುವವರೇ ಇಲ್ಲ ಗೋಳು: ನಾಲ್ಕೆದು ವರ್ಷಗಳಿಂದ ಒಳಚರಂಡಿ ಜೋಡಣೆ, ಕುಡಿಯುವ ನೀರು, ವಿದ್ಯುತ್​, ದೂರವಾಣಿ ಸಂಪರ್ಕ ಇನ್ನಿತರ ಕಾರಣಗಳಿಂದ ನಗರದ ಹಲವೆಡೆ ರಸ್ತೆಗಳನ್ನು ಮನಬಂದಂತೆ ಅಗೆಯಲಾಗುತ್ತಿದೆ. ಆದರೆ, ಅಗೆದು ಹಾಕಿದ ರಸ್ತೆಗಳನ್ನು ದುರಸ್ತಿ ಮಾಡುವ ಪ್ರಯತ್ನ ಮಾತ್ರ ಯಾರಿಂದಲೂ ಆಗಿಲ್ಲ. ಇದರಿಂದ ಸಾರ್ವಜನಿಕರ ರಸ್ತೆಗಳನ್ನು ಎಲ್ಲಿ, ಹೇಗೆ ಬೇಕಾದರೂ ಅಗೆಯಬಹುದು. ಹೇಳುವವರು, ಕೇಳುವವರು ಯಾರೂ ಇಲ್ಲವೇ ಇಲ್ಲ ಎಂಬಂತಾಗಿದೆ.

    ದಾಖಲಾಗದ ದೂರು: ಬೆಳಗಾವಿಯ ಪ್ರತಿ ಕಾಲನಿಯ ರಸ್ತೆಗಳಲ್ಲೂ ಅಲ್ಲಲ್ಲಿ ಡಾಂಬರ್​ ರಸ್ತೆ ಅಗೆದದ್ದು ಕಾಣಿಸುತ್ತದೆ. ಸುಮಾರು 900 ಕಿಮೀ ರಸ್ತೆ ವ್ಯಾಪ್ತಿ ಹೊಂದಿರುವ ಮಹಾನಗರ ಪಾಲಿಕೆಯು ಪ್ರತಿ ವರ್ಷ ಮನೆ, ಕಟ್ಟಡಗಳಿಗೆ ಒಳಚರಂಡಿ, ಕುಡಿಯುವ ನೀರು, ವಿದ್ಯುತ್​ ಸೇರಿದಂತೆ ವಿವಿಧ ಸಂಪರ್ಕಗಳಿಗೆ ರಸ್ತೆ ಅಗೆಯಲು ಅನುಮತಿ ನೀಡುತ್ತದೆ. ಬಳಿಕ ಅಗೆದಿರುವ ರಸ್ತೆಯನ್ನು ವರ್ಷಗಳು ಕಳೆದರೂ ಮುಚ್ಚಿ ದುರಸ್ತಿ ಮಾಡುತ್ತಿಲ್ಲ. ಕೆಲವೆಡೆ ಅನುಮತಿ ಇಲ್ಲದೆ ಸರ್ಕಾರಿ ರಸ್ತೆ ಅಗೆಯುತ್ತಿದ್ದಾರೆ. ಪರವಾನಗಿ ಪಡೆದು ರಸ್ತೆ ಅಗೆದರೂ ರಸ್ತೆ ದುರಸ್ತಿ ಮಾಡುವುದು ಅವರದ್ದೇ ಜವಾಬ್ದಾರಿ. ಆದರೆ, ಪಾಲಿಕೆ ದಾಖಲೆಗಳಲ್ಲಿ ನಿಯಮ ಉಲ್ಲಂಸಿದವರ ಮೇಲೆ ಕ್ರಮ ಕೈಗೊಂಡ ಅಥವಾ ದಂಡ ವಿಧಿಸಿದ ಒಂದೂ ಪ್ರಕರಣ ದಾಖಲಾಗಿಲ್ಲ.

    ಸಾರ್ವಜನಿಕ ರಸ್ತೆ ಅಗೆಯುವುದು ಅಥವಾ ಇನ್ನಿತರ ಕಾಮಗಾರಿ ನಡೆಸಬೇಕಿದ್ದಲ್ಲಿ ಕಡ್ಡಾಯವಾಗಿ ಲೈಸೆನ್ಸ್​ ಪಡೆದ ಗುತ್ತಿಗೆದಾರರಿಂದಲೇ ಕೆಲಸ ಮಾಡಿಸಿಕೊಳ್ಳಬೇಕು ಎನ್ನುವ ನಿಯಮವನ್ನೂ ಗಾಳಿಗೆ ತೂರಲಾಗುತ್ತಿದೆ. ರಸ್ತೆ ಅಗೆಸಿದವರ ವಿರುದ್ಧ ಕ್ರಮ ಕೈಗೊಳ್ಳದ ಮಹಾನಗರ ಪಾಲಿಕೆ, ಕೊನೇ ಪಕ್ಷ ಅನಧಿಕೃತ ಗುತ್ತಿಗೆದಾರರ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳುತ್ತಿಲ್ಲ. ಸ್ಮಾರ್ಟ್​ಸಿಟಿ ರಸ್ತೆಗಳನ್ನು ಹೊರತುಪಡಿಸಿದರೆ ಬಹುತೇಕ ರಸ್ತೆಗಳನ್ನು ಅಗೆಯಲು ಹಳೇ ಕಾಲದ ಒಳಚರಂಡಿ ವ್ಯವಸ್ಥೆಯೂ ಕಾರಣ ಎನ್ನಲಾಗುತ್ತಿದೆ. ಚರಂಡಿಗಳ ನಿರ್ವಹಣೆ ಮಾಡುವುದು ಪಾಲಿಕೆಗೆ ಅನುದಾನ ಸಾಕಾಗುತ್ತಿಲ್ಲ. ಇದೇ ಕಾರಣದಿಂದ ಅಲ್ಲಲ್ಲಿ ಅಗೆಯುವುದು, ರಿಪೇರಿ ಮಾಡುವುದು ತಪ್ಪುತ್ತಿಲ್ಲ ಎನ್ನುತ್ತಿದ್ದಾರೆ ನಗರ ಸೇವಕರು.

    ಗಣೇಶ ಚತುರ್ಥಿಗೆ ಮಾತ್ರ ದುರಸ್ತಿ:
    ಪ್ರತಿ ವರ್ಷ ಗಣೇಶ ಚತುರ್ಥಿ ವೇಳೆ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುವುದು ಪಾಲಿಕೆಯಲ್ಲಿ ಸಂಪ್ರದಾಯವಾಗಿ ಬೆಳೆದು ಬಂದಿದೆ. ಪ್ರಸಕ್ತ ವರ್ಷವೂ ಗಣೇಶ ವಿಸರ್ಜನೆ ಮೆರವಣಿಗೆ ಹೋಗುವ ಮಾರ್ಗಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಆರಂಭಿಸುವ ಮೂಲಕ ಸಾರ್ವಜನಿಕರ ಆಕ್ರೋಶ ತಣ್ಣಗಾಗಿಸುವ ತಂತ್ರಗಾರಿಕೆ ಮಾಡುವ ಪಾಲಿಕೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ, ಹಬ್ಬಕ್ಕೂ ಮೊದಲೇ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.

    ಬೆಳಗಾವಿ ನಗರಕ್ಕೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಜಲಮಂಡಳಿ ಕಾಮಗಾರಿಗಳಿಗಾಗಿ ಅಲ್ಲಲ್ಲಿ ರಸ್ತೆಗಳನ್ನು ಅಗೆದಿದ್ದಾರೆ. ಪರವಾನಗಿ ಇಲ್ಲದೆ ರಸ್ತೆಗಳನ್ನು ಅಗೆದಿರುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

    ಡಾ.ರುದ್ರೇಶ ಘಾಳಿ
    ಮಹಾನಗರ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts