More

    ಮುಗಿಬಿದ್ದು ದಿನಸಿ ಖರೀದಿಸಿದ ಜನ

    ಗದಗ: ಜಿಲ್ಲೆಯಲ್ಲಿ ಐದು ದಿನಗಳ ಕಠಿಣ ಲಾಕ್​ಡೌನ್ ನಂತರ ದಿನಸಿ ಸೇರಿ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ 2 ದಿನಗಳ ಸಡಿಲಿಕೆ ನೀಡಿದ್ದರಿಂದ ಜನರು ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು. ಸರದಿಯಲ್ಲಿ ನಿಂತು ದಿನಸಿ ವಸ್ತುಗಳನ್ನು ಖರೀದಿಸಿದರು. ಟೈಂ ಆಯ್ತು ಎನ್ನುವ ಅವಸರ, ಮನೆಗೆ ಹೋಗಬೇಕೆಂಬ ಧಾವಂತ. ಪೊಲೀಸರ ಸೀಟಿ ಸದ್ದು ಕೇಳಿದ ಕೂಡಲೆ, ಚಡಪಡಿಕೆ ಜನರಲ್ಲಿ ಕಂಡು ಬಂದಿತು.

    ಮಂಗಳವಾರ ಮತ್ತು ಬುಧವಾರ ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಗುರುವಾರದಿಂದ ಜೂ.7ರವರೆಗೆ ಕಠಿಣ ಲಾಕ್​ಡೌನ್ ಮುಂದುವರಿಸಲಾಗುವುದು ಎಂದು ಜಿಲ್ಲಾಡಳಿತ ಘೊಷಿಸಿದೆ. ಈ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಸೇರಿ ಜಿಲ್ಲಾದ್ಯಂತ ಕಿರಾಣಿ ಅಂಗಡಿಗಳು, ಬೇಕರಿಗಳು ಫುಲ್​ರಷ್ ಆಗಿದ್ದವು.

    ಗದಗ ನಗರದಲ್ಲಿ ನಾಮಜೋಶಿ ರಸ್ತೆ, ಬ್ಯಾಂಕ್ ರಸ್ತೆ, ಸ್ಟೇಷನ್ ರಸ್ತೆ, ಹಾತಲಗೇರಿ ನಾಕಾ ಹಾಗೂ ಕಿರಾಣಿ ಮಾರ್ಟ್​ಗಳಲ್ಲಿ ಜನರು ತುಂಬಿದ್ದರು. ಅಗತ್ಯ ವಸ್ತುಗಳ ಖರೀದಿ ಗಡಿಬಿಡಿಯಲ್ಲಿ ಜನರು ಪರಸ್ಪರ ಅಂತರ ಮರೆತು ಖರೀದಿಯಲ್ಲಿ ಮಗ್ನರಾಗಿದ್ದರು. ಅಲ್ಲದೆ, ಗ್ರಾಮೀಣ ಪ್ರದೇಶದಿಂದಲೂ ಆಗಮಿಸಿದ್ದ ಜನರು ವಸ್ತುಗಳನ್ನು ಖರೀದಿಸಿ ಟಂಟಂನಲ್ಲಿ ತೆಗೆದುಕೊಂಡು ಹೋದರು. ಅವಳಿನಗರದಲ್ಲಿ ಮಾಂಸ ಖರೀದಿಯೂ ಜೋರಾಗಿ ನಡೆಯಿತು. ಜನರು ಗುಂಪುಗುಂಪಾಗಿ ನಿಂತು ಜನರು ಮಾಂಸ ಖರೀದಿಸಿದರು.

    ಜಿಲ್ಲಾಡಳಿತದ ಆದೇಶ: ಜಿಲ್ಲೆಯಲ್ಲಿ ಕರೊನಾ ಸೋಂಕು ತಡೆಯಲು ಜೂ.1ರ ಬೆಳಗ್ಗೆ 6 ಗಂಟೆಯಿಂದ ಜೂ.7 ಬೆಳಗ್ಗೆ 6 ಗಂಟೆವರೆಗೆ ನಿರ್ದಿಷ್ಟ ಚಟುವಟಿಕೆ ಹಾಗೂ ಸೇವೆಗಳಿಗೆ ಅವಕಾಶ ನೀಡಿ ಇನ್ನುಳಿದ ಎಲ್ಲ ಚಟುವಟಿಕೆ ಹಾಗೂ ಜನರ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಸುಂದರೇಶಬಾಬು ಆದೇಶ ಹೊರಡಿಸಿದ್ದಾರೆ.

    ಕರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಕೋವಿಡ್​-19 ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ಸಲುವಾಗಿ ಕಠಿಣ ಕ್ರಮ ಕೖಗೊಳ್ಳಲಾಗಿದೆ. ಕೆಲವು ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಹೂ-ಹಣ್ಣು ತರಕಾರಿಗಳ ವ್ಯಾಪಾರವನ್ನು ತಳ್ಳುವ ಗಾಡಿ ಅಥವಾ ಆಟೋ ರಿಕ್ಷಾಗಳ ಮೂಲಕ ಖರೀದಿದಾರರ ಮನೆಗಳ ಓಣಿಗಳಲ್ಲಿ ಕೋವಿಡ್​-19 ಮುನ್ನೆಚ್ಚರಿಕೆ ಕ್ರಮವಹಿಸಿ ಮಾರಾಟ ಮಾಡಲು ಅನುಮತಿಸಿದೆ.

    ಜೂ.3ರಿಂದ ಜೂ.7ರವರೆಗೆ ದಿನಸಿ ವಸ್ತುಗಳನ್ನು ಮನೆಗೆ ಸರಬರಾಜು (ಹೋಂ ಡಿಲಿವರಿ) ಮಾಡಲು ಅವಕಾಶ ನೀಡಿದೆ. ಜಿಲ್ಲೆಯ ಎಲ್ಲ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ರೀತಿಯ ಹೋಟೆಲ್​ಗಳನ್ನು ಬಂದ್ ಮಾಡಬೇಕು. ವೈನ್ ಶಾಪ್, ಬಾರ್​ ಆಂಡ್ ರೆಸ್ಟೋರಂಟ್​ಗಳನ್ನು ತೆರೆಯಲು ಅನುಮತಿ ಇಲ್ಲ. ಬ್ಯಾಂಕ್ ಮತ್ತು ಅಂಚೆ ಕಚೇರಿಗಳು ಕೋವಿಡ್​-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದರೊಂದಿಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಕಾರ್ಯ ನಿರ್ವಹಿಸಬಹುದು. ಈ ಮೊದಲೇ ಅನುಮತಿ ಪಡೆದ ಮದುವೆ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts