More

    ಮುಂದುವರಿದ ಮಳೆ ಅವಾಂತರ

    ಧಾರವಾಡ: ಜಿಲ್ಲೆಯಲ್ಲಿ ಮಳೆಯ ಅವಾಂತರ ಮುಂದುವರಿದಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜಮೀನುಗಳು ಜಲಾವೃತವಾಗುತ್ತಿದ್ದು, ಹಿಂಗಾರು ಬಿತ್ತನೆಗೆ ಹಿನ್ನಡೆಯಾಗುತ್ತಿದೆ.

    ತಾಲೂಕಿನ ಗರಗ, ಅಮ್ಮಿನಭಾವಿ, ಧಾರವಾಡ ಹೋಬಳಿಗಳ ವ್ಯಾಪ್ತಿಯ ಜಮೀನಿನಲ್ಲೀಗ ಶೇಂಗಾ, ಸೋಯಾಬೀನ್, ಆಲೂಗಡ್ಡೆ ಒಕ್ಕಣೆ ನಡೆಯುತ್ತಿದೆ. ಬಿಡುವು ಕೊಡದ ಮಳೆಯಿಂದಾಗಿ ಬೆಳೆಗಳನ್ನು ಕಟಾವು ಮಾಡಲಾಗದೆ ಜಮೀನಿನಲ್ಲೇ ಮೊಳಕೆಯೊಡೆಯುವಂತಾಗಿದೆ.

    ನಿರಂತರ ಮಳೆಯಿಂದ ಹತ್ತಿ ಬೆಳೆ ಉತ್ತಮವಾಗಿ ಬೆಳೆದು ನಿಂತಿದೆ. ಮುಂಗಾರು ಆರಂಭದ ದಿನಗಳಲ್ಲಿ ಹತ್ತಿ ಬಿತ್ತನೆ ಮಾಡಿದ ರೈತರು ಈಗ ಪರಿತಪಿಸುವಂತಾಗಿದೆ. ಕೆಲವೆಡೆ ಹತ್ತಿ ಬಿಡಿಸಲು ಬಂದಿದ್ದು, ಬೆಳೆ ತೊಯ್ದು ಹಾನಿ ಉಂಟಾಗಿದೆ. ನವಲಗುಂದ ರಸ್ತೆಗೆ ಹೊಂದಿಕೊಂಡ ಹೆಬ್ಬಳ್ಳಿ, ಇತರ ಕಡೆಗಳಲ್ಲಿ ಹತ್ತಿ ಜಮೀನು ಜಲಾವೃತವಾಗಿವೆ. ಇದರಿಂದ ಜಮೀನಿಗೆ ಹೋಗಲೂ

    ಆಗದೆ, ಹತ್ತಿ ಬಿಡಿಸಲೂ ಆಗದೆ ರೈತರು ಪರದಾಡುತ್ತಿದ್ದಾರೆ.

    ಇನ್ನು ಶೇಂಗಾ ಬೆಳೆದ ರೈತರ ಸಂಕಷ್ಟ ಮತ್ತೊಂದು ರೀತಿಯದು. ಶೇಂಗಾ ಒಕ್ಕಣೆಗೆ ಇದು ಸಕಾಲವಾಗಿದ್ದು, ಮಳೆ ಬಿಡುವು ನೀಡುತ್ತಿಲ್ಲ. ಮಳೆಯ ನಡುವೆಯೇ ಶೇಂಗಾ ಒಕ್ಕಣೆ ಮಾಡಿದರೆ ಕಾಯಿಗಳಿಗೆ ಮಣ್ಣೆಲ್ಲ ಮೆತ್ತಿಕೊಂಡಿದೆ. ಮಣ್ಣು ಬಿಡಬೇಕಾದರೆ ಕೊಂಚ ಬಿಸಿಲು ಬೇಕು. ಆದರೆ 7- 8 ದಿನಗಳಿಂದ ಸೂರ್ಯನ ಮುಖ ಕಾಣದೆ ರೈತರು ಕಂಗಾಲಾಗಿದ್ದಾರೆ. ಮನೆ ಮಂದಿಯೆಲ್ಲ ಶೇಂಗಾಕ್ಕೆ ಮೆತ್ತಿಕೊಂಡ ಮಣ್ಣು ಬಿಡಿಸಲು ಹರಸಾಹಸ ಪಡುತ್ತಿದ್ದಾರೆ.

    ವೃದ್ಧೆ ಮೇಲೆ ಕುಸಿದ ಮೇಲ್ಛಾವಣೆ: ಅಣ್ಣಿಗೇರಿ ಪಟ್ಟಣದಲ್ಲಿ ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮಣ್ಣಿನ ಮನೆಗಳು ಕುಸಿಯುತ್ತಿವೆ. ಇಲ್ಲಿಯ ಹೊರಕೇರಿ ಓಣೆಯ ಶಾರಮ್ಮ ಎಂಬ 80 ವರ್ಷದ ವೃದ್ಧೆ ಗುರುವಾರ ಮಧ್ಯಾಹ್ನ ಮಲಗಿದ್ದಾಗ ಮೇಲ್ಛಾವಣೆ ಕುಸಿದು ಮಣ್ಣಿನಡಿ ಸಿಲುಕಿದ್ದರು. ಅದನ್ನು ಗಮನಿಸಿದ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಶಾರಮ್ಮಳಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts