More

    ಮುಂಗಾರು ವಿಪತ್ತು ಎದುರಿಸಲು ಸಿದ್ಧರಾಗಿ

    ಹಾವೇರಿ: ಜೂನ್​ನಿಂದ ಮುಂಗಾರು ಮಳೆ ಆರಂಭಗೊಳ್ಳಲಿದ್ದು, ಅನಿರೀಕ್ಷಿತ ಅವಘಡಗಳನ್ನು ಎದುರಿಸಲು ಸನ್ನದ್ಧರಾಗಿ ಎಂದು ತಹಸೀಲ್ದಾರ್​ಗಳಿಗೆ ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಸೂಚನೆ ನೀಡಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ವಿಪತ್ತು ನಿರ್ವಹಣಾ ಸಭೆ ನಡೆಸಿ ವಿವಿಧ ತಾಲೂಕುಗಳ ತಹಸೀಲ್ದಾರ್​ಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

    ಕಳೆದ ವರ್ಷದ ಅತಿವೃಷ್ಟಿಯಿಂದ ಉಂಟಾದ ಹಾನಿ ತಡೆಯಲು ಸಾಧ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು. ಇಂಜಿನಿಯರ್​ಗಳಿಂದ ಸರ್ವೆ ನಡೆಸಿ 3 ದಿನದೊಳಗಾಗಿ ಕ್ರಿಯಾಯೋಜನೆ ಸಲ್ಲಿಸಬೇಕು. ಕಳೆದ ಬಾರಿ ಮಳೆಯಿಂದ ಉಂಟಾದ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗದಂತೆ ತಾತ್ಕಾಲಿಕ ತಡೆಗೋಡೆ ನಿರ್ವಣ, ಚರಂಡಿಗಳ ಸ್ವಚ್ಛತೆಯ ಮೂಲಕ ಮಳೆಯ ನೀರು ಹರಿದು ಹೋಗುವಂತೆ ಮಾಡಬೇಕು. ಶಿಥಿಲಗೊಂಡ ವಿದ್ಯುತ್ ಕಂಬಗಳ ಬದಲಾವಣೆ, ಹರಿದುಹೋದ ತಂತಿಗಳ ಬಲಪಡಿಸಬೇಕು. ಗ್ರಾಮಗಳ ಸಂಪರ್ಕ ಮಾರ್ಗಗಳು, ಎತ್ತರದ ಸುರಕ್ಷಿತ ಕಟ್ಟಡಗಳನ್ನು ಗುರುತಿಸಿ ತಾತ್ಕಾಲಿಕ ವಸತಿ ಕೇಂದ್ರಗಳಿಗೆ ಅವಕಾಶ ಮಾಡಿಕೊಳ್ಳಬೇಕು. ಗಂಜಿ ಕೇಂದ್ರಗಳನ್ನು ಗುರುತಿಸಿ ಸಿದ್ಧತೆ ಮಾಡಿಕೊಳ್ಳಿ ಎಂದರು.

    ಜಿಪಂ ಸಿಇಒ ರಮೇಶ ದೇಸಾಯಿ ಮಾತನಾಡಿ, ಕಳೆದ ಆಗಸ್ಟ್ ಹಾಗೂ ಅಕ್ಟೋಬರ್ ತಿಂಗಳ ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾಗಿರುವ ಮನೆಗಳ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಬೇಕು. ಈ ಮಳೆಗಾಲ ಮುನ್ನವೇ ಮನೆಗಳ ದುರಸ್ತಿ, ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು. ಈ ಕುರಿತು ಈಗಾಗಲೇ ವಿವರವಾದ ಮಾರ್ಗಸೂಚಿ ನೀಡಲಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆಗಳನ್ನು ಪರಿಹರಿಸಿ ನೈಜ ಫಲಾನುಭವಿಗಳಿಗೆ ತ್ವರಿತವಾಗಿ ಸೂರು, ಪರಿಹಾರ ದೊರಕಬೇಕು ಎಂದರು.

    ಯಾವುದೇ ಕಾರಣಕ್ಕೂ ಮಳೆ ನೀರು ಗ್ರಾಮದ ತಗ್ಗು ಪ್ರದೇಶಕ್ಕೆ ಹರಿದು ಮನೆಯೊಳಗೆ ನುಗ್ಗಿ ಹಳೆಯ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಈ ಕುರಿತು ತಾಲೂಕುವಾರು ಸಭೆ ನಡೆಸಿ ಪಿಡಿಒಗಳಿಗೆ ಸೂಚನೆ ನೀಡುವಂತೆ ತಿಳಿಸಿದರು.

    ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ, ತೋಟಗಾರಿಕೆ ಉಪನಿರ್ದೇಶಕ ಎಲ್. ಪ್ರದೀಪ ಮಾತನಾಡಿ, ಮುಂಗಾರು ಮಳೆಗೆ ತೋಟಗಾರಿಕೆ ಹಾಗೂ ಕೃಷಿ ಫಸಲು ಹಾಳಾದರೆ ತಕ್ಷಣವೇ ಅಂದಾಜು ಹಾನಿ ಸಲ್ಲಿಸಬೇಕು. ಮಳೆ ನೀರು ಇಳಿದ ಮೇಲೆ ನಿಖರವಾದ ವರದಿ ಸಲ್ಲಿಸಬೇಕು. ಬೆಳೆ ಹಾನಿ ವರದಿಯನ್ನು ವಿಳಂಬವಾಗಿ ಸಲ್ಲಿಸಿದರೆ ಹಲವು ಗೊಂದಲಗಳು ಉಂಟಾಗುತ್ತವೆ ಎಂದರು.

    ಎಸಿ ಡಾ. ದಿಲೀಫ್ ಶಶಿ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರಾ, ತಹಸೀಲ್ದಾರ್ ಶಂಕರ ಜಿ.ಎಸ್. ಇತರರಿದ್ದರು.

    ಹಾನಿಯ ದಿನವೇ ವರದಿ ಕೊಡಿ

    ಮಳೆ-ಗಾಳಿಗೆ ಹಾನಿಯಾದ ಸ್ಥಳಕ್ಕೆ ಅವಘಡ ಸಂಭವಿಸಿದ ದಿನವೇ ಹಾಜರಾಗಬೇಕು. ಜನರು ಸಂಕಷ್ಟದ ಸಂದರ್ಭದಲ್ಲಿ ತಕ್ಷಣವೇ ಸ್ಪಂದಿಸಿ ಸರ್ಕಾರಕ್ಕೆ ವರದಿ ಮಾಡಿದರೆ ಜನರ ಸಮಸ್ಯೆಗಳು ತ್ವರಿತವಾಗಿ ಇತ್ಯರ್ಥವಾಗುತ್ತವೆ. ಪರಿಹಾರ ವಿಳಂಬವಾಗುವುದೂ ತಪ್ಪುತ್ತದೆ. ಈ ಕ್ರಮವನ್ನು ಎಲ್ಲ ತಹಸೀಲ್ದಾರ್​ಗಳು, ತಾಪಂ ಇಒಗಳು ರೂಢಿಸಿಕೊಳ್ಳಬೇಕು ಎಂದು ಜಿಪಂ ಸಿಇಒ ರಮೇಶ ದೇಸಾಯಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts