More

    ಮುಂಗಾರು ಕೃಷಿಗೆ ಸಿಗ್ತಿಲ್ಲ ಸಾಲ

    ಬಾಬುರಾವ ಯಡ್ರಾಮಿ ಕಲಬುರಗಿ
    ಜಿಲ್ಲಾ ಸಹಕಾರಿ ಮಧ್ಯವರ್ತಿ ಬ್ಯಾಂಕ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವುದರ ನೇರ ಪರಿಣಾಮ ರೈತರ ಮೇಲೆ ಆಗಿದೆ. ಹೀಗಾಗಿ ಬ್ಯಾಂಕಿನಿಂದ ಬೆಳೆಸಾಲ ಸಿಗದೇ ಜಿಲ್ಲೆಯ ರೈತ ಸಮುದಾಯ ಒದ್ದಾಡುವಂತಾಗಿದೆ.
    ಒಂದೆಡೆ ಬ್ಯಾಂಕಿನ ದುಸ್ಥಿತಿ ಇನ್ನೊಂದೆಡೆ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದ್ದರಿಂದ ಬಹುತೇಕ ರೈತರು ಹದ ಮಾಡಿದ ಭೂಮಿಯಲ್ಲಿ ಬಿತ್ತನೆ ಶುರು ಮಾಡಿದ್ದು ಕರೊನಾ ತಂದಿಟ್ಟ ಸಂಕಷ್ಟದಿಂದಾಗಿ ಬೀಜ, ಗೊಬ್ಬರ ಖರೀದಿಸಲು ಹಣ ಸಿಗದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ.
    ಬಹುತೇಕ ರೈತರು ಡಿಸಿಸಿ ಬ್ಯಾಂಕ್ ಮತ್ತು ಅದರ ಶಾಖೆಗಳಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳನ್ನೇ ನೆಚ್ಚಿಕೊಂಡಿದ್ದಾರೆ. ಡಿಸಿಸಿ ಬ್ಯಾಂಕಿನ ಖಜಾನೆ ಖಾಲಿಯಾಗಿ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದೆ. ಹೀಗಾಗಿ ರೈತರಿಗೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಸಾಲ ಸಿಗುತ್ತಿಲ್ಲ.
    ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 6.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಸಣ್ಣ, ಮಧ್ಯಮ ಮತ್ತು ದೊಡ್ಡ ಹಿಡುವಳಿದಾರರು ಸೇರಿ 4.20 ಲಕ್ಷ ರೈತರು (ಆರ್ಟಿಸಿ ಇದ್ದವರ ಸಂಖ್ಯೆ) ಜಮೀನು ಹೊಂದಿದ್ದಾರೆ. ಇವರಲ್ಲಿ ಬಹುತೇಕರು ಬ್ಯಾಂಕ್ ಸಾಲ ಪಡೆದಿದ್ದಾರೆ.
    ಈ ಹಿಂದೆ ರೈತರು ಸಹಕಾರ ಸಂಘ ಸೇರಿ ವಿವಿಧ ಬ್ಯಾಂಕ್ಗಳಲ್ಲಿ ಪಡೆದಿದ್ದ ಸಾಲವನ್ನು ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ ಮನ್ನಾ ಮಾಡಲಾಗಿತ್ತು. ಅದರಲ್ಲಿ ಜಿಲ್ಲೆಯ ಸುಮಾರು 2.90 ಲಕ್ಷ ರೈತರ ಖಾತೆಗಳಿಗೆ ಸಾಲದ ಮೊತ್ತದ ಭಾಗಶಃ ಜಮೆಯಾಗಿದೆ. ಇನ್ನೂ ಹಲವು ರೈತರ ಹೆಸರಿನಲ್ಲಿ ಬ್ಯಾಂಕ್ಗಳಲ್ಲಿ ಸಾಲ ಹಾಗೆಯೇ ಉಳಿದುಕೊಂಡಿದೆ. ಹೀಗಾಗಿ ಹೊಸ ಸಾಲ ನೀಡಲು ಬ್ಯಾಂಕ್ ಸಿದ್ಧವಿಲ್ಲ. ಹೀಗಾಗಿ ರೈತರ ನೆರವಿಗೆ ಸಕರ್ಾರ ಬರಬೇಕಾಗಿದೆ.

    ಹಳೆಯದು ಚುಕ್ತಾ ಮಾಡಿ
    ಸಾಲ ಬೇಕೆಂದು ಬ್ಯಾಂಕರ್ಗಳ ಬಳಿಗೆ ರೈತರು ಹೋದಾಗ ಹಳೆಯ ಸಾಲವನ್ನು ಚುಕ್ತಾ ಮಾಡಿದ ಬಳಿಕ ಹೊಸ ಸಾಲ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಇದು ರೈತರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮೊದಲಿನ ಸಾಲ ಮನ್ನಾ ಆಗಿದ್ದು, ಆ ಹಣ ಸರ್ಕಾರದಿಂದ ತಮ್ಮ ಖಾತೆಗಳಿಗೆ ಜಮೆಯಾಗಬೇಕಿದೆ. ಅಲ್ಲಿಯವರೆಗೆ ಏನು ಮಾಡಬೇಕು ಎಂಬುದು ಗೊತ್ತಾಗದೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ ಎಂದು ಚಿತ್ತಾಪುರ ತಾಲೂಕಿನ ಹಲಕರ್ಟಿ ರೈತ ಶರಣಯ್ಯ ನೋವಿನಿಂದ ಹೇಳಿಕೊಂಡರು. ಸ್ವಲ್ಪ ಬಾಕಿ ಇದೆ. ಅದನ್ನು ಪಾವತಿಸಿ ಹೊಸ ಸಾಲ ಪಡೆಯಬೇಕು ಎಂದರೆ, ಅದು ಸರ್ಕಾರ ನೀಡಬೇಕು. ನಾವು ಕಟ್ಟಿದರೆ ಲಾಭ ಸಿಗಲ್ಲ ಎಂಬುದು ಹಲವು ರೈತರ ಅಳಲು. ಕಲಬುರಗಿ,

    ಮುಂಗಾರು ಹಂಗಾಮಿಗೆ ರೈತರಿಗೆ ಸಾಲ ನೀಡಲು ಅನುವು ಮಾಡಿಕೊಡುವಂತೆ ಕೋರಿ ಸಕರ್ಾರಕ್ಕೆ ಪತ್ರ ಬರೆಯಲಾಗಿದೆ. ಹೊಸ ಸಾಲ ನೀಡುವ ಸ್ಥಿತಿಯಲ್ಲಿ ಇಲ್ಲ. ಆದರೆ ರಿನೀವಲ್ ಮಾಡಿಕೊಡುತ್ತಿದ್ದೇವೆ. ಸಕರ್ಾರದ ಆದೇಶ ನೋಡಿ ಹೆಜ್ಜೆ ಇಡಲಾಗುವುದು.
    | ಬಸವರಾಜ ವಾಲಿ ಅಧ್ಯಕ್ಷ
    ಕಲಬುರಗಿ ಡಿಸಿಸಿ ಬ್ಯಾಂಕ್

    ಬ್ಯಾಂಕಿನ ಹಣಕಾಸು ಸ್ಥಿತಿ ಸರಿಯಾಗಿಲ್ಲ, ಹೀಗಾಗಿ ರೈತರಿಗೆ ಸಾಲ ನೀಡುವುದು ಕಷ್ಟವಾಗಲಿದೆ. ವಿಶೇಷ ಆರ್ಥಿಕ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಹಣ ನೀಡಿದರೆ ಮಾತ್ರ ಸಾಲ ವಿತರಿಸಲು ಸಾಧ್ಯವಾಗುತ್ತದೆ.
    | ವಿಶ್ವನಾಥ ಮಲಕೂಡ ಎಂಡಿ
    ಕಲಬುರಗಿ ಡಿಸಿಸಿ ಬ್ಯಾಂಕ್

    ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಪುನಶ್ಚೇತನಗೊಳಿಸಲು ಸಕರ್ಾರ 200 ಕೋಟಿ ರೂ. ನೀಡಬೇಕು. ಅಲ್ಲದೆ ಬಾಕಿ ಉಳಿದಿರುವ ಸಾಲ ಮನ್ನಾ ಹಣವನ್ನು ಆಯಾ ರೈತರ ಖಾತೆಗೆ ಜಮೆ ಮಾಡುವ ಮೂಲಕ ಮುಂಗಾರಿಗೆ ಹೊಸ ಸಾಲ ಸಿಗುವಂತೆ ಮಾಡಬೇಕು. ರೈತರು ಸಂಕಷ್ಟದಲ್ಲಿ ಇರುವುದರಿಂದ ಉಚಿತವಾಗಿ ಬೀಜ-ಗೊಬ್ಬರ ವಿತರಿಸಬೇಕು.
    | ಡಾ.ಅಜಯಸಿಂಗ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts