More

    ಮೀಸಲಾತಿ ಹೆಚ್ಚಿಸದಿದ್ದರೆ ವಾಲ್ಮೀಕಿ ಜಯಂತಿ ಬಹಿಷ್ಕಾರ

    ಕೆ.ಆರ್.ನಗರ: ನಾಯಕ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ 235 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ತಿಂಗಳು 9ರಂದು ನಡೆಯುವ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.


    ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಶಾಸಕ ಸಾ.ರಾ.ಮಹೇಶ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ತಾಲೂಕು ನಾಯಕ ಸಂಘದ ಅಧ್ಯಕ್ಷ ಟಿ.ಎಂ.ನರಸಿಂಹನಾಯಕ ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ಮುಖಂಡರು ಈ ವಿಚಾರ ತಿಳಿಸಿದರು.


    ಸಮಾಜದ ಬೇಡಿಕೆ ಮತ್ತು ಸ್ವಾಮೀಜಿ ಹೋರಾಟಕ್ಕೆ ಬೆಲೆ ಕೊಡದ ಈ ಸರ್ಕಾರದ ನಿರ್ಧಾರಕ್ಕೆ ನಮ್ಮ ಧಿಕ್ಕಾರವಿದೆ. ಈ ಸಂಬಂಧ ಶಾಸಕರಿಗೆ ಮನವಿಯನ್ನೂ ಸಲ್ಲಿಸಿದ್ದೇವೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜತೆಗೂಡಿ ಸರ್ಕಾರಕ್ಕೆ ಒತ್ತಡ ತಂದು ನಮ್ಮ ಮನವಿಗೆ ಸ್ಪಂದಿಸುವಂತೆ ಮನವಿ ಮಾಡಿದ್ದೇವೆ. ನಮ್ಮ ಹೋರಾಟಕ್ಕೆ ಬೆಂಬಲ ನೀಡುವವರನ್ನು ನಾವು ಬೆಂಬಲಿಸುತ್ತೇವೆ. ಅಲ್ಲಿಯ ತನಕ ಸರ್ಕಾರ ನಡೆಸುವ ಯಾವುದೇ ಕಾರ್ಯಕ್ರಮಗಳಲ್ಲಿ ನಮ್ಮ ಸಮುದಾಯದ ಮುಖಂಡರು ಮತ್ತು ಸದಸ್ಯರು ಭಾಗವಹಿಸದಿರಲು ನಿರ್ಧರಿಸಿದ್ದೇವೆ ಎಂದರು.


    ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಸಾ.ರಾ.ಮಹೇಶ್ ನಾಯಕ ಸಮುದಾಯದ ಬೆಂಬಲಕ್ಕೆ ನಾನಿದ್ದೇನೆ. ಜಯಂತಿ ಕಾರ್ಯಕ್ರಮಕ್ಕೆ ಖರ್ಚಾಗುತ್ತಿದ್ದ ನನ್ನ ಸ್ವಂತ 2 ಲಕ್ಷ ರೂ.ಗಳನ್ನು ಶ್ರೀಗಳಿಗೆ ಕಾಣಿಕೆಯಾಗಿ ಒಪ್ಪಿಸುತ್ತೇನೆ. ಪ್ರತಿಭಟನೆ ನಿಂತ ನಂತರ ವಾಲ್ಮೀಕಿ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಿಸೋಣ ಎಂದು ತಿಳಿಸಿದರು.

    ತಹಸೀಲ್ದಾರ್ ಎಸ್.ಸಂತೋಷ್, ಮುಖ್ಯಾಧಿಕಾರಿ ಡಾ.ಜಯಣ್ಣ, ಪಿಎಸ್‌ಐ ಚಂದ್ರಹಾಸ, ಬಿಇಒ ಗಾಯತ್ರಿ, ನಾಯಕ ಸಂಘದ ಗೌರವಾಧ್ಯಕ್ಷ ಎ.ಟಿ.ಶಿವಣ್ಣ, ಉಪಾಧ್ಯಕ್ಷ ಭೈರನಾಯಕ, ಖಜಾಂಚಿ ಮಹದೇವನಾಯಕ, ಕಾರ್ಯದರ್ಶಿ ಪರಮೇಶ, ಮುಖಂಡರಾದ ಎಚ್.ಸಿ.ಕುಮಾರ್, ನಾಗರಾಜ್, ದೇವರಾಜ್, ಕೃಷ್ಣನಾಯಕ, ಸುರೇಶ, ಬಸವರಾಜ್ ಇನ್ನಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts