More

    ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಗೊಂದಲ

    ಚಿತ್ರದುರ್ಗ: ಬಿಜೆಪಿ ಎಂದಿಗೂ ಬಡವರ ಮೇಲೆ ಶೋಷಣೆ, ಜಾತಿ ಸಂಘರ್ಷ ಸೃಷ್ಟಿಸುವ ಪ್ರಯತ್ನ ನಡೆಸಿಲ್ಲ. ಆದರೆ, ಮೀಸಲಾತಿ ವಿಚಾರದಲ್ಲಿ ಸಮಾಜದಲ್ಲಿ ತಪ್ಪು ಮಾಹಿತಿ ನೀಡುವ ಕೆಲಸ ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ದೂರಿದರು.

    ತರಾಸು ರಂಗಮಂದಿರದಲ್ಲಿ ರಾಜ್ಯದ ಎಲ್ಲೆಡೆ ಮಾದಿಗ ಮುನ್ನಡೆ ತಂಡದಿಂದ ಸೋಮವಾರ ನಡೆದ ಮಾದಿಗರ ಆತ್ಮಗೌರವ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

    ಮೊದಲು ಪರಿಶಿಷ್ಟ ಜಾತಿ ಇದ್ದದ್ದು ಆರು. ಅದನ್ನು 101 ಜಾತಿಯಾಗಿಸಿ, ಮತ ಬ್ಯಾಂಕ್ ಆಗಿಸಿಕೊಂಡು ಸ್ವಾರ್ಥ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ದಲಿತ ಸಮುದಾಯಕ್ಕೆ ಸ್ವಾತಂತ್ರೃ ನಂತರದಿಂದಲೂ ವಂಚಿಸಿದೆಯೇ ಹೊರತು ನ್ಯಾಯ ನೀಡಿಲ್ಲ. ಅಸ್ಪಶ್ಯರು ಬಲಾಢ್ಯರನ್ನು ಸಹಿಸಿಕೊಳ್ಳುವ, ಪೈಪೋಟಿ ಕೊಡುವ ಶಕ್ತಿ ಇಲ್ಲ. ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಯುತ ಸೌಲಭ್ಯ ಸಿಗಲು ಒಳ ಮೀಸಲಾತಿ ಅಗತ್ಯವಿದೆ ಎಂದರು.

    ರಾಜ್ಯದ 56 ಸಾವಿರ ಜನವಸತಿ ಕೇಂದ್ರದ ವಸ್ತುಸ್ಥಿತಿ ಅರಿಯಲು 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ 11 ಕೋಟಿ ರೂ. ಬಿಡುಗಡೆ ಮಾಡಿದ್ದರಿಂದ ವರದಿ ಸಿದ್ಧವಾಗಿದೆ. ಜಾರಿಗಾಗಿ ಬಿಜೆಪಿ ಅವಿರತ ಶ್ರಮಿಸುತ್ತಿದೆ ಎಂದು ಹೇಳಿದರು.

    ನಿ.ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ವಯ ಪರಿಶಿಷ್ಟ ಜಾತಿಯಲ್ಲಿನ 101 ಒಳ ಜಾತಿಗಳಲ್ಲಿ ಯಾರನ್ನು ತೆಗೆದು ಹಾಕುವ ಪ್ರಶ್ನೆ ಇಲ್ಲ. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗುವ ನಿಟ್ಟಿನಲ್ಲಿ ನಮ್ಮ ಅಭ್ಯಂತರವಿಲ್ಲ. ಆದರೆ, ಭೋವಿ, ಲಂಬಾಣಿ, ಇತರೆ ಸಮಾಜದವರಲ್ಲಿ ತಪ್ಪು ತಿಳವಳಿಕೆ ಮೂಡಿಸಲಾಗುತ್ತಿದೆ ಎಂದು ಬೇಸರಿಸಿದರು.

    ಈ ವರದಿ ಜಾರಿ ವಿಚಾರವಾಗಿ ಕಾಂಗ್ರೆಸ್ ನುಡಿದಂತೆ ನಡೆಯುತ್ತಿಲ್ಲ. ಸಿಎಂ ಸಿದ್ದರಾಮಯ್ಯ ದಲಿತರ ಪರವಾಗಿಲ್ಲ. ಹೀಗಾಗಿ ರಾಜ್ಯದೆಲ್ಲೆಡೆ ಸಭೆ, ಸಮಾವೇಶಗಳ ಮೂಲಕ ಒಳ ಮೀಸಲಾತಿ ಜಾರಿಯಿಂದಾಗುವ ಲಾಭ ತಿಳಿಸಲಾಗುತ್ತಿದೆ ಎಂದರು.

    ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿನಾರಾಯಣ ಮಾತನಾಡಿ, ಶಿಕ್ಷಣ, ಉದ್ಯೋಗ, ರಾಜಕೀಯ ಅಧಿಕಾರದಿಂದ ನಮ್ಮವರು ವಂಚನೆಗೆ ಒಳಗಾಗುತ್ತಲೇ ಇದ್ದು, ಒಳ ಮೀಸಲಾತಿ ಜಾರಿಯಾಗಲೇಬೇಕಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲವೂ ಇದೆ ಎಂದರು.

    ಮಾಜಿ ಎಂಎಲ್ಸಿ ಪ್ರೊ.ಲಿಂಗಪ್ಪ, ಮುಖಂಡರಾದ ಗುರುನಾಥ್ ದ್ಯಾಮವ್ವನವರ್, ಮೋಹನ್, ಸಾಧು ದೊಡ್ಮನಿ, ಬಿ.ಆರ್.ಮುನಿರಾಜು, ಹುಲ್ಲೂರು ಕುಮಾರ್, ಮಹಾಂತೇಶ್, ತಿಪ್ಪೇಸ್ವಾಮಿ, ರಾಜಣ್ಣ, ಡಿ.ಓ.ಮುರಾರ್ಜಿ, ಪರಶುರಾಮ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts