More

    ಮೀಸಲಾತಿಗೆ ಮರು ಹೋರಾಟ -ಪುರುಷೋತ್ತಮಾನಂದಪುರಿ ಶ್ರೀ -ಉಪ್ಪಾರ ಸಂಘದ ಪದಗ್ರಹಣ

    ದಾವಣಗೆರೆ: ಉಪ್ಪಾರ ಸಮಾಜದ ಕುಲಶಾಸ್ತ್ರ ಅಧ್ಯಯನ ವರದಿ ರಾಜ್ಯಸರ್ಕಾರಕ್ಕೆ ಸಲ್ಲಿಕೆಯಾದ ತಕ್ಷಣ ಮತ್ತೊಮ್ಮೆ ಮೀಸಲಾತಿ ಹೋರಾಟಕ್ಕೆ ಇಳಿಯಲಾಗುವುದು ಎಂದು ಹೊಸದುರ್ಗ ಭಗೀರಥ ಪೀಠದ ಡಾ. ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.
    ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಭಗೀರಥ ಉಪ್ಪಾರ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರದ ಸಾನ್ನಿಧ್ಯ ವಹಿಸಿ ಮಾತನಾಡಿದರು.
    ಉಪ್ಪಾರ ಸಮಾಜದ ಕುಲಶಾಸ್ತ್ರ ಅಧ್ಯಯನ ಮುಗಿಯುತ್ತ ಬಂದಿದೆ. ಪ್ರಥಮ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅಂತಿಮ ವರದಿಯನ್ನು ಜನವರಿಯಲ್ಲಿ ಸಲ್ಲಿಸುವಂತೆ ತಂಡಕ್ಕೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
    ಹಾವನೂರು, ಚಿನ್ನಪ್ಪರೆಡ್ಡಿ ಹಾಗೂ ವೆಂಕಟಸ್ವಾಮಿ ಆಯೋಗಗಳು ಉಪ್ಪಾರ ಸಮಾಜಕ್ಕೆ ಮೀಸಲು ನೀಡಬೇಕು ಎಂದು ಹೇಳಿವೆ. ಇದರಿಂದ ಮಾತ್ರ ಸಮಾಜವನ್ನು ಮುಂಚೂಣಿಗೆ ತರಲು ಸಾಧ್ಯ. ಮೀಸಲಾತಿಗೆ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದರೂ ಪ್ರಗತಿ ಸಾಧ್ಯವಾಗಿಲ್ಲ ಎಂದರು.
    ಮೀಸಲಿನಿಂದ ಸಮಾಜವು ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯವಾಗಿ ಬೆಳೆಯಲು ಸಾಧ್ಯ. ಹೋರಾಟದ ಮೂಲಕ ಶಕ್ತಿ ಪ್ರದರ್ಶಿಸಿದಾಗ ಸರ್ಕಾರಗಳು ಬೇಡಿಕೆ ಈಡೇರಿಸಲು ಮನಸ್ಸು ಮಾಡುತ್ತವೆ. ಸಮುದಾಯದ ಮುಖಂಡರು ಹೋರಾಟಕ್ಕೆ ಸಿದ್ದರಾಗಬೇಕು. ರಾಜಕೀಯ ಮುಖಂಡರ ಮೂಲಕವೂ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು.
    ಇತಿಹಾಸ ಹಾಗೂ ಪರಂಪರೆ ಹೊಂದಿರುವ ಉಪ್ಪಾರ ಸಮಾಜವು ದೇಶದಲ್ಲಿ 15 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿದೆ. ಜನವರಿ 29ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ 10 ಲಕ್ಷ ಸಮಾಜ ಬಾಂಧವರನ್ನು ಒಂದೇ ವೇದಿಕೆಗೆ ಕರೆತರುವ ಮೂಲಕ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ತಿಳಿಸಿದರು.
    ಇಂದಿನ ದಿನಗಳಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಳಗೊಂಡಿದ್ದರೂ ಹಿಂದುಳಿದ ವರ್ಗಗಳ ಸಾಕ್ಷರತಾ ಪ್ರಮಾಣ ಶೇ.50ರಿಂದ 60ರಷ್ಟು ಮಾತ್ರ ಇದೆ. ಎಲ್ಲ ಜಿಲ್ಲೆಗಳಲ್ಲಿ ಸಂಘ ಸಂಸ್ಥೆಗಳು ವಿದ್ಯಾನಿಧಿ ಮೂಲಕ ಸಮಾಜದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಪ್ರತಿವರ್ಷ ಐಎಎಸ್ ಹಾಗೂ ಐಪಿಎಸ್ ಪರೀಕ್ಷೆಗಳಿಗೆ ತರಬೇತಿ ನೀಡಬೇಕು ಎಂದರು.
    ಉಪ್ಪಾರ ಸಂಘದ ಕಾನೂನು ಸಲಹೆಗಾರ ಯು. ಹನುಮಂತಪ್ಪ ಮತ್ತಿ ಮಾತನಾಡಿ, ಸರ್ಕಾರ,ಜನಪ್ರತಿನಿಧಿಗಳು ಉಪ್ಪಾರ ಸಮಾಜವನ್ನು ಕಡೆಗಣಿಸುತ್ತಿದ್ದು, ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಗುರುಗಳು ಟೊಂಕ ಕಟ್ಟಿ ನಿಲ್ಲಬೇಕು. ಸಮಾಜವನ್ನು ಎಸ್‌ಟಿಗೆ ಸೇರಿಸಲು ಪ್ರಯತ್ನಿಸಬೇಕು, ನಿಸ್ತೇಜಗೊಂಡಿರುವ ರಾಜ್ಯ ಸಂಘಕ್ಕೆ ಪುನಶ್ಚೇತನ ನೀಡಬೇಕು ಎಂದು ತಿಳಿಸಿದರು.
    ವೈದ್ಯ ಡಾ.ಪಿ. ಚನ್ನಕೇಶವಮೂರ್ತಿ ಸನ್ಮಾನಿತರಾಗಿ ಮಾತನಾಡಿ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಕ್ಕಳನ್ನು ಮತ್ತೊಬ್ಬರೊಂದಿಗೆ ಹೋಲಿಸಬೇಡಿ. ಹೆಚ್ಚು ಅಂಕ ಗಳಿಸುವಂತೆ ಒತ್ತಡ ಹೇರಬೇಡಿ. ಮಕ್ಕಳನ್ನು ಶಿಕ್ಷಣದ ಜತೆಗೆ ಸುಸಂಸ್ಕೃತರನ್ನಾಗಿಸಬೇಕು ಎಂದು ಹೇಳಿದರು.
    ಜಿಲ್ಲಾ ಭಗೀರಥ ಸಂಘದ ಅಧ್ಯಕ್ಷ ಎಂ.ಸಿ. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘದ ಗೌರವಾಧ್ಯಕ್ಷ ಎಸ್. ಬಸವರಾಜಪ್ಪ ತುರ್ಚಘಟ್ಟ, ಉಪ್ಪಾರ ಯುವಕರ ಸಂಘದ ಜಿಲ್ಲಾಧ್ಯಕ್ಷ ಎನ್‌ಬಿಎ ಲೋಕೇಶ್, ನೌಕರರ ಸಂಘದ ಅಧ್ಯಕ್ಷ ಎನ್.ಎಸ್.ಚಂದ್ರಪ್ಪ, ಪಾಲಿಕೆ ಮಾಜಿ ಉಪ ಮಹಾಪೌರರಾದ ಪಿ.ಎಸ್. ಜಯಣ್ಣ, ಮಂಜಮ್ಮ, ಉಪ್ಪಾರ ಸಂಘದ ದಾವಣಗೆರೆ ತಾಲೂಕು ಅಧ್ಯಕ್ಷ ಕೆ.ಬಿ. ಗಿರೀಶ್, ಚನ್ನಗಿರಿ ತಾಲೂಕು ಅಧ್ಯಕ್ಷ ಎ.ಎಸ್. ಬಸವರಾಜಪ್ಪ, ಜಗಳೂರು ತಾಲೂಕು ಅಧ್ಯಕ್ಷ ಎಸ್. ಬಂಗಾರಪ್ಪ, ಹೊನ್ನಾಳಿ ತಾಲೂಕು ಅಧ್ಯಕ್ಷ ಬಿ.ಆರ್. ಷಣ್ಮುಖಪ್ಪ ಇತರರು ಇದ್ದರು.
    ಜಿಲ್ಲಾ ಸಂಘದ ಮಾಧ್ಯಮ ಸಲಹೆಗಾರ ಎನ್.ಬಿ. ಶಿವಮೂರ್ತಿ ಸ್ವಾಗತಿಸಿದರು. ಗೌರವಾಧ್ಯಕ್ಷ ಎಚ್.ತಿಪ್ಪಣ್ಣ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಾಧ್ಯಕ್ಷ ಎಚ್.ಎಸ್. ಹಾಲೇಶ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts