More

    ಮಾ.1ರಿಂದ ಪಿಯುಸಿ ಪರೀಕ್ಷೆ

    ಚಿತ್ರದುರ್ಗ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮಾರ್ಚ್ 1ರಿಂದ 22ರ ವರೆಗೆ ನಡೆಯಲಿದ್ದು, ಯಾವುದೇ ಲೋಪಗಳಿಗೆ ಅವಕಾಶವಿಲ್ಲದಂತೆ ಪರೀಕ್ಷೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
    ಡಿಸಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಪರೀಕ್ಷೆಯ ಎಲ್ಲ ಕೊಠಡಿಗಳಲ್ಲಿ ಗಾಳಿ, ಬೆಳಕು, ಆಸನ, ಶುದ್ಧ ಕುಡಿಯುವ ನೀರು ಹಾಗೂ ಕೇಂದ್ರದಲ್ಲಿ ಶೌಚಗೃಹ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂದರು.
    ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಬೇಕು. ಜಿಲ್ಲೆಯ 24 ಪರೀಕ್ಷಾ ಕೇಂದ್ರಗಳಿಗೆ ಎ, ಬಿ ದರ್ಜೆ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಬೇಕು. ಪರೀಕ್ಷೆಯ ದಿನಗಳಂದು ಕೇಂದ್ರಗಳ ಸುತ್ತಮುತ್ತಲಿನ ಝೆರಾಕ್ಸ್, ಕಂಪ್ಯೂಟರ್ ಅಂಗಡಿಗಳನ್ನು ಮುಚ್ಚಿಸಬೇಕು ಎಂದು ಸೂಚಿಸಿದ ಅವರು, ಕೇಂದ್ರದ ಸುತ್ತ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಹೇಳಿದರು.
    ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್‌ಫೋನ್ ಸೇರಿ ಯಾವುದೇ ಬಗೆಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಉಪನ್ಯಾಸಕರು, ಕಚೇರಿ ಸಿಬ್ಬಂದಿ ಕೂಡ ಪರೀಕ್ಷೆ ಅವಧಿ ಮೊಬೈಲ್ ತರುವಂತಿಲ್ಲ. ಇಂತಹ ಪ್ರಕರಣ ಕಂಡುಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು. ಮುಖ್ಯಅಧೀಕ್ಷಕರು ಬೇಸಿಕ್ ಸೆಟ್ ಉಪಯೋಗಿಸಬಹುದಾಗಿದೆ ಎಂದರು.
    ಪ್ರಶ್ನೆ ಪತ್ರಿಕೆ ಕವರ್ ತೆರೆಯುವಾಗ ಹಾಗೂ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡುವಾಗ ಸಿಸಿ ಟಿವಿ ಕ್ಯಾಮರಾಗಳಡಿ ಕಾರ್ಯನಿರ್ವಹಿಸಬೇಕು ಮತ್ತು ಎಲ್ಲ ಕೊಠಡಿಗಳಿಗೂ ಕ್ಯಾಮರಾ ಅಳವಡಿಸಬೇಕು. ಪರೀಕ್ಷಾ ಕಾರ‌್ಯದಲ್ಲಿ ಲೋಪಗಳಾದರೆ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಖಚಿತ ಎಂದು ಎಚ್ಚರಿಸಿದರು.
    ಕೆಎಸ್ ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್ ಮಾತನಾಡಿ, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ವತಿಯಿಂದ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಮಾರ್ಚ್ 1ರಿಂದ 22ರ ವರೆಗೆ, ಪರೀಕ್ಷಾ ದಿನಾಂಕಗಳಂದು ಪ್ರವೇಶ ಪತ್ರ ತೋರಿಸಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಬಹುದು ಎಂದರು.
    ತಹಸೀಲ್ದಾರ್‌ಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.

    *ಕೋಟ್
    ಜಿಲ್ಲೆಯಲ್ಲಿ 15,622 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎಲ್ಲ ಕೇಂದ್ರಗಳಿಗೂ ಪೊಲೀಸ್ ಬಂದೋಬಸ್ತ್ ಅಗತ್ಯವಿದೆ. ಜಿಲ್ಲಾ ಖಜಾನೆಯಿಂದ ಪಶ್ನೆಪತ್ರಿಕೆಗಳನ್ನು ಕೊಂಡ್ಯೊಯುವ ಮತ್ತು ವಿತರಿಸುವ ತಂಡಕ್ಕೆ ಪೊಲೀಸ್ ರಕ್ಷಣೆ ಬೇಕಿದೆ. ಪ್ರಶ್ನೆಪತ್ರಿಕೆಗಳಿರುವ ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು. 14242 ಹೊಸ, 978 ಪುನರಾವರ್ತಿತ ಹಾಗೂ 402 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
    ಆರ್.ಪುಟ್ಟಸ್ವಾಮಿ, ಪಿಯು ಡಿಡಿ


    ತಾಲೂಕು-ಪರೀಕ್ಷಾ ಕೇಂದ್ರಗಳ ಸಂಖ್ಯೆ-ವಿದ್ಯಾರ್ಥಿಗಳ ಸಂಖ್ಯೆ
    ಚಿತ್ರದುರ್ಗ-9-6129
    ಚಳ್ಳಕೆರೆ-3-2917
    ಹಿರಿಯೂರು-4-1893
    ಹೊಸದುರ್ಗ-4-2172
    ಮೊಳಕಾಲ್ಮೂರು-2-1027
    ಹೊಳಲ್ಕೆರೆ-2-1484

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts