More

    ಮಾಹಿತಿ ಇಲ್ಲದೆ ಕೈತಪ್ಪುತ್ತಿದೆ ಪರಿಹಾರ

    ಬೇತಮಂಗಲ: ಕರೊನಾ ಎರಡನೇ ಅಲೆ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ನೀಡುವುದಾಗಿ ೋಷಿಸಿದೆಯಾದರೂ ಯಾರಿಗೆ ಕೊಡಬೇಕು, ಹೇಗೆ ಕೊಡಬೇಕು ಎನ್ನುವ ಸ್ಪಷ್ಟ ಮಾಹಿತಿ ಇಲ್ಲದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗೊಂದಲಕ್ಕೀಡಾಗಿದ್ದರಿಂದ ಫಲಾನುಭವಿಗಳು ಪರಿಹಾರ ಹಣ ಪಡೆಯಲು ಸಾಧ್ಯವಾಗಿಲ್ಲ.

    ಸಂಕಷ್ಟದಲ್ಲಿರುವ ರೈತರ ನೆರವಿಗಾಗಿ ಒಟ್ಟು 500 ಕೋಟಿ ರೂ. ಪರಿಹಾರದಲ್ಲಿ 130 ಕೋಟಿ ರೂ. ಗಳನ್ನು ತೋಟಗಾರಿಕೆ ಬೆಳೆ ಬೆಳೆದ ರೈತರಿಗೆ 5 ಹೆಕ್ಟೇರ್‌ವರೆಗೆ ತಲಾ 10 ಸಾವಿರ ರೂ.ನಂತೆ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದರು. ಆದರೆ ಪರಿಹಾರ ಹಣ ಸಮರ್ಪಕವಾಗಿ ವಿತರಣೆಯಾಗಿಲ್ಲ.

    ಅರ್ಜಿ ಹಾಕುವಂತಿಲ್ಲ: ಪರಿಹಾರ ಹಣ ಎಲ್ಲ ವರ್ಗದವರೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆದರೆ ರೈತರಿಗೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗಿದೆಯಾದರೂ ಅರ್ಹರು ಪರಿಹಾರ ಹಣ ಪಡೆಯಲು ಹಲವು ನಿಯಮ ನೀಡಿದ್ದರಿಂದ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ.

    ಯಾರಿಗೆ ಸಿಗುತ್ತೆ ಪರಿಹಾರ: ರೈತರು ಭೂಮಿಯ ಪಹಣಿ, ಆಧಾರ್‌ಕಾರ್ಡ್, ಬ್ಯಾಂಕ್ ಖಾತೆ ಮತ್ತು ಫೋಟೋ ನೀಡಿ ಕೃಷಿ, ತೋಟಗಾರಿಕೆ ಅಥವಾ ಸಂಬಂಧಪಟ್ಟ ಇತರ ಇಲಾಖೆಯಲ್ಲಿ ನೋಂದಣಿ ಮಾಡಿಸಿರಬೇಕು. ಬೆಳೆಯ ಮಾಹಿತಿಯನ್ನು ಬೆಳೆ ಸಮೀಕ್ಷೆಯಲ್ಲಿ ನಮೂದಿಸಿರಬೇಕು. ಬ್ಯಾಂಕ್‌ನಲ್ಲಿ ಆಧಾರ್‌ಕಾರ್ಡ್ ಅಥವಾ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು. ಇಲ್ಲದಿದ್ದರೆ ಖಾತೆಗೆ ಹಣ ಜಮಾ ಆಗುವುದಿಲ್ಲ.

    ಸಮೀಕ್ಷೆಯೇ ಮಾಡಿಲ್ಲ: ವಾರ್ಷಿಕ ಮೂರು ಬಾರಿ ಬೆಳೆ ಸಮೀಕ್ಷೆ ನಡೆಸುವ ಜವಾಬ್ದಾರಿಯನ್ನು ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಕಂದಾಯ ಇಲಾಖೆಗೆ ಸರ್ಕಾರ ನೀಡಿದ್ದು, ಜಂಟಿಯಾಗಿ ನಡೆಸಬೇಕಿದ್ದ ಬೆಳೆ ಸಮೀಕ್ಷೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಖಾಸಗಿ ಸಂಸ್ಥೆ ಅಥವಾ ನಿರುದ್ಯೋಗಿ ಯುವಕರ ಮೂಲಕ ನಡೆಸುತ್ತಾರೆ. ಖಾಸಗಿ ವ್ಯಕ್ತಿಗಳು ಜವಾಬ್ದಾರಿಯುತವಾಗಿ ಬೆಳೆ ಸಮೀಕ್ಷೆ ನಡೆಸದ ಕಾರಣ ಪ್ರತಿ ತಾಲೂಕಿನ ಸಾವಿರಾರು ರೈತರಿಗೆ ಅನ್ಯಾಯವಾಗಿದೆ.

    ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯೊಂದಿಗೆ ಜಂಟಿಯಾಗಿ ಕಂದಾಯ ಇಲಾಖೆ ಬೆಳೆ ಸಮೀಕ್ಷೆ ನಡೆಸಬೇಕು. ಆದರೆ ಇಲಾಖೆಯ ಮೇಲೆ ಸಂಪೂರ್ಣ ಹೊರೆ ಇರುವುದರಿಂದ ಖಾಸಗಿ ವ್ಯಕ್ತಿಗಳ ಮೂಲಕ ಬೆಳೆ ಸಮೀಕ್ಷೆ ನಡೆಸಿದ್ದೇವೆ. ಕೆಲವೊಮ್ಮೆ ತಾಂತ್ರಿಕ ದೋಷಗಳಿಂದ ಕೆಲ ರೈತರ ಬೆಳೆ ಸಮೀಕ್ಷೆ ಕೈತಪ್ಪಿರಬಹುದು. ಹಾಗಂತ ಇಲಾಖೆಯನ್ನೇ ಹೊಣೆ ಮಾಡುವುದು ಸರಿಯಲ್ಲ.
    ಸುಜಾತಾ, ತಹಸೀಲ್ದಾರ್, ಕೆಜಿಎಫ್ ತಾಲೂಕು

    ಬೆಳೆ ಸಮೀಕ್ಷೆ ಸಂಪೂರ್ಣ ಜವಾಬ್ದಾರಿ ನಮ್ಮದಲ್ಲ. ಸಮೀಕ್ಷೆ ನಡೆದ ಮೇಲೆ ಅದರ ದಾಖಲೆ ನಮಗೆ ಬರುತ್ತದೆ. ನಂತರ ಅದನ್ನು ಪರಿಶೀಲಿಸಿ ಅಗತ್ಯ ದಾಖಲೆ ಅಳವಡಿಸಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳಿಗೆ ಕಳಿಸುತ್ತೇವೆ. 2020-21ನೇ ಸಾಲಿನ ಬೇಸಿಗೆಯ ಬೆಳೆ ಸಮೀಕ್ಷೆ ಡೇಟಾ ನಮಗೆ ಬಂದಿಲ್ಲ. ತೋಟಗಾರಿಕೆ ಇಲಾಖೆಯವರು ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ಪಟ್ಟಿ ತಯಾರಿಸಿರಬಹುದು.
    ಮಹಮದ್ ಇಶಾಕ್, ಬೆಳೆ ಸಮೀಕ್ಷೆ ಸಾಂಖ್ಯಿಕ ಅಧಿಕಾರಿ, ಕಂದಾಯ ಇಲಾಖೆ

    ಕೆಜಿಎಫ್ ಮತ್ತು ಬಂಗಾರಪೇಟೆ ತಾಲೂಕಿನಲ್ಲಿ ಬೇಸಿಗೆಯಲ್ಲಿ ಸುಮಾರು 6 ಸಾವಿರ ರೈತರು ತೋಟಗಾರಿಕೆ ಬೆಳೆ ಬೆಳೆದಿದ್ದು, 2,300 ಮಂದಿಗೆ ಮಾತ್ರ ಪರಿಹಾರ ಸಿಗಲಿದೆ. ಬೆಳೆ ಸಮೀಕ್ಷೆ ನಡೆಸಿರುವ ಕಂದಾಯ ಇಲಾಖೆಯವರು ನೀಡಿರುವ ಪಟ್ಟಿಯನ್ನು ಸರ್ಕಾರ ನಮಗೆ ನೀಡಿದೆ. ಸರ್ಕಾರ ಕಳುಹಿಸಿರುವ ಪಟ್ಟಿಯನ್ನೇ ನಾವು ದಾಖಲೆ ಸಿದ್ಧಪಡಿಸಿ ಕಳಿಸಿದ್ದೇವೆ.
    ವಿಶ್ವನಾಥ್, ತೋಟಗಾರಿಕೆ ಅಧಿಕಾರಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts