More

    ಮಾಹಿತಿಯೊಂದಿಗೆ ಸಭೆಗೆ ಬನ್ನಿ

    ರಾಯಬಾಗ: ಸಭೆಗೆ ಬರುವ ಅಧಿಕಾರಿಗಳು ಸಂಪೂರ್ಣ ಮಾಹಿತಿ ಹಾಗೂ ದಾಖಲಾತಿಗಳೊಂದಿಗೆ ಆಗಮಿಸಬೇಕು ಎಂದು ಶಾಸಕ ಪಿ.ರಾಜೀವ ಖಡಕ್ ಸೂಚನೆ ನೀಡಿದರು. ಪಟ್ಟಣದ ತಾಪಂ ಸಭಾಭನವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಯಾವುದೆ ಮಾಹಿತಿ ಇಲ್ಲದೆ ಬರುವ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲು ಸಭೆಗೆ ಅಧಿಕಾರವಿದೆ ಎಂದು ತಿಳಿಸಿದರು.

    ಜಾನುವಾರುಗಳಿಗೆ ಹರಡುತ್ತಿರುವ ಚರ್ಮಗಂಟು ರೋಗ ಬಗ್ಗೆ ಮಾಹಿತಿ ನೀಡಲು ತಡಬಡಾಯಿಸಿದ ಪಶುಸಂಗೋಪನೆ ಇಲಾಖೆ ಅಧಿಕಾರಿ ಡಾ. ರಾಮು ರಾಠೋಡ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. 373 ಜಾನುವಾರುಗಳು ಚರ್ಮಗಂಟು ರೋಗದಿಂದ ಮೃತಪಟ್ಟಿದ್ದು, ಇಲ್ಲಿಯವರೆಗೆ ಎರಡು ಜಾನುವಾರು ಮಾಲೀಕರಿಗೆ ಮಾತ್ರ ಪರಿಹಾರ ಬಂದಿದೆ ಎಂದು ಅಧಿಕಾರಿ ಉತ್ತರಿಸಿದರು.
    ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ಸಸಿ ನೆಡಲು ಲಕ್ಷಾಂತರ ರೂ. ಖರ್ಚು ಮಾಡಿದರೂ, ಇಲ್ಲಿಯವರೆಗೆ ತಾಲೂಕಿನಲ್ಲಿ ಅರಣ್ಯ ಕ್ಷೇತ್ರ ಅಭಿವೃದ್ಧಿ ಹೊಂದಿಲ್ಲ. ಅರಣ್ಯ ಇಲಾಖೆಗೆ ಬರುವ ಹಣ ಪೋಲಾಗುತ್ತಿದ್ದು, ಸೋಲಾರ್ ಪಂಪ್‌ಸೆಟ್ ಮತ್ತು ಹನಿ ನೀರಾವರಿ ಮಾಡುವ ಮೂಲಕ ಸಸಿ ಬೆಳೆಸಲು ಕ್ರಮಕೈಗೊಳ್ಳಬೇಕು ಎಂದರು.

    ತಾಪಂಗೆ 3.50 ಕೋಟಿ ರೂ. ಅನುದಾನ ಮಂಜೂರು ಆಗಿದ್ದರೂ ಇಲ್ಲಿಯವರೆಗೆ ಒಂದು ಕಾಮಗಾರಿ ಪ್ರಾರಂಭಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಪಿ.ರಾಜೀವ, ಕೂಡಲೆ ಅನುದಾನ ಬಳಕೆ ಮಾಡಿಕೊಂಡು ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಿದರು.

    ಶಾಸಕ ಡಿ.ಎಂ.ಐಹೊಳೆ, ತಾಪಂ ಇಒ ಡಾ. ಸುರೇಶ ಕದ್ದು, ಸಿಪಿಐ ಎಚ್.ಡಿ.ಮುಲ್ಲಾ, ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಎಂ.ಪಾಟೀಲ, ಸಿಡಿಪಿಒ ಸಂತೋಷಕುಮಾರ ಕಾಂಬಳೆ, ಆರ್.ಬಿ.ಮನವಡ್ಡರ, ಎಸ್.ಎಸ್.ಪಾಟೀಲ, ಎಚ್.ವೈ.ಸುಳ್ಳನ್ನವರ, ವಿನೋದ ಮಾವರಕರ, ಎಂ.ಪಿ.ಜಿರಗ್ಯಾಳ, ಎಸ್.ಜಿ.ವಲ್ಯಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts