More

    ಮಾಸ್ಟರ್ ಪ್ಲ್ಯಾನ್​ಗೆ ಜಿಐಎಸ್ ಸ್ಪರ್ಶ

    ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಮಾಸ್ಪರ್ ಪ್ಲ್ಯಾನ್​ಗೆ ಜಿಐಎಸ್ (ಜಿಯೋಗ್ರಾಫಿಕ್ ಇನ್ಪಮೇಶನ್ ಸಿಸ್ಟಂ- ಭೌಗೋಳಿಕ ಮಾಹಿತಿ ವ್ಯವಸ್ಥೆ)ಯ ಸ್ಪರ್ಶ ನೀಡುವ ಮೂಲಕ ಬೆರಳ ತುದಿಯಲ್ಲಿ ಮಾಹಿತಿ ಸಿಗುವ ವ್ಯವಸ್ಥೆ ಮಾಡಲಾಗುತ್ತಿದೆ.

    ಆಧುನಿಕ ನಗರಗಳ ಮೂಲ ಸೌಕರ್ಯಗಳಾದ ನೀರಿನ ಪೈಪ್, ಒಳಚರಂಡಿ ವ್ಯವಸ್ಥೆ, ಭೂಗತ ವಿದ್ಯುತ್ ಲೈನ್, ಘನತ್ಯಾಜ್ಯ ನಿರ್ವಹಣೆ, ನಗರ ಸಾರಿಗೆ ವ್ಯವಸ್ಥೆಯ ಸ್ವರೂಪ ಹೀಗೆ ಯಾವುದು ಎಲ್ಲಿದೆ, ಯಾವ ಸ್ಥಿತಿಯಲ್ಲಿದೆ ಎಂಬಿತ್ಯಾದಿ ಎಲ್ಲ ಮಾಹಿತಿಯನ್ನು ಕಂಪ್ಯೂಟರ್​ನ ಮೌಸ್ ಕ್ಲಿಕ್ಕಿಸುವ ಮೂಲಕ ನೋಡಬಹುದಾದ ವ್ಯವಸ್ಥೆ ಇದಾಗಿದೆ.

    ಈಗಿರುವ ಮೂಲ ಸೌಲಭ್ಯಗಳ ವ್ಯವಸ್ಥೆಯನ್ನು ಇನ್ನಷ್ಟು ಉನ್ನತೀಕರಿಸುವ ಜೊತೆಗೆ ಅವುಗಳನ್ನು ಬಲಿಷ್ಠಗೊಳಿಸಲು ನೆರವಾಗುವ ಜಿಐಎಸ್ ಸಮೀಕ್ಷೆ ಇದೀಗ ಆರಂಭವಾಗಿದ್ದು, ಇ-ಜಿಐಎಸ್ ಎನ್ನುವ ಖಾಸಗಿ ಕಂಪನಿ ಸಮೀಕ್ಷೆ ಕಾರ್ಯ ಕೈಗೊಂಡಿದೆ.

    ಕಳೆದೊಂದು ತಿಂಗಳಲ್ಲಿ ಈಗಿರುವ (ಎಕ್ಸಿಸ್ಟಿಂಗ್) ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಅಧ್ಯಯನ ಮಾಡಿರುವ ಸಂಸ್ಥೆ, ಅದರ ಸಮಗ್ರ ವಿವರವನ್ನು ನವನಗರದ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶುಕ್ರವಾರ ಕರೆದಿದ್ದ ಸಭೆಯಲ್ಲಿ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಸ್ತುತ ಪಡಿಸಿತು.

    ಜಿಐಎಸ್ ಕುರಿತ ಪ್ರಾತ್ಯಕ್ಷಿಕೆ ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಹಾಗೂ ಇತರ ಸದಸ್ಯರು ಅನೇಕ ಸಲಹೆ ಸೂಚನೆಗಳನ್ನು ನೀಡಿದರು.

    ಸುಸ್ಥಿರ ಅಭಿವೃದ್ಧಿ: ಪ್ರಾತ್ಯಕ್ಷಿಕೆ ನೀಡಿದ ಇ-ಜಿಐಎಸ್ ಸಂಸ್ಥೆಯ ನಗರ ಯೋಜನಾ ಸಲಹೆಗಾರ ನಾರಾಯಣ ಶಾಸ್ತ್ರಿ, ಉತ್ತಮ ಜೀವನಮಟ್ಟ, ಆರ್ಥಿಕ ಚೇತರಿಕೆ ಹಾಗೂ ಸುಸ್ಥಿರ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ಅವಳಿ ನಗರದ ಜಿ.ಐ.ಎಸ್ ಆಧಾರಿತ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗುತ್ತಿದೆ. ಕೇಂದ್ರ ಸರ್ಕಾರ ಪ್ರಾಯೋಜಿತ ಅಮೃತ ಯೋಜನೆಯ ಅನುಸಾರ ಜಿಐಎಸ್ ಆಧಾರಿತ ಮಾಸ್ಟರ್ ಪ್ಲ್ಯಾನ್​ವುಾಡುವುದು ಕಡ್ಡಾಯವಾಗಿದೆ ಎಂದರು.

    ಮೆಟ್ರೋಪಾಲಿಟನ್ ಸಿಟಿ: ಜನಗಣತಿ ಆಧರಿಸಿ ಅವಳಿ ನಗರ ಮುಂದಿನ ದಿನಗಳಲ್ಲಿ 10 ಲಕ್ಷ ಜನಸಂಖ್ಯೆ ದಾಟುವ ಮೂಲಕ ಮೆಟೊ್ರೕಪಾಲಿಟನ್ ಸಿಟಿ ದರ್ಜೆ ಪಡೆಯಲಿದೆ. ಕಳೆದ 10 ವರ್ಷಗಳಲ್ಲಿ ನಗರದ ಬೆಳವಣಿಗೆ ದರ ಶೇ. 20ರಷ್ಟಿದೆ. ಇದು ಮಧ್ಯಮ ಮಟ್ಟದ ನಗರ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಅವರು ವಿವರಿಸಿದರು.

    ರಾಷ್ಟ್ರೀಯ ಮಾನದಂಡದ ಪ್ರಕಾರ ಪ್ರತಿದಿನ ಒಬ್ಬ ವ್ಯಕ್ತಿಗೆ ಸರಬರಾಜು ಮಾಡಬೇಕಾದ ನೀರಿನ ಪ್ರಮಾಣ 110 ಲೀಟರ್. ಅವಳಿ ನಗರದಲ್ಲಿ ಈ ಪ್ರಮಾಣ 78 ಲೀಟರ್​ನಷ್ಟಿದೆ. ಕೇವಲ ಶೇ. 50ರಷ್ಟು ಮನೆಗಳು ಒಳಚರಂಡಿ ಜಾಲಕ್ಕೆ ಅಳವಡಿಕೆಯಾಗಿವೆ. ಕುಡಿಯುವ ನೀರು, ಯುಜಿಡಿ, ಘನ ತ್ಯಾಜ್ಯ ನಿರ್ವಹಣೆ, ಹಸಿರೀಕರಣಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾಸ್ಟರ್ ಪ್ಲ್ಯಾನ್​ರೂಪಿಸಲಾಗುವುದು. ಸ್ಮಾರ್ಟ್ ಸಿಟಿ, ಪಿಎಂ ಆವಾಸ್ ಮುಂತಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಸಹ ನಗರದಲ್ಲಿ ಅನುಷ್ಠಾನವಾಗುತ್ತಿವೆ. ಇವೆಲ್ಲಕ್ಕೂ ಜಿಐಎಸ್ ಅನುಕೂಲವಾಗಲಿದೆ. ಇನ್ನಾರು ತಿಂಗಳಲ್ಲಿ ಸಮೀಕ್ಷೆ ಕಾರ್ಯ ಮುಗಿಯಲಿದೆ ಎಂದು ಹೇಳಿದರು.

    ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಸಿ.ಎಂ. ನಿಂಬಣ್ಣವರ್, ಅಮೃತ ದೇಸಾಯಿ, ಕುಸುಮಾವತಿ ಶಿವಳ್ಳಿ, ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಪ್ರದೀಪ್ ಶೆಟ್ಟರ್, ಪ್ರಾಧಿಕಾರ ಆಯುಕ್ತ ವಿನಾಯಕ ಪಾಲನಕರ, ಹುಡಾ ಸದಸ್ಯರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    ಜನರೊಂದಿಗೆ ರ್ಚಚಿಸಬೇಕು: ಜನರ ಸಹಭಾಗಿತ್ವ ಇಲ್ಲದಿದ್ದರೆ ಯಾವುದೇ ಯೋಜನೆ ಸಫಲವಾಗುವುದಿಲ್ಲ. ಹಾಗಾಗಿ ಈ ಜಿಐಎಸ್ ಸರ್ವೆ ಪೂರ್ಣಗೊಳಿಸುವ ದಿಸೆಯಲ್ಲಿ ಸಾರ್ವಜನಿಕರೊಂದಿಗೆ ರ್ಚಚಿಸಬೇಕು. ಈ ಬಗ್ಗೆ ಜನಾಭಿಪ್ರಾಯ ಸಂಗ್ರಹ ಕೂಡ ಅವಶ್ಯ. ಜನರ ಸಲಹೆ ಸೂಚನೆ ಪಡೆದು ಮುಂದಡಿ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

    ಎಲ್ಲ ಆಸ್ತಿಗಳು ತೆರಿಗೆ ವ್ಯಾಪ್ತಿಗೆ: ಒಂದೊಮ್ಮೆ ಜಿಐಎಸ್ ನಿಖರವಾಗಿ ಮಾಡಿ ಪ್ರತಿಯೊಂದು ಆಸ್ತಿ, ನಿವೇಶನ, ಮನೆಗಳ ದಾಖಲೀಕರಣವಾದರೆ, ಅವಳಿ ನಗರದ ಯಾವುದೇ ಆಸ್ತಿ ತೆರಿಗೆಯಿಂದ ತಪ್ಪಿಸಿಕೊಳ್ಳದಂತೆ ಮಾಡಿ ಅದರ ವ್ಯಾಪ್ತಿಗೆ ಒಳಪಡಿಸಬಹುದು. ಈ ಅವಕಾಶ ನಿಮ್ಮ ಜಿಐಎಸ್ ಸರ್ವೆಯಲ್ಲಿ ಇದೆಯೇ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಕೇಳಿದರು. ಪ್ರಸ್ತುತ ಸರ್ವೆಯಲ್ಲಿ ಅಷ್ಟೊಂದು ನಿಖರ ಮಾಹಿತಿ ಸಿಗುವುದಿಲ್ಲ. ಅದಕ್ಕೆ ಪ್ರತ್ಯೇಕವಾಗಿ ಸರ್ವೆ ಕೈಗೊಳ್ಳಬೇಕಾಗುತ್ತದೆ. ಸಮಯವೂ ಬೇಕು ಎಂದು ನಾರಾಯಣಶಾಸ್ತ್ರಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಆಯುಕ್ತರು ಹೇಳಿದಂತೆ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು. ಅದಕ್ಕಾಗಿ ಇನ್ನಷ್ಟು ಸಮಯ ತೆಗೆದುಕೊಳ್ಳಿ, ಬೇಕಿದ್ದರೆ ಪ್ರತ್ಯೇಕವಾಗಿ ಸರ್ವೆ ಮಾಡಿ ಕೊಡಿ, ಇದರ ಜವಾಬ್ದಾರಿ ನೀವೇ ವಹಿಸಿಕೊಳ್ಳಿ ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts