More

    ಮಾವಿಲ್ಲದೆ ಕರಗಿ ಹೋಯ್ತು ಮಾಸ

    ನಾಗರಾಜ ಮಂಜಗುಣಿ ಅಂಕೋಲಾ: ಬೇಸಿಗೆ ಬಂತೆಂದರೆ ಸಾಕು ಅಂಕೋಲಾದ ರಸ್ತೆಗಳೆಲ್ಲ ಮಾವಿನ ಹಣ್ಣಿನ ಘಮದಲ್ಲಿ ತುಂಬಿರುತ್ತಿದ್ದವು. ಆದರೆ, ಈ ಬಾರಿ ಅಂಥ ಯಾವುದೇ ಪರಿಸ್ಥಿತಿ ಇಲ್ಲ. ಆದರೆ, ಇದಕ್ಕೆ ಕರೊನಾ ಕಾರಣವಲ್ಲ.! ಹವಾಮಾನ ವೈಪರೀತ್ಯದಿಂದ ಈ ಬಾರಿ ಅಂಕೋಲಾದ ಮಾವಿನ ಬೆಳೆಯಲ್ಲಿ ಭಾರಿ ಕುಸಿತವಾಗಿದೆ. ಬೆಲೆ ಹೆಚ್ಚಿದ್ದರೂ ಬೆಳೆಯೇ ಇಲ್ಲದಂತಾಗಿದೆ.

    ಅಂಕೋಲಾದಲ್ಲಿ ಒಟ್ಟು 2433 ಹೆಕ್ಟೇರ್ ಪ್ರದೇಶದಲ್ಲಿ ಕರಿ ಈಶಾಡು, ರತ್ನಾಗಿರಿ ಆಪೋಸು, ನೀಲಂ, ತೋತಾಪುರಿ ಮಲ್ಲಿಕಾ ಮುಂತಾದ ಮಾವಿನ ಬೆಳೆಗಳನ್ನು ಬೆಳೆಯಲಾಗುತ್ತದೆ. ಸರಾಸರಿ 4140 ಮೆಟ್ರಿಕ್ ಟನ್ ಮಾವು ಬೆಳೆಯುತ್ತಿತ್ತು. ಈ ಬಾರಿ 2 ಸಾವಿರ ಮೆಟ್ರಿಕ್ ಟನ್​ನಷ್ಟೂ ಬೆಳೆ ಸಿಗುವುದು ಅನುಮಾನವಾಗಿದೆ.

    ಪ್ರತಿ ವರ್ಷ ಮಾರ್ಚ್​ನಿಂದ ಜೂನ್​ವರೆಗೂ ಅಂಕೋಲಾದಿಂದ ಹೇರಳವಾಗಿ ಮಾವು ಹೊರಗಿನ ಮಾರುಕಟ್ಟೆಗಳಿಗೆ ತೆರಳುತ್ತಿತ್ತು. ಅಲ್ಲದೆ, ಕಾರವಾರ ಹಾಗೂ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಳಿತು ನೂರಾರು ಜನ ರೈತರೇ ಹಣ್ಣು ಮಾರಾಟ ಮಾಡುತ್ತಿದ್ದರು. ಶಿರೂರು ರೈಲ್ವೆ ಬ್ರಿಜ್ ಸಮೀಪ ದೊಡ್ಡ ಮಾವಿನ ಮಾರುಕಟ್ಟೆ ಇರುತ್ತಿತ್ತು. ಒಟ್ಟಾರೆ, ಬೇಸಿಗೆ ಬಂತು ಎಂದರೆ ಈ ಭಾಗ ಮಾವಿನ ಮಯವಾಗಿಬಿಡುತ್ತಿತ್ತು. ಡಿಸೆಂಬರ್ ಹೊತ್ತಿಗೆ ಹೂವು ಬಿಡುತ್ತಿದ್ದ ಮಾವಿನ ಮರಗಳು ಇದುವರೆಗೂ ಹೂವು ಬಿಟ್ಟಿಲ್ಲ. ಜನವರಿಯಲ್ಲಿ ಅಲ್ಲೊಂದು ಇಲ್ಲೊಂದು ಹೂವು ಕಾಣಿಸಿಕೊಂಡರೂ ಅದು ಸಂಪೂರ್ಣವಾಗಿ ಕಾಯಿಯಾಗಿಲ್ಲ.

    ಮಾರ್ಚ್​ನಿಂದಲೇ ಪ್ರಾರಂಭವಾಗುತ್ತಿದ್ದ ಮಾವಿನ ಮಾರಾಟ ಏಪ್ರಿಲ್ 15 ರ ನಂತರ ನಿಧಾನವಾಗಿ ಶುರುವಾಗಲಿದೆ. ಇತ್ತೀಚೆಗೆ ಅಲ್ಪಸ್ವಲ್ಪ ಮಾವು ಮಾರುಕಟ್ಟೆಗೆ ಬಂದಿದೆ. ಪ್ರತಿ ವರ್ಷ ಒಂದು ಡಜನ್(12 ಹಣ್ಣುಗಳಿಗೆ) 300 ರಿಂದ 400 ರೂ.ಗೆ ಮಾರಾಟವಾಗುತ್ತಿದ್ದ ಕರಿ ಈಶಾಡಿನ ಬೆಲೆ ಈಗ 700 ರೂ.ಗೆ ಹೆಚ್ಚಿದೆ. ಮಾವಿಗೆ ಬೆಲೆ ಇದ್ದರೂ ಬೆಳೆ ಇಲ್ಲದಂತಾಗಿದೆ.

    ಗೇರಿಗೂ ಬೆಲೆ ಇಲ್ಲ: ಗೇರು ಬೀಜದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಅಂಕೋಲಾ ತಾಲೂಕಿನಲ್ಲಿ ಸರಾಸರಿ 317 ಟನ್ ಗೋಡಂಬಿ ಬೆಳೆಯಲಾಗುತ್ತಿತ್ತು. ವ್ಯಾಪಾರಸ್ಥರು ಮನೆಗಳಿಗೆ ಬಂದು ಖರೀದಿ ಮಾಡುತ್ತಿದ್ದರು. ಆದರೆ, ಹವಾಮಾನ ವೈಪರೀತ್ಯದಿಂದ ಗೇರು ಬೆಳೆಯೂ ಮಾವಿನಂತೆ ನೆಲಕಚ್ಚಿದೆ. ಅಲ್ಲದೆ, ಪ್ರತಿ ಕೆಜಿಗೆ ಸರಾಸರಿ 130 ರೂ.ಗೆ ಮಾರಾಟವಾಗುತ್ತಿದ್ದ ಗೇರು ಬೀಜ ಈ ಬಾರಿ 70 ರೂ.ಗೆ ಇಳಿದಿದೆ. ಇದರಿಂದ ಖರೀದಿದಾರರು ಮನೆಗೆ ಬರುವುದನ್ನೇ ಬಿಟ್ಟಿದ್ದಾರೆ.

    ಬೇಸಿಗೆಯಲ್ಲಿ ಮಾವು ಗೇರು ಈ ಭಾಗದ ಜನರ ಪ್ರಮುಖ ಬೆಳೆಯಾಗುತ್ತಿತ್ತು. ಅದರಿಂದ ಕೈಗೆ ಒಂದಿಷ್ಟು ಕಾಸು ಬರುತ್ತಿತ್ತು. ಈ ಬಾರಿ ಎರಡೂ ಇಲ್ಲ. ಮೇಲಿಂದ ಕರೊನಾ ಲಾಕ್​ಡೌನ್ ಬೇರೆ ಆತಂಕ ಮೂಡಿಸಿದೆ. > ರಮೇಶ ಗೌಡ ಮಾವಿನ ಬೆಳೆಗಾರ, ಅಂಕೋಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts