More

    ಮಾವಿನ ತವರಲ್ಲಿ ಡ್ರ್ಯಾಗನ್ ಫ್ರೂಟ್

    ಕೋಲಾರ: ಮಾವಿನ ತವರೂರು ಶ್ರೀನಿವಾಸಪುರ ತಾಲೂಕಿನ ಕಾಡದೇವಂಡಹಳ್ಳಿಯ ರೈತ ಧನಂಜಯ ಎಂಬುವವರು ವಿದೇಶಿ ಮೂಲದ ಡ್ರ್ಯಾಗನ್ ಫ್ರೂಟ್ ಬೆಳೆದು ಗಮನ ಸೆಳೆದಿದ್ದಾರೆ. ಮಾವಿನ ಮಡಿಲಿನಲ್ಲಿದ್ದರೂ ರೇಷ್ಮೆ ಗೂಡು ಬೆಳೆಯುವ ಮೂಲಕ ಡಿ.ಧನಂಜಯ ಗೌಡ ಬದುಕು ಕಟ್ಟಿಕೊಂಡಿದ್ದರು. ಆಗಾಗ ಗೂಡು ಧಾರಣೆ ಕುಸಿತದ ಪರಿಣಾಮ ರೇಷ್ಮೆ ಕೃಷಿಯಿಂದ ರಾಗಿ ಕೃಷಿಗೆ ಹೊರಳಿದರು. 2 ಎಕರೆಯಲ್ಲಿ ರಾಗಿ ಬೆಳೆದರೆ ಇಡೀ ಕುಟುಂಬಕ್ಕೆ ಎರಡು ವರ್ಷಕ್ಕಾಗುವಷ್ಟು ಇಳುವರಿ ಬರುತ್ತಿತ್ತು. ರಾಗಿ ಮಾರಾಟ ಮಾಡಿದರೂ ಲಾಭದಾಯಕವಾಗಿ ಕಾಣಲಿಲ್ಲ.

    ಹೀಗಾಗಿ ಒಂದೂವರೆ ವರ್ಷದ ಹಿಂದೆ ಡ್ರ್ಯಾಗನ್ ಫ್ರೂಟ್ ಬೆಳೆಯುವ ಮನಸ್ಸು ಮಾಡಿದರು. ಅಣ್ಣನ ಮಗ, ಸಾಫ್ಟ್‌ವೇರ್ ಉದ್ಯೋಗಿ ಚಲಪತಿ ಅಗತ್ಯವಿರುವಷ್ಟು ಡ್ರಾೃಗನ್ ಫ್ರೂಟ್ ಸಸಿ ಒದಗಿಸಿದರು. ಒಂದೂವರೆ ಅಡಿಯ ಪ್ರತಿ ಸಸಿಗೆ 90 ರೂ. ನಂತೆ 2000 ಸಸಿಯನ್ನು ಕಲ್ಲು ಕಂಬದ ಕೂಚಿಗೆ ನಾಲ್ಕು ಸಸಿಗಳಂತೆ ನಾಟಿ ಮಾಡಿದ್ದಾರೆ.

    ಎಕರೆಗೆ 8ರಿಂದ 10 ಲಕ್ಷ ರೂ. ಖರ್ಚು ಮಾಡಿದ್ದು, ಬೇಸಿಗೆಯಲ್ಲಿ 2 ದಿನಕ್ಕೊಮ್ಮೆ ಒಂದೊಂದು ಗಿಡಕ್ಕೆ ಸುಮಾರು 6ರಿಂದ 8 ಲೀಟರ್‌ನಂತೆ ಹನಿ ನೀರಾವರಿ ಮೂಲಕ ನೀರುಣಿಸಿದ್ದಾರೆ. ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ ಇನ್ನಿತರ ಸಾವಯವ ಗೊಬ್ಬರದ ಜತೆ ರಸಗೊಬ್ಬರನ್ನೂ ನೀಡಿದ್ದಾರೆ. ಸರಿಸುಮಾರು 18 ತಿಂಗಳ ಶ್ರಮದ ಫಲ ಎಂಬಂತೆ ಡ್ರ್ಯಾಗನ್ ಫ್ರೂಟ್ ಎಂಬ ಕೆಂಪು ಸುಂದರಿ ತೋಟದಲ್ಲಿ ವಯ್ಯರ ಮಾಡುತ್ತಿದ್ದಾಳೆ.

    ಮಾರುಕಟ್ಟೆ ಹೇಗೆ: ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದ ಏಕೈಕ ರೈತ ಧನಂಜಯ. ಒಂದು ಹಣ್ಣಿನ ತೂಕ 250ರಿಂದ 500 ಗ್ರಾಂನಷ್ಟಿದ್ದು, ಈಗಾಗಲೆ ಒಂದೂವರೆ ಟನ್‌ನಷ್ಟು ಕಟಾವು ಮಾಡಿ ಮಾರಾಟ ಮಾಡಿದ್ದಾರೆ.
    ಈ ಹಣ್ಣಿಗೆ ಸ್ಥಳೀಯ ಮಾರುಕಟ್ಟೆ ಇಲ್ಲ, ರಿಲಯನ್ಸ್, ಬಿಗ್ ಬಾಸ್ಕೆಟ್, ಮೋರ್‌ನಂತಹ ಸೂಪರ್ ಮಾರ್ಕೆಟ್‌ಗಳಿಂದ ಬೇಡಿಕೆ ಇದೆ. ಕಂಪನಿಗಳು ಪ್ರತಿ ಹಣ್ಣಿಗೆ 35ರಿಂದ 40 ರೂ.ಗೆ ಖರೀದಿಸುತ್ತಿದ್ದು, ಎರಡ್ಮೂರು ದಿನಕ್ಕೊಮ್ಮೆ 300 ರಿಂದ 400 ಹಣ್ಣುಗಳಿಗೆ ಬೇಡಿಕೆ ಬರುತ್ತಿದೆ ಎನ್ನುತ್ತಾರೆ ಧನಂಜಯ.

    ನರೇಗಾ ನೆರವು: ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ನರೇಗಾದಡಿ ಹೊಸ ತೋಟ ಮಾಡಲು ಹೆಕ್ಟೇರ್‌ಗೆ ಕೂಲಿ ವೆಚ್ಚ 93,567 ರೂ. ಮತ್ತು ಸಾಮಗ್ರಿ ವೆಚ್ಚವಾಗಿ 44,813 ರೂ. ಸೇರಿ ಒಟ್ಟು 1,38,379 ರೂ. ಹಾಗೂ ಎರಡು ಮತ್ತು ಮೂರನೇ ವರ್ಷದ ತೋಟ ನಿರ್ವಹಣೆಗೆ ತಲಾ 6451 ರೂ. ನಂತೆ ಸಿಗಲಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನಡಿ ಹೆಕ್ಟೇರ್‌ಗೆ 20,000 ರೂ. ನೆರವು ಪಡೆಯಬಹುದು. ಹನಿ ನೀರಾವರಿ ಅಳವಡಿಸಿಕೊಳ್ಳಲು ಇಲಾಖೆಯಿಂದ ಸಹಾಯಧನ ಲಭ್ಯವಿದೆ.

    ಅತ್ಯಾಕರ್ಷಕ ಹಣ್ಣು: ಡ್ರ್ಯಾಗನ್ ಫ್ರೂಟ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಿದ ಹಣ್ಣು. ರೂಪ, ಆಕಾರ, ಬಣ್ಣ ಮತ್ತು ರುಚಿಯಿಂದ ಎಲ್ಲರ ಗಮನ ಸೆಳೆದಿದೆ. ಆರೇಳು ಅಡಿ ಎತ್ತರದ ಕಲ್ಲು ಅಥವಾ ಸಿಮೆಂಟ್ ಕಂಬಕ್ಕೆ ಮೈ ಹರಡಿಕೊಂಡು ಬೆಳೆಯುವ ಈ ಹಣ್ಣು ದುಬಾರಿ ಬೆಲೆಯಿಂದಾಗಿ ಜನಸಾಮಾನ್ಯರ ಕೈಗೆ ಸುಲಭವಾಗಿ ಎಟುಕದೆ ಎತ್ತರದಲ್ಲಿದ್ದರೂ ಶ್ರೀಮಂತರ ಪಾಲಿಗೆ ಅತ್ಯಾಕರ್ಷಕವಾದ ಹಣ್ಣು .

    ಈ ಹಣ್ಣು ಬೆಳೆಯಲು ಜಿಲ್ಲೆಯ ವಾತಾವರಣ ಸೂಕ್ತ. ಹೊಸದಾಗಿ ತೋಟ ಮಾಡುವವರು ನರೇಗಾ ಯೋಜನೆಯಡಿ ನೆರವು ಪಡೆಯಬಹುದು. ಧನಂಜಯ ದೊಡ್ಡ ಪ್ರಮಾಣದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದು, ನರೇಗಾ ಆಯುಕ್ತಾಲಯದ ಹಿರಿಯ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತರು ಬರೀ ಟೊಮ್ಯಾಟೊ ಬೆಳೆಯುವ ಬದಲು ಹೊಸ ಬೆಳೆ ಬೆಳೆದರೆ ಹೆಚ್ಚು ಲಾಭದಾಯಕ.
    ಎಂ. ಗಾಯತ್ರಿ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ, ಕೋಲಾರ

    ಮೊದಲ ಬಾರಿಗೆ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಉತ್ತಮ ಇಳುವರಿ ಬಂದಿದೆ. ಮಾರುಕಟ್ಟೆಯಲ್ಲಿ ಒಂದು ಹಣ್ಣಿಗೆ 85 ರೂ. ಮೇಲ್ಪಟ್ಟಿದ್ದರೂ ನಮ್ಮಿಂದ ಖರೀದಿಸುವವರು 35ರಿಂದ 40 ರೂ.ಗಳಷ್ಟೇ ನೀಡುತ್ತಾರೆ. ಹೀಗಾಗಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸಿಕ್ಕರೆ ಇನ್ನಷ್ಟು ರೈತರು ಬೆಳೆಯಬಹುದು.
    ಧನಂಜಯ, ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts