More

    ಮಾರುಗದ್ದೆಯಲ್ಲಿ ಪಾಳು ಬಿದ್ದ ದೇಗುಲ

    ವಿದ್ಯಾಧರ ಮೊರಬ ಅಂಕೋಲಾ

    ಈ ದೇವಾಲಯದಲ್ಲಿ ಯಾವುದೆ ಪೂಜೆ, ಪುನಸ್ಕಾರ ಇಲ್ಲ! ಕೆಲವು ಶಿಲಾ ಮೂರ್ತಿಗಳು ಭಗ್ನವಾದರೆ, ಇನ್ನು ಕೆಲವು ಮಣ್ಣಿನಲ್ಲಿ ಹೂತುಹೋಗಿವೆ.

    ಇದು ತಾಲೂಕಿನ ಅಗಸೂರು ಗ್ರಾಪಂ ವ್ಯಾಪ್ತಿಯ ಮಾರುಗದ್ದೆ ಗ್ರಾಮದ ಪುರಾತನ ದೇಗುಲದ ಸ್ಥಿತಿ.

    ಶಿಥಿಲಾವಸ್ಥೆಯಲ್ಲಿರುವ ದೇಗುಲಗಳು, ದಟ್ಟ ಅಡವಿಯ ತರಗೆಲೆಯ ನಡುವೆ ಮತ್ತು ಮಣ್ಣಿನಿಂದ ಹೂತು ಹೋದ ಕೆಲ ವಿಗ್ರಹಗಳು ಸ್ಪಷ್ಟವಾಗಿ ಕಾಣುವುದಿಲ್ಲವಾದರೂ ತಮ್ಮ ಗತ ಇತಿಹಾಸವನ್ನು ಸಾರಿ ಹೇಳುತ್ತವೆ. ಶಿವಲಿಂಗ, ಗಣಪತಿ, ಪಾರ್ವತಿ, ನಂದಿ, ಮಹಿಷಾಸುರ ಮರ್ದಿನಿ ಮತ್ತಿತರ ಸುಂದರ ಕೆತ್ತನೆಯ ಶಿಲ್ಪಕಲಾಕೃತಿಗಳು ಮನಸೆಳೆಯುತ್ತವೆ.

    ಸ್ಥಳೀಯರು ಹೇಳುವ ಕತೆ: ಹಿಂದಿನ ಕಾಲದಲ್ಲಿ ಈ ಗ್ರಾಮಗಳ ಮೇಲ್ಭಾಗದಲ್ಲಿ ಈಗಿನ ಅರಣ್ಯ ಪ್ರದೇಶದ ಮಧ್ಯೆ ಅಗ್ರಹಾರ (ಜನವಸತಿ ಇರುವ ಪ್ರದೇಶ) ಇತ್ತೆನ್ನುವುದು ಹಿರಿಯರ ಅಭಿಪ್ರಾಯವಾಗಿದೆ. ರಾತ್ರಿಯಿಂದ ಬೆಳಕು ಹರಿಯುವವರೆಗೆ ಪಾಂಡವರು ದೇಗುಲಗಳ ನಿರ್ವಣವನ್ನು ಮಾಡಬೇಕಿತ್ತು. ಆದರೆ, ಕೋಳಿ ಕೂಗಿದ್ದರಿಂದ ಈ ದೇಗುಲಗಳನ್ನು ಅರ್ಧದಲ್ಲಿಯೇ ನಿಲ್ಲಿಸಿರಬಹುದು ಎನ್ನುವ ಕತೆಯನ್ನು ಸ್ಥಳೀಯ ಹಿರಿಯರು ಹೇಳುತ್ತಾರೆ. ‘ಕಥೆ-ಪುರಾಣಗಳೇನಿದ್ದರೂ, ಈ ಭಾಗದ ಅಭಿವೃದ್ಧಿ ದೃಷ್ಟಿ ಯಿಂದ ಅಧ್ಯಯನ ಮತ್ತು ಸೂಕ್ತ ಯೋಜನೆಗಳು ರೂಪುಗೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಶಂಕರ ಗೌಡ ಅಡ್ಲೂರು ಹೇಳುತ್ತಾರೆ.

    ಇತಿಹಾಸ ತಜ್ಞರ ಭೇಟಿ: ಇತ್ತೀಚೆಗೆ ದೇವಾಲಯ ಇರುವ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡರ ಅಭಿಪ್ರಾಯದಂತೆ ಕಲ್ಯಾಣಿ ಚಾಲುಕ್ಯರ ಸಮಕಾಲೀನರಾದ ಗೋವಾ ಕದಂಬರ ಆಳ್ವಿಕೆಯ ಕಾಲದಲ್ಲಿ ಪ್ರತಿ ಗ್ರಾಮಗಳಲ್ಲಿಯೂ ಶಿವ-ದೇಗುಲಗಳು ವಾಸ್ತುಶಿಲ್ಪ ಕಲಾಕೃತಿಗಳಿಂದ ಅತ್ಯಂತ ಸುಂದರವಾಗಿ ನಿರ್ವಣಗೊಂಡಿದ್ದವು ಎನ್ನುತ್ತಾರೆ.

    ಮೊದಲು ಇಲ್ಲಿಯ ಸರ್ವೆ ಮಾಡಬೇಕು. ಸರ್ವೆಯಲ್ಲಿ ಪ್ರಾಚೀನ ಪುರಾತತ್ವ ಇಲಾಖೆಗೆ ಈ ದೇಗುಲ ಅಥವಾ ಸ್ಮಾರಕಗಳು ಒಳಪಡುತ್ತವೆಯೇ ಎನ್ನುವುದನ್ನು ತಿಳಿದುಕೊಳ್ಳಬೇಕು. ಕೇಂದ್ರ ಸರ್ಕಾರ ಇದನ್ನು ಸಂರಕ್ಷಿಸಲು ಘೊಷಣೆ ಮಾಡಬೇಕು. ಎಲ್ಲವು ಕಾನೂನಾತ್ಮಕವಾಗಿ ಇದ್ದಾಗ ಇಲ್ಲಿರುವ ಈ ಶಿಲ್ಪ ಅಥವಾ ದೇವಸ್ಥಾನಗಳು ಪ್ರಾಚೀನ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲಾಗುತ್ತದೆ.
    | ಡಾ. ವಿ.ಎಸ್. ಬಡಿಗೇರ
    ಮುಖ್ಯಸ್ಥರು, ಪ್ರಾಚೀನ ಮತ್ತು ಪುರಾತತ್ವ ಇಲಾಖೆ ಧಾರವಾಡ

    ವಿದ್ಯಾರ್ಥಿ ಚಿತ್ರೀಕರಿಸಿದ ವಿಡಿಯೋ ವೈರಲ್
    ಮಾರುಗದ್ದೆಯ ಕಾಲೇಜ್ ವಿದ್ಯಾರ್ಥಿ ಗುರುರಾಜ ಗೌಡ ಈ ದೇವಸ್ಥಾನದ ಸ್ಥಿತಿ-ಗತಿ ಕುರಿತು ಮೊಬೈಲ್ ಫೋನ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಂಡಿದ್ದಾನೆ. ಇದರಿಂದಾಗಿ ಹಲವಾರು ಜನ ಈಗ ದೇವಸ್ಥಾನ ನೋಡಲು ಬರುತ್ತಿದ್ದಾರೆ. ‘ನಾನು ಚಿಕ್ಕವನಿರುವಾಗನಿಂದಲೂ ಇಲ್ಲಿಯ ದೇಗುಲಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದೇನೆ. ಕೆಲವರು ಈ ಭಾಗದ ಅಭಿವೃದ್ಧಿಗೆ ಆಶ್ವಾಸನೆ ನೀಡಿದರೆ ಹೊರತು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಲ್ಲ. ಪಟ್ಟಣ ಮತ್ತಿತರ ಜನವಸತಿ ಪ್ರದೇಶಗಳಲ್ಲಿ ವಿವಿಧ ದೇವಾಲಯಗಳಿಗೆ ಲಕ್ಷಾಂತರ ರೂ. ಅನುದಾನ ನೀಡುವ ಸರ್ಕಾರ ಮತ್ತು ಜನಪ್ರತಿನಿಧಿಗಳು ಇನ್ನು ಮುಂದೆಯಾದರೂ ನಮ್ಮೂರಿನ ಪುರಾತನ ದೇಗುಲಗಳ ಬಗ್ಗೆ ಲಕ್ಷ್ಯವಹಿಸಲಿ. ಮಾರುಗದ್ದೆಯ ಇತಿಹಾಸ ಸಾರುವ ಶಿವ ದೇಗುಲದ ಜೀಣೋದ್ಧಾರ ಕಾರ್ಯನಡೆಸಲು ಸರ್ವರೂ ಮುಂದೆ ಬರುವಂತಾಗಲಿ’ ಎನ್ನುತ್ತಾನೆ ಈ ವಿದ್ಯಾರ್ಥಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts