More

    ಮಾರುಕಟ್ಟೆಯಲ್ಲಿ ಚಾಲಿ ಅಡಕೆ ದರ ತೇಜಿ

    ಶಿರಸಿ: ಮಾರುಕಟ್ಟೆ ತಲ್ಲಣದ ಜತೆ ಲಾಕ್​ಡೌನ್ ನಡುವೆಯೂ ಪ್ರಸಕ್ತ ವರ್ಷ ಚಾಲಿ ಅಡಕೆಗೆ ಉತ್ತಮ ದರ ಲಭಿಸುತ್ತಿದೆ. ಕಳೆದ ಒಂದು ವಾರದಂದೀಚೆಗೆ ಕ್ವಿಂಟಲ್ ಒಂದಕ್ಕೆ 4 ಸಾವಿರ ರೂಪಾಯಿಗಳಷ್ಟು ತೇಜಿಯಾಗಿದೆ.

    ಏ. 20ರ ಆಸುಪಾಸಿನಲ್ಲಿ ಕ್ವಿಂಟಲ್ ಚಾಲಿ ಅಡಕೆಗೆ ಕನಿಷ್ಠ 24 ಸಾವಿರ ರೂ. ಗರಿಷ್ಠ 26 ಸಾವಿರ ರೂ. ಮಾರುಕಟ್ಟೆ ದರ ಬೆಳೆಗಾರರಿಗೆ ಲಭಿಸಿತ್ತು. ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿದ ಚಾಲಿ ಅಡಕೆಗೆ ಪ್ರಸ್ತುತ ಗುರುವಾರದ ಮಾರುಕಟ್ಟೆಯಲ್ಲಿ 30 ಸಾವಿರ ರೂ. ಗಡಿ ದಾಟಿದೆ. ಕೆಂಪಡಕೆ ಕೂಡ ಕ್ವಿಂಟಲ್ ಒಂದಕ್ಕೆ ಕನಿಷ್ಠ 23,521 ರೂ. ಗರಿಷ್ಠ 39,699 ರೂ. ದರ ದಾಖಲಿಸಿದೆ.

    ಹೆಚ್ಚಿದ ಬೇಡಿಕೆ – ಹೆಚ್ಚಿದ ದರ: ಸದ್ಯ ಮಾರುಕಟ್ಟೆಯಲ್ಲಿ ಈ ಹಿಂದೆ ಖರೀದಿಸಿ ದಾಸ್ತಾನಿಟ್ಟ ಚಾಲಿ ಅಡಕೆ ಹಾಗೂ ಕೆಂಪಡಕೆ ಖಾಲಿಯಾಗಿದೆ. ಹೀಗಾಗಿ ಬೇಡಿಕೆಯನ್ವಯ ಚಾಲಿ ಅಡಕೆಗೆ ದರ ಏರಿಕೆಯಾಗಿದೆ. ಜತೆಗೆ, ದಾಸ್ತಾನಿಟ್ಟ ಮಾಲು ಖಾಲಿಯಾದರೂ ಬೇಡಿಕೆಗೆ ತಕ್ಕಂತೆ ಹೆಚ್ಚಿನ ಪೂರೈಕೆ ಆಗುತ್ತಿಲ್ಲ. ಹೀಗಾಗಿ ದರ ಏರಿಕೆಯಾಗಿದೆ. ಸದ್ಯಕ್ಕೆ ಕರ್ನಾಟಕವನ್ನೂ ಒಳಗೊಂಡು ದೇಶದ ವಿವಿಧ ರಾಜ್ಯಗಳಲ್ಲಿ ಪಾನ್ ಮಸಾಲಾ ಪೂರೈಕೆ ಆಗುತ್ತಿಲ್ಲ. ಹಾಗಾಗಿ ಜನರು ಪಾನ್ ಹಾಗೂ ಮಾವಾ ವ್ಯವಸ್ಥೆ ಮಾಡಿಕೊಂಡಿದ್ದು, ಚಾಲಿ ಹಾಗೂ ಕೆಂಪಡಕೆಗೆ ಬಳಕೆಗೆ ಮುಂದಾಗಿದ್ದಾರೆ. ಇದು ಕೂಡ ದರ ಏರಿಕೆಗೆ ಪೂರಕವಾದ ವಾತಾವರಣ ನಿರ್ವಿುಸಿದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

    ಬೇಗ ಕೊಟ್ಟರೆ ಉತ್ತಮ: ಲಾಕ್​ಡೌನ್ ಮುಗಿದು ಸಾರಿಗೆ ವ್ಯವಸ್ಥೆ ಆರಂಭವಾದರೆ ಗುಟ್ಖಾ ಕಂಪನಿಗಳು, ವ್ಯಾಪಾರಿಗಳಿಗೆ ಅಡಕೆ ಪೂರೈಕೆ ಸರಾಗವಾಗಿ ಆಗಲಿದೆ. ಒಂದೊಮ್ಮೆ ಪೂರೈಕೆ ವ್ಯವಸ್ಥಿತವಾಗಿ ಆದರೆ ನಿಧಾನವಾಗಿ ವ್ಯಾಪಾರಿಗಳು ದರ ಇಳಿಸುವ ಕಾರ್ಯ ಮಾಡುತ್ತಾರೆ. ಈ ಹಿಂದಿನಂತೆ ಕ್ವಿಂಟಲ್ ಚಾಲಿಗೆ 24 ಸಾವಿರ ರೂ.ಗಳ ಆಸುಪಾನಿನ ದರ ಬೆಳೆಗಾರರ ಕೈಸೇರಲಿದೆ. ಹಾಗಾಗಿ ಬೆಳೆಗಾರರು ಅತಿಯಾದ ನಿರೀಕ್ಷೆಗೆ ಒಳಗಾಗಬಾರದು ಎಂಬುದು ತಜ್ಞರ ಮಾತು.

    ದೇಶದಲ್ಲಿ ಲಾಕ್​ಡೌನ್ ಆದಂದಿನಿಂದ ಅಡಕೆ ಬೆಳೆಗಾರರ ಭವಿಷ್ಯ ಡೋಲಾಯಮಾನವಾಗಿತ್ತು. ಭವಿಷ್ಯ ಹೇಗೆಂಬ ಚಿಂತೆ ಕಾಡುತ್ತಿತ್ತು. ಆದರೆ, ಇಂತಹ ಸಂದಿಗ್ಧ ಸನ್ನಿವೇಶದಲ್ಲಿಯೂ ಚಾಲಿ ಅಡಕೆಗೆ ದರ ಏರಿಕೆ ಆಗುತ್ತಿರುವುದು ರೈತ ವಲಯದಲ್ಲಿ ಆಶಾ ಭಾವನೆ ಮೂಡಿಸಿದೆ.
    | ನರೇಂದ್ರ ಹೆಗಡೆ ಯಡಳ್ಳಿ
    ಅಡಕೆ ಬೆಳೆಗಾರ

    ಬೇಡಿಕೆ ಹಾಗೂ ಪೂರೈಕೆಯ ನಡುವೆ ವ್ಯವಸ್ಥಿತ ಸಂಪರ್ಕವಾಗದ ಕಾರಣ ಚಾಲಿ ಅಡಕೆಗೆ ಮಾರುಕಟ್ಟೆಯಲ್ಲಿ ದರ ಏರಿಕೆ ಆಗುತ್ತಿದೆ. ಆದರೆ, ಇದೇ ದರವನ್ನು ಲಾಕ್​ಡೌನ್ ನಂತರ ನಿರೀಕ್ಷಿಸುವಂತಿಲ್ಲ. ಅಲ್ಲದೆ, ಕೆಂಪಡಕೆಗೂ ದರ ಏರುವ ಸಾಧ್ಯತೆಯಿಲ್ಲ. ಸಾರಿಗೆ ಆರಂಭವಾದ ನಂತರ ಚಾಲಿ ಅಡಕೆಯ ದರ ಕುಸಿಯುವ ಸಾಧ್ಯತೆಯಿದೆ. ಅಡಕೆ ಬೆಳೆಗಾರರು ಈಗಿನ ದರಕ್ಕೆ ಅಡಕೆ ಮಾರಿದರೆ ಉತ್ತಮ.
    | ರವೀಶ ಹೆಗಡೆ
    ಟಿ.ಎಸ್.ಎಸ್. ಪ್ರಧಾನ ವ್ಯವಸ್ಥಾಪಕ

    ಏಪ್ರಿಲ್ ತಿಂಗಗಳಲ್ಲಿ ಚಾಲಿ ಅಡಕೆ ದರದ ಏರುಗತಿ:
    ದಿನಾಂಕ ಕನಿಷ್ಠ ಗರಿಷ್ಠ
    ಏ.21- 24,308- 26,778
    ಏ.22- 24,058- 27,388
    ಏ.23- 24,108- 27,616
    ಏ.24 – 24,310- 27,710
    ಏ.25- 25,010- 28,790
    ಏ.26- 26,688- 28,058
    ಏ.27- 25,848- 28,188
    ಏ.28 – 26,088- 28,938
    ಏ.29- 25,918- 29,516
    ಏ.30 – 27,018- 30,618

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts