More

    ಮಾರುಕಟ್ಟೆಗೆ ಲಕ್ಷ ಚೀಲ ಮೆಣಸಿನಕಾಯಿ

    ಬ್ಯಾಡಗಿ: ಸ್ಥಳೀಯ ಮೆಣಸಿನಕಾಯಿ ಮಾರುಕಟ್ಟೆ ಟೆಂಡರ್​ನಲ್ಲಿ ಸೋಮವಾರ ಲಕ್ಷ ಚೀಲ ದಾಟಿದ್ದು, ವರ್ಷದ ಅತಿ ಹೆಚ್ಚು ಆವಕವಾಗಿದೆ.

    ಅತಿವೃಷ್ಟಿಯಿಂದ ಮೆಣಸಿನಕಾಯಿ ಬೆಳೆ ನಷ್ಟವಾಗಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಪ್ರಸಕ್ತ ವರ್ಷ ಆವಕ ಇಳಿಕೆಯಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ 8 ಸಾವಿರ, ಜನವರಿಯಲ್ಲಿ 50ರಿಂದ 80 ಸಾವಿರ ಚೀಲಗಳು ಬಂದಿದ್ದವು. ಕಳೆದ ವರ್ಷ ಜನವರಿ ಮೊದಲ ವಾರದಲ್ಲಿ ಲಕ್ಷ ಚೀಲ, ಫೆಬ್ರವರಿ ಕೊನೆ ವಾರದಲ್ಲಿ 2 ಲಕ್ಷ ಚೀಲ ಗಡಿ ತಲುಪಿತ್ತು. ಆದರೆ, ಈ ಬಾರಿ ಏರಿಕೆ ಕಾಣದೆ 83 ಸಾವಿರ ಚೀಲಕ್ಕೆ ಕೊನೆಗೊಂಡಿತ್ತು. ಸೋಮವಾರ 1,22,644 ಚೀಲಗಳು ಆವಕವಾಗಿ ಮಾರುಕಟ್ಟೆಗೆ ಹೆಚ್ಚು ಆದಾಯ ತಂದಿದೆ.

    ಸ್ಥಿರತೆ ಕಂಡ ದರ: ಈ ಬಾರಿ ಮೆಣಸಿನಕಾಯಿಗೆ ಉತ್ತಮ ದರವಿದೆ. ಹಿಂದಿನ ವರ್ಷ ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ಕ್ವಿಂಟಾಲ್​ಗೆ 12 ರಿಂದ 18ಸಾವಿರ ರೂ.ವರೆಗೆ ಮಾರಾಟವಾಗಿತ್ತು. ಈಗ 15 ರಿಂದ 25 ಸಾವಿರ ರೂ. ದಾಟಿದೆ. ಡಬ್ಬಿ ಕೂಡ 33 ಸಾವಿರ ರೂ. ತಲುಪಿ ದಾಖಲೆ ನಿರ್ವಿುಸಿದೆ. ಒಟ್ಟಾರೆ ಪ್ರಸಕ್ತ ವರ್ಷ ದರ ಏರಿಕೆಯಿಂದ ರೈತರ ಮೊಗದಲ್ಲಿ ಸಂತಸ ತಂದಿದೆ.

    ಇಂದಿನ ದರ: ಬ್ಯಾಡಗಿ ಕಡ್ಡಿ 2,450 ರಿಂದ 23,190ರೂ., ಡಬ್ಬಿ 3,520 ರಿಂದ 28,099ರೂ., ಗುಂಟೂರು 1000 ರಿಂದ 10,109 ರೂ.ದರದಲ್ಲಿ ಮಾರಾಟವಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

    ಐದಾರು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆಯಲಾಗಿತ್ತು. ಮಳೆಯಿಂದಾಗಿ ಬಹಳಷ್ಟು ಬೆಳೆ ಹಾಳಾಯಿತು. ಅಳಿದುಳಿದ ಬ್ಯಾಡಗಿ ಡಬ್ಬಿ ಕಾಯಿಗೆ ಮಾರುಕಟ್ಟೆಯಲ್ಲಿ ಅತಿಹೆಚ್ಚು ದರ ಸಿಕ್ಕಿದೆ. ಕ್ವಿಂಟಾಲ್​ಗೆ 24,089ರೂ. ದರ ಸಿಕ್ಕಿದೆ. ಒಟ್ಟು 33 ಚೀಲ ತಂದಿದ್ದೆ. ಅಂದಾಜು 2.5 ಲಕ್ಷ ರೂ. ಪಟ್ಟಿ ಸಿಗಲಿದ್ದು, ಖುಷಿ ತಂದಿದೆ.
    | ಓಬಣ್ಣ ಕಸಾಪುರ ರೈತ, ಗುಡಿಕೋಟೆ, ಕೂಡ್ಲಿಗಿ ತಾಲೂಕು

    ಮಾರುಕಟ್ಟೆಯಲ್ಲಿ ಸೋಮವಾರ ಅತಿ ಹೆಚ್ಚು ಆವಕವಾಗಿದ್ದು, 1 ಲಕ್ಷ ಚೀಲ ದಾಟಿದೆ. ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಅಂದಾಜು 3.5 ಲಕ್ಷ ಸೆಸ್ ಸಂಗ್ರಹವಾಗಲಿದ್ದು, ಮಾರುಕಟ್ಟೆಯ ಆದಾಯ ವೃದ್ಧಿಸಲಿದೆ. ಇನ್ನುಮುಂದೆ ಆವಕ ಏರಿಕೆಯಾಗುವ ಸಂಭವವಿದೆ.
    | ಪ್ರಭು ದೊಡ್ಡಮನಿ, ಮಾರುಕಟ್ಟೆ ಲೆಕ್ಕಪತ್ರ ವಿಭಾಗದ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts