More

    ಮಾರಿ ಜಾತ್ರೆಯಲ್ಲಿ 3ನೇ ದಿನವೂ ಜನಸಾಗರ

    ಶಿವಮೊಗ್ಗ: ನಗರದಲ್ಲಿ ನಡೆಯುತ್ತಿರುವ ಮಾರಿಜಾತ್ರೆಗೆ ಮೂರನೇ ದಿನವಾದ ಗುರುವಾರವೂ ಭಕ್ತ ಸಾಗರ ಹರಿದುಬಂತು. ಸಾವಿರಾರು ಭಕ್ತರು ಮಾರಿಗದ್ದುಗೆಗೆ ಆಗಮಿಸಿ ಪೂಜೆ, ಹರಕೆ ಸಲ್ಲಿಸಿದರು. ಸರದಿಯಾಗಿ ವಾಲ್ಮೀಕಿ, ಉಪ್ಪಾರ ಹಾಗೂ ಮಡಿವಾಳ ಸಮಾಜದವರು ಮಾರಿಕಾಂಬೆಗೆ ಪೂಜೆ ನೆರವೇರಿಸಿದರು.

    ನಾಗರಿಕರು ತಮ್ಮ ಪುಟ್ಟ ಮಕ್ಕಳಿಗೆ ಮಾರಿಕಾಂಬೆ ಸನ್ನಿಧಿಯಲ್ಲಿ ತುಲಾಭಾರ ನೆರವೇರಿಸಿದರು. ಕೋಟೆ ಮಾರಿಕಾಂಬಾ ದೇವಾಲಯದ ಹೊರ ಆವರಣದಲ್ಲಿ ಜಾತ್ರೆ ಕಳೆಗಟ್ಟಿದೆ. ಅನೇಕ ಆಟಿಕೆಗಳು ಮಕ್ಕಳನ್ನು ಸೆಳೆಯುತ್ತಿವೆ. ದೇವಿಯ ದರ್ಶನಕ್ಕೆ ಮಕ್ಕಳನ್ನು ಕರೆತಂದ ಪಾಲಕರು ಜಾತ್ರೆಯಲ್ಲಿ ಮಕ್ಕಳಿಗಾಗಿ ಆಟಿಕೆ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಳೆದ 3 ದಿನಗಳಿಂದ ಜಾತ್ರೆಯಲ್ಲಿ ಜನಸಾಗರ ನಿಯಂತ್ರಿಸುವಲ್ಲಿ ಪೊಲೀಸರು ಹಾಗೂ ಮಾರಿಕಾಂಬಾ ದೇವಾಲಯ ಸಮಿತಿ ಕಾರ್ಯಕರ್ತರರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.

    ಮಾರಿ ಗದ್ದುಗೆ ಸುತ್ತಲ ಪ್ರದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಪೌರ ಕಾರ್ವಿುಕರು ಮಾತ್ರವಲ್ಲದೆ ಸ್ವಯಂ ಸೇವಕರು ದೇವಾಲಯದ ಸುತ್ತಲ ಪ್ರದೇಶದಲ್ಲಿ ಕಸ ತೆಗೆಯುವಲ್ಲಿ ಶ್ರಮಿಸುತ್ತಿದ್ದಾರೆ. ಜಾತ್ರೆಗೆ ಆಗಮಿಸುವವರಿಗೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ಭದ್ರತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇನ್ನೂ ಎರಡು ದಿನಗಳ ಕಾಲ ಮಾರಿಜಾತ್ರೆ ನಡೆಯಲಿದ್ದು, ಫೆ.29ರಂದು ದೇವಿಯನ್ನು ವನಕ್ಕೆ ಕಳುಹಿಸುವುದರೊಂದಿಗೆ ಜಾತ್ರೆಗೆ ತೆರೆಬೀಳಲಿದೆ.

    ಮದ್ಯ-ಮಾಂಸದ ವಹಿವಾಟು ಅಂದಾಜು 9 ಕೋಟಿ ರೂ.! ನಗರದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಮಾರಿಜಾತ್ರೆ ಹಿನ್ನೆಲೆಯಲ್ಲಿ ಕೋಟ್ಯಂತರ ರೂ. ವಹಿವಾಟು ನಡೆದಿದೆ. ಮುಖ್ಯವಾಗಿ ದೇವಿಗೆ ಬಲಿ ನೀಡಲು ಕುರಿ-ಕೋಳಿಗಳ ಮಾರಾಟ ಹಾಗೂ ಮದ್ಯದಂಗಡಿಗೆ ಜನರು ಕಿಕ್ಕಿರಿದು ಹೋದ ಪರಿಣಾಮ ಮದ್ಯ ಹಾಗೂ ಮಾಂಸ ವಹಿವಾಟಿನಲ್ಲೇ ಅಪಾರ ಹಣ ಕೈ ಬದಲಾಗಿದೆ.

    ಫೆ.26ರಂದು ನಗರದ ವಿವಿಧೆಡೆ ಮಾರಿಕಾಂಬೆಗೆ ಬಲಿ ನೀಡಲೆಂದು ಸಾವಿರಾರು ಕುರಿ-ಕೋಳಿಗಳನ್ನು ವಧಿಸಲಾಯಿತು. ಕೆಲವೆಡೆ ರಸ್ತೆ ಮೇಲೆಲ್ಲ ಪ್ರಾಣಿಗಳ ರಕ್ತ ಹರಿಯಿತು. ಮನೆ ಮುಂದೆ ಶಾಮಿಯಾನ ಹಾಕಿ ಆಪ್ತರನ್ನು ಭೋಜನಕ್ಕೆ ಆಹ್ವಾನಿಸಿ ಮಾಂಸದೂಟ ಮಾಡಿ ಬಡಿಸಲಾಯಿತು. ದೂರದೂರಿನ ನೆಂಟರಿಷ್ಟರನ್ನೂ ಜಾತ್ರೆಗೆ ಆಹ್ವಾನಿಸಿದ್ದ ಬಹುತೇಕರು ಕುರಿ ಕೋಳಿಗಳನ್ನು ಕಡಿದು ಮೃಷ್ಟಾನ್ನ ಭೋಜನ ಉಣಬಡಿಸಿದರು.

    ಒಂದು ಅಂದಾಜಿನ ಪ್ರಕಾರ ಫೆ.26ರಂದು ಅಂದಾಜು 5 ಸಾವಿರ ಕುರಿಗಳನ್ನು ಬಲಿ ಕೊಡಲಾಗಿದೆ. ಒಂದು ಕುರಿಗೆ ಮಾರುಕಟ್ಟೆಯ ಕನಿಷ್ಠ ಧಾರಣೆ 15 ಸಾವಿರ ಎಂದು ಲೆಕ್ಕ ಹಾಕಿದರೂ ಒಂದೇ ದಿನದಲ್ಲಿ ಕುರಿಯ ಮಾರಾಟದಿಂದ ಕೈ ಬದಲಾದ ದುಡ್ಡಿನ ಮೊತ್ತ 7.50 ಕೋಟಿ ರೂಪಾಯಿ. ನಗರ ವ್ಯಾಪ್ತಿಯಲ್ಲಿ 90ಕ್ಕೂ ಹೆಚ್ಚು ಮಾಂಸದಂಗಡಿಗಳಿವೆ. ಪ್ರತಿ ಅಂಗಡಿಯಲ್ಲೂ ಕನಿಷ್ಠ 10-20 ಕುರಿಗಳ ಮಾರಾಟವಾಗಿದೆ. ಇವುಗಳ ಒಟ್ಟು ಮೊತ್ತ 27 ಲಕ್ಷ ಎಂದು ಅಂದಾಜಿಸಿದರೂ ಕೇವಲ ಕುರಿಯ ಮಾರಾಟದಲ್ಲೇ ಸರಿ ಸುಮಾರು 8 ಕೋಟಿ ರೂ. ವಹಿವಾಟು ನಡೆದಿದೆ.

    ಮಾಂಸದಂಗಡಿ ಮಾಲೀಕರೊಬ್ಬರು ಹೇಳುವ ಪ್ರಕಾರ ಬುಧವಾರ ಹಾಗೂ ಗುರá-ವಾರ ಅಂದಾಜು 25 ಸಾವಿರ ಕೋಳಿಗಳ ಮಾರಣ ಹೋಮವಾಗಿದೆ. ಒಂದು ಕೋಳಿಗೆ ಕನಿಷ್ಠ 200 ರೂ. ಎಂದು ಅಂದಾಜಿಸಿದರೂ ಕೋಳಿ ವಹಿವಾಟಿನಲ್ಲಿ 50 ಲಕ್ಷ ರೂ. ಕೈ ಬದಲಾಗಿದೆ.

    ಮದ್ಯದಂಗಡಿಯಲ್ಲಿ ಹಣದ ಹೊಳೆ: ಮಾಂಸ ಇದ್ದ ಮೇಲೆ ಮದ್ಯ ಇರಲೇಬೇಕು ಎಂದು ಭಾವಿಸಿದವರೇ ಹೆಚ್ಚು. ಹೀಗಾಗಿ ಜಾತ್ರೆ ನೆಪದಲ್ಲಿ ಮದ್ಯದಂಗಡಿಗಳು ಕಳೆದ ಮೂರ್ನಾಲ್ಕು ದಿನಗಳಲ್ಲಿ ಕಿಕ್ಕಿರಿದು ತುಂಬಿವೆ. ಬಹುತೇಕ ಮದ್ಯದಂಗಡಿಗಳಲ್ಲಿ ದುಪ್ಪಟ್ಟು, ಇನ್ನು ಹಲವೆಡೆ ಮಾಮೂಲಿಗಿಂತಲೂ ನಾಲ್ಕರಷ್ಟು ಹೆಚ್ಚು ವ್ಯಾಪಾರವಾಗಿದೆ ಎಂದು ಬಾರ್ ಮಾಲೀಕರೊಬ್ಬರು ತಿಳಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ ಅಂದಾಜು 75 ಬಾರ್ ಹಾಗೂ ವೈನ್​ಶಾಪ್​ಗಳಿವೆ. ಈ ಬಾರಿ ಮಾರಿಜಾತ್ರೆಯಲ್ಲಿ ಮೂರು ದಿನದ ವಹಿವಾಟು 1 ಕೋಟಿ ರೂಪಾಯಿಯಾಗಿದೆ ಎಂಬುದು ಮದ್ಯ ವ್ಯಾಪಾರಿಗಳ ಲೆಕ್ಕಾಚಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts