More

    ಮಾನಸಿಕ ಕಾಯಿಲೆ ಕುರಿತು ಉದಾಸೀನ ಬೇಡ-ಡಾ.ಸಿ.ಆರ್.ಚಂದ್ರಶೇಖರ್ ಹೇಳಿಕೆ 

    ದಾವಣಗೆರೆ: ಮಾನಸಿಕ ಕಾಯಿಲೆ ಕಂಡುಬಂದಾಗ ತಜ್ಞ ವೈದ್ಯರನ್ನು ಸಂಪರ್ಕಿಸಿ ಸಕಾಲಿಕ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಪಡಿಸಬಹುದು. ಮಾಟ ಮಂತ್ರ ಬಿಡಿಸುವ ದೇವಸ್ಥಾನಗಳಿಗೆ ಹೋಗಿ 2ರಿಂದ 4 ವರ್ಷ ತಡವಾಗಿ ಬಂದರೆ ಚಿಕಿತ್ಸೆ ಕಷ್ಟಕರ ಎಂದು ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ತಿಳಿಸಿದರು.

    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪ ಮಟ್ಟದ ಮಾನಸಿಕ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ತೀವ್ರ ಥರದ ಕಾಯಿಲೆಗಳಲ್ಲಿ ಶೇ.80ರಷ್ಟು ತಡೆಯುವ ಸಾಧ್ಯತೆ ಇದೆ ಎಂದರು.
    ಕೋವಿಡ್ ಬಳಿಕ ಜಗತ್ತಿನಾದ್ಯಂತ ಮಾನಸಿಕ ಖಿನ್ನತೆಯಿಂದ ಬಳಲುವವರ ಸಂಖ್ಯೆ ಹೆಚ್ಚಿದೆ. ಕುಟುಂಬ ಸದಸ್ಯರ ಸಾವು, ಕೆಲಸದಿಂದ ವಜಾ ಮೊದಲಾದ ಕಾರಣಗಳಿಂದ ಖಿನ್ನತೆ ಹೆಚ್ಚಿದವು. ಮೊಬೈಲ್ ಗೀಳಿನಿಂದ ಹೊರಬಂದು ಪುಸ್ತಕ ಓದಿ, ಸಂಗೀತ ಕೇಳಿ, ಧ್ಯಾನ ಮತ್ತು ಯೋಗ ಮಾಡಿ, ವಾಯುವಿಹಾರ ರೂಢಿಸಿಕೊಂಡು ಮಾನಸಿಕ ಖಿನ್ನತೆಯಿಂದ ಹೊರಬರಬೇಕು ಎಂದು ಸಲಹೆ ನೀಡಿದರು.
    ಅತಿಯಾದ ಮೊಬೈಲ್ ಬಳಕೆಯಿಂದ ಶೇ.30ರಷ್ಟು ಮಕ್ಕಳಲ್ಲಿ ದೃಷ್ಟಿದೋಷ ಬರುತ್ತಿದೆ. ಕಣ್ಣುಗಳಲ್ಲಿ ನೀರು ಮಾಯವಾಗುತ್ತಿದೆ. ಮಿದುಳಿನ ಮುಂಭಾಗ ಚಿಂತನೆ ಮಾಡುವ ಭಾಗವಾಗಿದ್ದು ಭಾವನಾತ್ಮಕ ವಿಚಾರಗಳಿಗೆ ನಿಯಂತ್ರಣ ಸಾಧ್ಯವಾಗದು. ನೀಲಿಚಿತ್ರಗಳ ಅಂತರ್ಜಾಲಗಳು ಯಾವ ದೇಶದಲ್ಲೂ ನಿಷೇಧವಾಗಿಲ್ಲ. ಇದರಿಂದ ಲೈಂಗಿಕ ಆಸಕ್ತಿಯೂ ಕಡಿಮೆಯಾಗುತ್ತಿದೆ ಎಂದರು.
    ಜೀವನಶೈಲಿ, ಮಾದಕ ವ್ಯಸನ, ಆಹಾರ ಪದ್ಧತಿ, ಕಾರ್ಯದೊತ್ತಡ ಹಾಗೂ ದುರಾಸೆಗಳು ಮಾನಸಿಕ ಖಿನ್ನತೆಗೆ ಕಾರಣವಾಗಿವೆ. ಮಾನಸಿಕ ಕಾಯಿಲೆಯು ಮಧುಮೇಹ, ಬಿಪಿ ಸೇರಿದಂತೆ ಶೇ.80 ರಷ್ಟು ದೇಹಕ್ಕೆ ಸಂಬಂಧಿಸಿದ ರೋಗಗಳ ಆಹ್ವಾನಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.
    ಮನಸ್ಸು ಪ್ರಫುಲ್ಲವಾಗಿರಲು ಆಲೋಚನೆಗಳು ಸಕಾರಾತ್ಮಕ ಆಗಿರಬೇಕು. ಬರುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಬದುಕುತ್ತೇನೆಂಬ ಮನೋಬಲ ರೂಢಿಸಿಕೊಳ್ಳಬೇಕು. ಇಂದು ಹತಾಷೆಯಿಂದ ಕೌಟುಂಬಿಕ ಕಲಹ ಹೆಚ್ಚಿವೆ. ಬೆಂಗಳೂರು ಒಂದರಲ್ಲಿಯೇ ವರ್ಷಕ್ಕೆ 7 ಸಾವಿರಕ್ಕೂ ವಿಚ್ಛೇದನ ಪ್ರಕರಣ ಕೋರ್ಟ್ ಮೇಟ್ಟಲೇರುತ್ತಿವೆ. ಕೆಲ ಯುವಕ-ಯುವತಿಯರೂ ಮದುವೆ, ಮಕ್ಕಳು ಬೇಡ ಎಂಬ ಮನಸ್ಥಿತಿಗೆ ಬಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
    ಸುದ್ದಿಗೋಷ್ಠಿಯಲ್ಲಿ ಡಾ. ಎ.ಎನ್. ಸುಂದರೇಶ್, ಪ್ರಭುದೇವ್, ಡಾ. ಮಾವಿನಶೆಟ್ಟರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts