More

    ಮಾನಸಿಕ ಆರೋಗ್ಯದ ಕಡೆ ಒತ್ತು ನೀಡಿ

    ಕೋಲಾರ: ಇಂದಿನ ದಿನಮಾನಗಳಲ್ಲಿ ಮಾನಸಿಕ ಆರೋಗ್ಯದ ಕಡೆಗೆ ಒತ್ತು ನೀಡಿದಷ್ಟು ಮಾನಸಿಕ ಕಾಯಿಲೆ ಬರದಂತೆ ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಂ.ಎಲ್ ರಘುನಾಥ್ ಅಭಿಪ್ರಾಯಿಸಿದರು.

    ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಕೀಲರ ಸಂಘದಿಂದ ಗುರುವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿ, ಮನುಷ್ಯ ಒತ್ತಡಗಳಿಗೆ ಒಳಗಾದಷ್ಟು ಮಾನಸಿಕವಾಗಿ ಹಿಂಜರಿಯುತ್ತಾನೆ. ಇಂತಹ ಸಂದರ್ಭಗಳಲ್ಲಿ ಯೋಗ ಮತ್ತಿತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ ಮಾನಸಿಕ ಖಿನ್ನತೆಯಿಂದ ಹೊರಬರಲು ಸಾಧ್ಯ ಎಂದರು.

    ಮಾನಸಿಕ ರೋಗಕ್ಕೆ ನಾನಾ ಕಾರಣಗಳಿರುತ್ತವೆ. ಮಾನಸಿಕವಾಗಿ ತೊಂದರೆ ಅನುಭವಿಸುವ ವ್ಯಕ್ತಿಗಳು ಕಂಡು ಬಂದರೆ ಅವರಿಗೆ ತೊಂದರೆ ಕೊಡದಂತೆ ನೋಡಿಕೊಳ್ಳುವುದು, ಖಿನ್ನತೆ ಮತ್ತು ಒತ್ತಡಕ್ಕೆ ಒಳಗಾಗಿರುವವರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.

    ಕೌಟುಂಬಿಕ ವ್ಯವಹಾರಗಳು, ಪತಿ, ಪತ್ನಿ ವಿಚ್ಛೇದನ, ಸ್ವಯಂ ತೊಂದರೆ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದರ ಬಗ್ಗೆ ಹಳ್ಳಿಗಳಲ್ಲೂ ಅರಿವು ಮೂಡಿಸಬೇಕು. ಪ್ರತಿಯೊಬ್ಬರೂ ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು.

    ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ ಎನ್. ಸಿ ನಾರಾಯಣಸ್ವಾಮಿ ಮಾತನಾಡಿ, ಭಾರತದಲ್ಲಿ 4.57 ಕೋಟಿ ಜನರು ಅಲ್ಪಮಟ್ಟದ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜಿಲ್ಲೆಯಲ್ಲಿ 10,000 ಜನರಿಗೆ ಚಿಕಿತ್ಸೆನೀಡಲಾಗುತ್ತಿದ್ದು, 4000 ಮಂದಿ ಮೂರ್ಛೆ ರೋಗದಿಂದ, 2504 ಜನ ತಿವ್ರ ಮಟ್ಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. 709 ಬುದ್ಧಿ ಮಾಂದ್ಯ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಾನಸಿಕ ಖಿನ್ನತೆಗೊಳಗಾದ ವ್ಯಕ್ತಿಗಳಿಗೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೀರಂಡಹಳ್ಳಿ ಮತ್ತು ಅಂತರಗಂಗೆಯಲ್ಲಿರುವ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

    ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್. ಗಂಗಾಧರ್, ನ್ಯಾಯಾಧೀಶರಾದ ಪವನೇಶ ಡಿ, ಸಂತೋಷ ಗಜಾನನ ಭಟ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಆರೋಗ್ಯ ಇಲಾಖೆ ಸಿಬ್ಬಂದಿ ಶ್ರೀನಾಥ್ ಇತರರಿದ್ದರು.

    ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಗಳು ಯಾವ ಕಾರಣಕ್ಕೆ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಉತ್ತಮ ಪ್ರಜೆಯಾಗಿ ಮಾಡಬೇಕು. ಹಳ್ಳಿ ಹಳ್ಳಿಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
    ರಘುಪತಿ ಗೌಡ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts