More

    ಮಾನವೀಯ ಸುದ್ದಿಗೆ ಮಹತ್ವ ಸಿಗಲಿ

    ಸೇಡಂ (ಕಲಬುರಗಿ): ಸಮಾಜದಲ್ಲಿ ದೊಡ್ಡದಾದ ಬದಲಾವಣೆ ತರುವ ಶಕ್ತಿಯಿರುವ ಪತ್ರಕರ್ತರು ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಸುದ್ದಿಗಳಿಗೆ ಆದ್ಯತೆ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ.ಬಸವರಾಜ ಪಾಟೀಲ್ ಸೇಡಂ ಹೇಳಿದರು.

    ಸುವರ್ಣ ಕರ್ನಾಟಕ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರ ಪ್ರಭೆ ಗ್ರಂಥ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ನೈತಿಕತೆ ಕಳೆದುಕೊಳ್ಳುತ್ತಿವೆ. ಪತ್ರಕರ್ತರು ತಮ್ಮತನ ಕಳೆದುಕೊಳ್ಳದೇ ಸದಾ ಮಾನವೀಯತೆಯ ಅಡಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದ್ಧತೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಸೇಡಂನ ಪತ್ರಕರ್ತರು ಸಾಧ್ಯವಾದರೆ ಒಂದು ಮಾಸಿಕ ಪತ್ರಿಕೆಯನ್ನು ಆರಂಭಿಸಿ ಜನರಿಗೆ ನೈಜವಾದ ವರದಿಗಳನ್ನು ಮುಟ್ಟಿಸುವ ಕೆಲಸ ಮಾಡಬೇಕು. ಪತ್ರಿಕಾ ದಿನಾಚರಣೆಯ ನೆಪದಲ್ಲಿ ತಾಲೂಕಿನ ಪತ್ರಕರ್ತರಿಗೆ ಸತ್ಕರಿಸುತ್ತಿರುವುದು ಸಂತಸ ತಂದಿದೆ ಎಂದರು.

    ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪತ್ರಿಕಾರಂಗವನ್ನು ನಾಲ್ಕನೇಯ ಅಂಗ ಎಂದು ಕರೆಯುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಪತ್ರಿಕಾರಂಗ ಉದ್ಯಮಿಗಳ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದ್ದು, ಪತ್ರಕರ್ತರು ಅವರು ಹೇಳಿದಂತಹ ಸುದ್ದಿಗಳನ್ನು ಮಾಡಬೇಕಾಗಿ ಬಂದಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.

    ಸೇಡಂ ತಾಲೂಕಿನಲ್ಲಿ ಜನಿಸಿ ಹೊರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಸತ್ಕರಿಸಿ, ಅವರ ಕುರಿತು ಪರಿಚಯಿಸುವ ಪತ್ರಕರ್ತರ ಪ್ರಭೆ ಗ್ರಂಥ ಬಿಡುಗಡೆಗಡೆಗೊಳಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳನ್ನು ಹಾಗೂ ಪತ್ರಿಕಾ ವಿತರಕರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

    ತೊಟ್ನಳ್ಳಿಯ ಡಾ.ತ್ರಿಮೂರ್ತಿ ಶಿವಾಚಾರ್ಯರು, ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣು ಮಹಾಗಾಂವ್ ಅಧ್ಯಕ್ಷತೆ ವಹಿಸಿದ್ದರು.

    ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ್, ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಇದ್ದರು.

    ಶರಣಪ್ಪ ಎಳ್ಳಿ, ಮಹೇಶ ಅಲ್ಲೂರ ಪ್ರಾರ್ಥಿಸಿದರು. ಕಾರ್ಯಕಾರಣಿ ಸದಸ್ಯ ಶಿವಕುಮಾರ ನಿಡಗುಂದಾ ಸ್ವಾಗತಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಆಡಕಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ದಲಿಂಗಯ್ಯಸ್ವಾಮಿ ಮಲಕೂಡ ಸನ್ಮಾನಿತರ ಪರಿಚಯಿಸಿದರು. ಪತ್ರಕರ್ತ ಅವಿನಾಶ ಬೋರಂಚಿ ಕೃತಿ ಪರಿಚಯ ಮಾಡಿದರು. ಜಗನ್ನಾಥ ತರನಳ್ಳಿ ನಿರೂಪಣೆ ಮಾಡಿದರು. ಸುನೀಲ್ ರಾಣೆವಾಲ್ ವಂದಿಸಿದರು.

    ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಯಾವತ್ತಿಗೂ ಸಮಾಜಮುಖಿ ಕೆಲಸಕ್ಕೆ ಸಾಥ್ ನೀಡಿದೆ. ಅದರಂತೆ ಪತ್ರಕರ್ತರ ಗ್ರಂಥದ ಮುದ್ರಣಕ್ಕಾಗಿ ಸಮಿತಿ ಪ್ರಾಯೋಜಕತ್ವ ನೀಡಿದೆ. ಒಟ್ಟಿನಲ್ಲಿ ನಾಡಿನ ಜನರ ಶ್ರೇಯೋಭಿವೃದ್ಧಿ ನಮಗೆ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಪತ್ರಕರ್ತರ ಸಂಘದಿಂದ ಸಮಾಜದ ಏಳ್ಗೆಯಾಗಲಿ.
    | ಶ್ರೀ ಸದಾಶಿವ ಸ್ವಾಮೀಜಿ, ಕೊತ್ತಲ ಬಸವೇಶ್ವರ ದೇವಾಲಯ ಸೇಡಂ.

    ತವರು ಸನ್ಮಾನಗೊಂಡವರು: ತಾಲೂಕಿನ ಪತ್ರಕರ್ತರಾದ ರಾಮಚಂದ್ರರೆಡ್ಡಿ ಪಾಟೀಲ್, ಶಂಕರ ಕೋಡ್ಲಾ, ವೀರಣ್ಣ ಪಾಟೀಲ್ ಹೆಡ್ಡಳ್ಳಿ, ನಾಗರಾಜ ಕಿರಣಗಿ, ಮಹಿಪಾಲರೆಡ್ಡಿ ಮುನ್ನೂರ, ರಾಜೇಶ ಪಾಟೀಲ್ ಹೆಡ್ಡಳ್ಳಿ, ದೇವಿಂದ್ರಪ್ಪ ಅವಂಟಿ, ಗಣೇಶ ಪಾಟೀಲ್ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts