More

    ಮಾದರಿ ಪರಿಸರ ಪ್ರೇಮ

    ಯಲ್ಲಾಪುರ: ಕರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿ ಹದಿನೈದು ದಿನಗಳು ಕಳೆದಿದ್ದು, ಶಾಲೆಗಳಿಗೆ ರಜೆ ನೀಡಿಯೂ ಹಲವು ದಿನಗಳು ಕಳೆದಿವೆ.

    ವಿದ್ಯಾರ್ಥಿಗಳು, ಶಿಕ್ಷಕರೆಲ್ಲ ಮನೆಯೊಳಗೇ ಇದ್ದಾರೆ. ಆದರೆ, ತಾಲೂಕಿನ ನಂದೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ವಿದ್ಯಾರ್ಥಿಗಳು ಮಾತ್ರ ವಾರಕ್ಕೊಮ್ಮೆ ಶಾಲೆಗೆ ಹೋಗಿ, ಶಾಲಾ ವನದಲ್ಲಿನ ಗಿಡಗಳಿಗೆ ನೀರುಣಿಸುವ ಮೂಲಕ ಮಾದರಿಯಾಗಿದ್ದಾರೆ.

    ಕರೊನಾ ಹರಡುವಿಕೆ ತಡೆಗಟ್ಟುವ ಸಲುವಾಗಿ ಕಳೆದ ತಿಂಗಳಿನಿಂದಲೇ ಶಾಲೆಗಳಿಗೆ ರಜೆ ನೀಡಲಾಗಿದೆ. ಈ ರಜಾ ಅವಧಿಯಲ್ಲಿ ಶಾಲಾ ವನದ ಗಿಡಗಳು ನೀರಿಲ್ಲದೇ ಒಣಗಿ ಸತ್ತು ಹೋಗಬಹುದೆಂಬ ಆತಂಕ ಈ ವಿದ್ಯಾರ್ಥಿಗಳನ್ನು ಕಾಡಿ, ಈ ಕಾರ್ಯಕ್ಕೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳ ಪರಿಸರ ಪ್ರೇಮಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಗಳಾದ ಸಿಂಚನ ಗೌಡ, ಸುಮನ್ ಭಟ್ಟ, ಸಂಜನಾ ಗೌಡ ಪ್ರತಿ ವಾರಕ್ಕೆ ಒಮ್ಮೆ ಶಾಲೆಗೆ ಹೋಗಿ, ಶಾಲಾವನದಲ್ಲಿನ ಎಲ್ಲ ಗಿಡಗಳಿಗೆ ನೀರುಣಿಸಿ ಬರುತ್ತಿದ್ದಾರೆ. ತಮ್ಮ ಮುಖಕ್ಕೆ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡೇ ಗಿಡಗಳಿಗೆ ನೀರುಣಿಸುವ ಮೂಲಕ ಕರೊನಾ ಬಾರದಂತೆ ಮುನ್ನೆಚ್ಚರಿಕೆ ಕ್ರಮವನ್ನೂ ಕೈಗೊಳ್ಳುತ್ತಿದ್ದಾರೆ.

    ಲಾಕ್ ಡೌನ್ ಸಂದರ್ಭದಲ್ಲಿ ನಮಗಾಗಿ ದಿನಸಿ, ತರಕಾರಿಗಳು ಊರಿಗೋ, ಮನೆ-ಮನೆಗೋ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ಗಿಡಗಳ ಗತಿಯೇನು ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿತು. ಶಾಲಾ ಸಮಯದಲ್ಲಿ ನಾವೇ ನೆಟ್ಟು, ಕಷ್ಟಪಟ್ಟು ಬೆಳೆಸುತ್ತಿರುವ ಗಿಡಗಳು ಇವು. ಈಗ ಬೇಸಿಗೆಯ ಬಿಸಿಲಿನ ಬೇಗೆಗೆ ಒಣಗಿ, ಸತ್ತು ಹೋಗುವುದನ್ನು ನೋಡಲು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ವಾರಕ್ಕೊಮ್ಮೆಯಾದರೂ ಅವುಗಳಿಗೆ ನೀರುಣಿಸಿ, ಬದುಕಿಸಿಕೊಳ್ಳಬೇಕೆಂಬ ತೀರ್ವನಕ್ಕೆ ಬಂದೆವು. ಅದರಂತೆ ನಡೆಯುತ್ತಿದ್ದೇವೆ ಎಂದು ಅಭಿಮಾನದಿಂದ ಹೇಳುತ್ತಾರೆ.

    ಪರಿಸರ ಸಂರಕ್ಷಣೆ ಕೇವಲ ಭಾಷಣಕ್ಕೆ ಸೀಮಿತವಾಗುತ್ತಿರುವ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಲಾಕ್ ಡೌನ್ ಸಂದರ್ಭದಲ್ಲೂ ತೋರುತ್ತಿರುವ ಪರಿಸರ ಕಾಳಜಿ ಮೆಚ್ಚುಗೆಗೆ ಪಾತ್ರವಾಗಿದೆ.

    ಶಾಲೆಯ ಪರಿಸರ ಹಸಿರಿನಿಂದ ಕೂಡಿದ್ದರೆ ಮಾತ್ರ ಶಾಲೆಯ ಅಂದ ಹೆಚ್ಚುತ್ತದೆ. ಶಾಲೆಯಲ್ಲಿ ಪಠ್ಯ ಚಟುವಟಿಕೆಯ ಜತೆಗೆ ಗಿಡಗಳ ಸಂರಕ್ಷಣೆಯೂ ನಮ್ಮ ನಿತ್ಯದ ಕಾರ್ಯಗಳಲ್ಲೊಂದು. ಹಾಗಾಗಿಯೇ ಲಾಕ್​ಡೌನ್ ಇದ್ದರೂ ಸುರಕ್ಷತಾ ಕ್ರಮಗಳೊಂದಿಗೆ ಗಿಡಗಳಿಗೆ ನೀರುಣಿಸುವ ಕಾರ್ಯ ಮಾಡುತ್ತಿದ್ದೇವೆ. | ಸಿಂಚನ ಗೌಡ, ಸುಮನ್ ಭಟ್ಟ, ಸಂಜನಾ ಗೌಡ, ವಿದ್ಯಾರ್ಥಿಗಳು

    ಮಕ್ಕಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸಿದರೆ ಮಾತ್ರ ಸಾಲದು. ಅವರಲ್ಲೂ ಪರಿಸರದ ಕುರಿತು ಕಾಳಜಿ, ಪ್ರೀತಿ ಮೂಡಿದಾಗ ಮಾತ್ರ ಅದರ ರಕ್ಷಣೆಗೆ ಅವರು ಮುಂದಾಗುತ್ತಾರೆ. ಆ ವಿಷಯದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಮಾದರಿಯಾಗಿರುವುದು ಸಂತಸ ತಂದಿದೆ. ತಮ್ಮ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು, ಮುಂಜಾಗ್ರತಾ ಕ್ರಮದೊಂದಿಗೆ ಈ ಕಾರ್ಯ ಮಾಡುತ್ತಿದ್ದಾರೆ. ವಿಷಯ ತಿಳಿದ ನಂತರ ಸುರಕ್ಷತೆಯಿಲ್ಲದೇ ಹೊರಗೆ ಬಾರದಂತೆಯೂ ಅವರಿಗೆ ತಿಳಿಸಿದ್ದೇನೆ. |ಭಾಸ್ಕರ ನಾಯ್ಕ, ಮುಖ್ಯಾಧ್ಯಾಪಕರು, ಸ.ಹಿ.ಪ್ರಾ ಶಾಲೆ ನಂದೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts