More

    ಮಾತೃಭಾಷೆಯಲ್ಲೇ ಗುಣಮಟ್ಟದ ಶಿಕ್ಷಣ ಕೊಡಿಸಿ

    ಅರಕಲಗೂಡು: ಆಂಗ್ಲ ಭಾಷಾ ವ್ಯಾಮೋಹ ಬದಿಗಿರಿಸಿ ಮಾತೃಭಾಷೆಯಲ್ಲೇ ಗುಣಮಟ್ಟದ ಶಿಕ್ಷಣ ನೀಡಿದರೆ ಮಕ್ಕಳು ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂದು ಹಾಸನದ ಎ.ವಿ.ಕೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸೀ.ಚ.ಯತೀಶ್ವರ ಸಲಹೆ ನೀಡಿದರು.

    ತಾಲೂಕಿನ ಕೊಣನೂರು ಬಿ.ಎಂ.ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕುವೆಂಪು ದತ್ತಿ ನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಗುವು ಕನಿಷ್ಠ ಹಿರಿಯ ಪ್ರಾಥಮಿಕ ಹಂತದವರೆಗೆ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಪಡೆದಲ್ಲಿ ಆ ಮಗುವಿನ ಚಿಂತನಾ ಕ್ರಮ, ಪ್ರಜ್ಞೆ, ವಿವೇಕ ಎಲ್ಲವೂ ಕೂಡ ವಿಕಸಿತಗೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂಬುದು ಕುವೆಂಪು ಅವರ ದೃಢವಾದ ಅಭಿಪ್ರಾಯವಾಗಿತ್ತು. ಮಾತೃಭಾಷೆಯ ಮೂಲಕ ಅತ್ಯಂತ ಸದೃಢವಾಗಿ ಬೆಳೆಸಬೇಕಿರುವ ಮಕ್ಕಳನ್ನು ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಬಲಿಯಾಗಿಸಿ ಮಾಧ್ಯಮದ ಹೆಸರಿನಲ್ಲಿ ಕಂಠಪಾಠದ ಗಿಳಿಗಳನ್ನಾಗಿ ರೂಪಿಸುವ ಅನಿವಾರ್ಯತೆ ವರ್ತಮಾನದ ದುರಂತವಾಗಿದೆ ಎಂದರು.

    ಮಕ್ಕಳಿಗೆ ಸಾಹಿತ್ಯದ ಸಂಪರ್ಕವಿಲ್ಲದೆ ಬರಿ ಭಾಷೆಯನ್ನೇ ಕಲಿಯಲು ತಮ್ಮ ಸಮಯವನ್ನು ವಿನಿಯೋಗವಾಗುತ್ತಿರುವ ಸನ್ನಿವೇಶವನ್ನು ಇಂದು ಕಾಣುತ್ತಿದ್ದೇವೆ. ಹಳ್ಳಿ ಹಳ್ಳಿಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ತಲೆಯೆತ್ತಿದ್ದು, ಬದುಕನ್ನು ಕಟ್ಟಿಕೊಳ್ಳಲು ಆಂಗ್ಲಭಾಷೆಯನ್ನು ಓದಬೇಕು ಎಂಬ ಸಂಕುಚಿತ ಮನೋಭಾವನೆಯ ನೆಲೆಗೆ ಬಂದು ನಿಂತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

    ಕನ್ನಡ ವಿಭಾಗದ ಮುಖ್ಯಸ್ಥ ಎ.ಎನ್.ರವಿ ಮಾತನಾಡಿದರು. ಕಾರ್ಯಕ್ರಮದಲ್ಲಿ 2020-21ನೇ ಸಾಲಿನಲ್ಲಿ ಕನ್ನಡ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ಅನುಪಮಾ ಮತ್ತು ಚಂದನಾ ಅವರನ್ನು ಗೌರವಿಸಲಾಯಿತು. ಪ್ರಾಂಶುಪಾಲ ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಸಿಡಿಸಿ ಸದಸ್ಯೆ ಮಣಿ ನಾಗೇಶ್, ಪ್ರಾಧ್ಯಾಪಕರಾದ ಸತ್ಯನಾರಾಯಣ, ಮಹೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts