More

    ಮಾತು ತಪ್ಪಿದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ

    ಬೈಲಹೊಂಗಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಡಿ.19ರಂದು 2ಎ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೆ ಡಿ.22ರಂದು ಸುವರ್ಣ ವಿಧಾನಸೌಧಕ್ಕೆ 25 ಲಕ್ಷ ಜನರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು. ಪಟ್ಟಣದ ಶೂರ ಸಂಗೊಳ್ಳಿ ರಾಯಣ್ಣ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾವೇಶವನ್ನು ಶಾಲಾ ಮಕ್ಕಳೊಂದಿಗೆ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯದ ಬಡ ಮಕ್ಕಳಿಗೆ ಶಿಕ್ಷಣ, ಉದ್ಯೋಗ ದೊರಕಿಸಲು ಕೇಂದ್ರ ಸರ್ಕಾರ ಹಿಂದುಳಿದ ವರ್ಗಕ್ಕೆ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆ ಮಾಡಬೇಕು. ಮುಖ್ಯಮಂತ್ರಿ ಬೊಮ್ಮಾಯಿ ಅವರು ನಾಲ್ಕು ಬಾರಿ ಮಾತು ಕೊಟ್ಟು ಎಡವಿದ್ದಾರೆ. ಮತ್ತೆ ಮಾತಿಗೆ ತಪ್ಪಿದರೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಬಿಸಿ ಮುಟ್ಟಿಸಬೇಕೆಂದು ಕರೆ ನೀಡಿದರು.

    ಈ ಭಾಗಕ್ಕೆ ಪಂಚಮಸಾಲಿಗಳ ಕೊಡುಗೆ ಅನನ್ಯವಾಗಿದೆ. ಮತಕ್ಷೇತ್ರದಲ್ಲಿ 96 ಸಾವಿರ ಪಂಚಮಸಾಲಿಗಳಿದ್ದು, ಎಲ್ಲರೂ ಒಗ್ಗಟ್ಟಿನಿಂದ ಸಮಾಜದ ಸಂಘಟನೆಗೆ ಮುಂದಾಗಬೇಕು. ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿ ವೀರ ರಾಣಿ ಕಿತ್ತೂರು ಅಶ್ವಾರೂಢ ಮೂರ್ತಿ ಪ್ರತಿಷ್ಠಾಪಿಸಲು ವಿಳಂಬ ಮಾಡಿದ್ದಲ್ಲದೆ ಉದ್ದೇಶಪೂರ್ವಕವಾಗಿ ಚನ್ನಮ್ಮ ಪಂಚಮಸಾಲಿ ಆಗಿದ್ದರಿಂದ ಅವಳ ಇತಿಹಾಸ ಮುಚ್ಚಿಡಲಾಯಿತು ಎಂದು ಆರೋಪಿಸಿದರು.

    ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಬೈಲಹೊಂಗಲ ಮತಕ್ಷೇತ್ರದ ಜನರನ್ನು ಕತ್ತಲಲ್ಲಿ ಇಡಲಾಗುತ್ತಿದ್ದು, ಇನ್ಮುಂದೆ ಅಂತಹ ಪರಿಸ್ಥಿತಿ ಬರಬಾರದು. ನಮ್ಮ ಸಮಾಜದವರನ್ನು ಮುಂದೆ ತನ್ನಿ. ಮುಂದಿನ 20 ವರ್ಷ ನನಗೆ ರಾಜಯೋಗವಿದೆ. ಮೂರನೆಯ ಮಹಡಿಯಲ್ಲಿ ಕುಳಿತುಕೊಳ್ಳುವುದು ಖಚಿತ. ಬೊಮ್ಮಾಯಿ ಮಾತು ಕೊಟ್ಟಂತೆ ಮೀಸಲಾತಿಯನ್ನು ನೀಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಇನ್ನೂ ಬಲಿಷ್ಠಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

    ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಚಿತ್ರನಟ ಚೇತನ ಅವರಿಗೆ ಹುಚ್ಚು ಹಿಡಿದಿದ್ದು, ಪಂಚಮಸಾಲಿಗಳಿಗೆ ಮೀಸಲಾತಿ ಅವಶ್ಯಕತೆ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಅವರ ಸಿನಿಮಾಗಳನ್ನು ಸಮಾದಾಯದವರು ತಿರಸ್ಕರಿಸಬೇಕು ಎಂದರು. ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಕ್ಷೇತ್ರಕ್ಕೆ ಚಚಡಿ, ಮುರಗೋಡ ನೀರಾವರಿ ಯೋಜನೆಯ ಕೊಡುಗೆ ನೀಡಿದ್ದೇನೆ. ಈ ಹಿಂದೆ ರೈತರನ್ನು ಕಡೆಗಣಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲಾಗಿತ್ತು. 2ಎ ಮೀಸಲಾತಿ ಹೋರಾಟ ಅಂತಿಮ ಹಂತಕ್ಕೆ ಬಂದಿದ್ದು, ಹೋರಾಟಕ್ಕೆ ಜಯ ಸಿಗುವ ವಿಶ್ವಾಸವಿದೆ ಎಂದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಚಿವ ವಿನಯ ಕುಲಕರ್ಣಿ, ಮಹಾಂತೇಶ ದೊಡಗೌಡರ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವ ಎ.ಬಿ. ಪಾಟೀಲ, ರೋಹಿಣಿ ಪಾಟೀಲ ಮಾತನಾಡಿದರು. ಮಾಜಿ ಸಚಿವ ಶಶಿಕಾಂತ ನಾಯಕ, ಗುರುಪುತ್ರಪ್ಪ ತುರಮರಿ, ಬಸವರಾಜ ಬಾಳೇಕುಂದರಗಿ, ಶ್ರೀಶೈಲ ಬೊಳನ್ನವರ, ಮಹೇಶ ಹರಕುಣಿ, ಬಸವರಾಜ ಜನ್ಮಟ್ಟಿ, ಬಾಬು ಕುಡಸೋಮಣ್ಣವರ, ರಾಜಶೇಖರ ಮೂಗಿ, ಮಹಾಂತೇಶ ತುರಮರಿ, ಮುರುಗೇಶ ಗುಂಡ್ಲೂರ, ಸಿ.ಆರ್.ಪಾಟೀಲ, ಪಂಚನಗೌಡ ದ್ಯಾಮನಗೌಡ್ರ, ಎಚ್.ಎಸ್. ಶಿವಶಂಕರಪ್ಪ, ಎಫ್.ಎಸ್.ಸಿದ್ದನಗೌಡರ, ಬಿ.ಎಂ.ಚಿಕ್ಕನಗೌಡರ, ಬಾಳನಗೌಡ ಪಾಟೀಲ ಇದ್ದರು. ಶಂಕರ ಮಾಡಲಗಿ ಸ್ವಾಗತಿಸಿದರು. ಗೌರಿ ಮಟ್ಟಿ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts