More

    ಮಾಚಿದೇವ ವಚನಗಳ ಸಂರಕ್ಷಕ

    ಚಿತ್ರದುರ್ಗ: ಮಡಿವಾಳ ಮಾಚಿದೇವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವರ ದಾರಿಯಲ್ಲಿ ನಾವುಗಳು ಸಾಗಬೇಕಿದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
    ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
    ಬಸವಣ್ಣನ ಅನುಭವ ಮಂಟಪದಲ್ಲಿ ಮಾಚಿದೇವರು ಪ್ರಮುಖ ಸ್ಥಾನ ಹೊಂದಿದ್ದರು. ಮಾಚಿದೇವರನ್ನು ವೀರಭದ್ರಸ್ವಾಮಿ ಅವತಾರವೆಂದೇ ನಾವೆಲ್ಲರೂ ಭಾವಿಸಿದ್ದೇವೆ. ವಚನ ಸಾಹಿತ್ಯವನ್ನು ಸಂರಕ್ಷಿಸಿ, ನಾಡಿಗೆ ಉಳಿಸಿಕೊಟ್ಟಂಥ ದೊಡ್ಡ ಕೀರ್ತಿ ಮಡಿವಾಳ ಮಾಚಿ ದೇವರಿಗೆ ಸಲ್ಲುತ್ತದೆ ಎಂದರು.
    ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಸಮಾಜವಿಂದು ಸಂಸ್ಕೃತಿ, ಸಂಸ್ಕಾರ ವಿನಾಶದತ್ತ ಸಾಗುತ್ತಿದ್ದು, ಆದರ್ಶ ಮಹನೀಯರು,ದಾರ್ಶನಿಕರು, ವಚನಕಾರರನ್ನು ಸ್ಮರಿಸುವ ಅನಿವಾರ್ಯತೆ ಎದುರಾಗಿದೆಮ ಎಂದು ಹೇಳಿದರು.
    ರಾಜ್ಯ ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿದೆ. 12ನೇ ಶತಮಾನದಲ್ಲಿ ಬಸವಣ್ಣ ಹಾಕಿಕೊಟ್ಟ ದಾರಿ ದೀವಿಗೆ ಇಂದಿಗೂ ಪ್ರಸ್ತುತವಾಗಿದೆ. ಅವರ ಆಶಯದ ಮೇಲೆ ನಮ್ಮ ಸಂವಿಧಾನ ರಚನೆಯಾಗಿದೆ. ಯಾವುದೇ ಸಮಾಜ ಮುಖ್ಯವಾಹಿನಿಗೆ ಬರಲು ಶಿಕ್ಷಣ, ಸಂಘಟನೆ, ಹೋರಾಟ ಬಹಳ ಮುಖ್ಯ. ಮಡಿವಾಳ ಸಮಾಜ ಶಿಕ್ಷಣಕ್ಕೆ ಮಹತ್ವ ನೀಡಬೇಕಿದೆ. ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಸಜ್ಜುಗೊಳಿಸಬೇಕಿದೆ ಎಂದರು.
    ಇತಿಹಾಸ ಸಂಶೋಧಕ ಎನ್.ಎಸ್.ಮಹಾಂತೇಶ್ ಮಾತನಾಡಿ, ಯಾರಿಗೂ ಜಗ್ಗದ ಮಾಚಿದೇವರು ತಮಗೆ ಕೊಟ್ಟ ಕೆಲಸವನ್ನು ನಿಷ್ಠೆಯಿಂದ ನಿಭಾಯಿಸುತ್ತಿದ್ದರು. ಬಸವಣ್ಣ, ಅಕ್ಕಮಹಾದೇವಿ ಅವರು ತಮ್ಮ ವಚನಗಳಲ್ಲಿ ಮಾಚಿದೇವರ ವ್ಯಕ್ತಿತ್ವ ಏನೆಂಬದನ್ನು ವಿವರಿಸಿದ್ದಾರೆ. ವಚನ ಸಾಹಿತ್ಯ ಉಳಿಸುವ ತಾಕತ್ತು ಇದ್ದುದರಿಂದಲೇ ಮಾಚಿದೇವರಿಗೆ ಅನುಭವಮಂಟಪದ ರಕ್ಷಣೆ ಹೊಣೆಯನ್ನು ಬಸವಣ್ಣ ನೀಡಿದ್ದರು. ಸ್ವಾಭಿಮಾನದ ಸಂಕೇತವಾಗಿರುವ ಮಡಿವಾಳ ಸಮಾಜ ಸಂಘಟನೆಗೆ ಒತ್ತು ನೀಡಬೇಕಿದೆ ಎಂದರು.
    ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಸೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯುಕ್ತೆ ಬಿ.ರೇಣುಕಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಬಿ.ರಾಮಪ್ಪ, ಕಾರ್ಯದರ್ಶಿ ಕೆ.ಆರ್. ಮಂಜುನಾಥ್, ರಾಜ್ಯ ಮಹಿಳಾ ಘಟಕ ಗೌರವಾಧ್ಯಕ್ಷೆ ಬಿ.ರಂಗಮ್ಮ, ಜಿಲ್ಲಾಧ್ಯಕ್ಷೆ ವೀಣಾಗೌರಣ್ಣ ಇದ್ದರು.
    ಪಂಡರಹಳ್ಳಿ ಗಂಜಿಗಟ್ಟಿ ಆರ್.ಕೃಷ್ಣಮೂರ್ತಿ ತಂಡದವರು ಗೀತಗಾಯನ ನಡೆಸಿಕೊಟ್ಟರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts