More

    ಮಹಿಳೆಯರ ಬದುಕಿಗೆ ಅನುಪಮ ಆಸರೆ

    ಲಕ್ಷೆ್ಮೕಶ್ವರ: ಕೋವಿಡ್-19 ವೈರಸ್, ಲಾಕ್​ಡೌನ್​ನಿಂದ ನಗರದಲ್ಲಿನ ಉದ್ಯೋಗ ಕಳೆದುಕೊಂಡು ಸ್ವಗ್ರಾಮಕ್ಕೆ ಮರಳಿದ ಅನೇಕ ಮಹಿಳೆಯರಿಗೆ ತಾಲೂಕಿನ ಶಿಗ್ಲಿ ಗ್ರಾಮದ ಮಹದೇವ ಬದಾಮಿ ಅವರು ಉದ್ಯೋಗ ಒದಗಿಸಿ, ಅವರ ಬದುಕಿಗೆ ನೆರವಾಗಿದ್ದಾರೆ.

    ಲಾಕ್​ಡೌನ್ ಘೊಷಣೆಯಿಂದ ಬಹುತೇಕ ಜನರು ಉದ್ಯೋಗವಿಲ್ಲದೆ ಅತಂತ್ರ ಜೀವನ ನಡೆಸುವ ಪರಿಸ್ಥಿತಿ ನಿರ್ವಣವಾಯಿತು. ಉದ್ಯೋಗ ಅರಸಿ ನಗರಗಳಿಗೆ ಹೋಗಿದ್ದ ಗ್ರಾಮೀಣ ಜನತೆ ಜೀವನ ನಡೆಸುವುದೇ ಕಷ್ಟವಾಗಿತ್ತು. ಆದರೆ, ಅನುಪಮ ಡ್ರೆಸಸ್ ಮಾಲೀಕ ಮಹದೇವ ಬದಾಮಿ ಅವರು ಸಿದ್ಧ ಉಡುಪುಗಳ ತಯಾರಿಕೆಯ ಕಾರ್ಯದಲ್ಲಿ ಅನೇಕ ಮಹಿಳೆಯರಿಗೆ ಕೆಲಸ ಕೊಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ನೇಕಾರಿಕೆಗೆ ಹೆಸರಾದ ಶಿಗ್ಲಿ ಗ್ರಾಮದ ಮಹದೇವ ಬದಾಮಿ ಮೂಲತಃ ನೇಕಾರಿಕೆ ಕುಟುಂಬದವರು. ಪಿಯುಸಿವರೆಗೆ ಓದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನೇಕಾರಿಕೆ ಉತ್ಪನ್ನ ಮತ್ತು ಉದ್ಯೋಗದಲ್ಲಿ ನಷ್ಟವಾಗುತ್ತಿರುವುದನ್ನು ಅರಿತ ಅವರು ಅನುಪಮಾ ಡ್ರೆಸಸ್ ಹೆಸರಿನಲ್ಲಿ ಸಿದ್ಧ ಉಡುಪುಗಳ ತಯಾರಿಕೆಯತ್ತ ಗಮನಹರಿಸಿದರು. ಪ್ರಾರಂಭದಲ್ಲಿ ತಾವು ಸಿದ್ಧಪಡಿಸಿದ ಉಡುಪುಗಳನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದರು. ನಂತರ ಸಿದ್ಧ ಉಡುಪುಗಳ ಗುಣಮಟ್ಟ, ಹೊಸತನ, ಸಾಂಪ್ರದಾಯಿಕ ಶೈಲಿ ಪರಿಗಣಿಸಿದ ದೇಶಪಾಂಡೆ ಫೌಂಡೇಷನ್, ತಮ್ಮ ವಸ್ತು ಪ್ರದರ್ಶನಗಳಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಿದರು. ಅಲ್ಲದೆ, 2019ರಲ್ಲಿ ‘ಉತ್ತಮ ಸಾಂಪ್ರದಾಯಿಕ ಉಡುಪುಗಳ ತಯಾರಕ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

    100ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ: ಬೆಂಗಳೂರು, ಪುಣೆ, ಆಂಧ್ರಪ್ರದೇಶ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಸ್ತು ಪ್ರದರ್ಶನದಲ್ಲಿ ಗಮನ ಸೆಳೆದ ಅನುಪಮ ಡ್ರೆಸಸ್​ನ ಉಡುಪುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಬೇಡಿಕೆಗೆ ತಕ್ಕಂತೆ ಡ್ರೆಸ್ ಪೊರೈಸಲು ತಮ್ಮೂರಿನಲ್ಲಿನ ಮಹಿಳಾ ಟೇಲರ್​ಗಳಿಗೆ ಉದ್ಯೋಗ ಕಲ್ಪಿಸಿದರು. ಈಗ ಲಕ್ಷ್ಮೇಶ್ವರ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ 80ಕ್ಕೂ ಹೆಚ್ಚು ಮಹಿಳೆಯರು ಕೆಲಸ ಪಡೆದುಕೊಂಡಿದ್ದಾರೆ. ಅಲ್ಲದೆ, 25 ಜನ ಕರಕುಶಲ ಕೆಲಸಗಾರರು ಕೆಲಸ ಮಾಡುತ್ತಾರೆ.

    ಚಿಕ್ಕ ಮಕ್ಕಳು, ವಿದ್ಯಾರ್ಥಿನಿಯರು, ಯುವತಿಯರಿಗೆ ಸಾಂಪ್ರದಾಯಿಕ ಉಡುಪುಗಳಾದ ಲಂಗಾ-ದಾವಣಿ, ಚೂಡಿ, ಫ್ರಾಕ್, ಫ್ಯಾನ್ಸಿ ಡ್ರೆಸ್ ತಯಾರಿಸಲಾಗುತ್ತದೆ. ತಮಿಳುನಾಡು, ಬೆಂಗಳೂರಿನಿಂದ ಬಟ್ಟೆ ಖರೀದಿಸಿ ಡಿಮಾಂಡ್​ಗೆ ತಕ್ಕಂತೆ ಬಟ್ಟೆ ಕಟ್ ಮಾಡಿ ಮಹಿಳೆಯರಿಗೆ ಕೊಡುತ್ತಾರೆ. ಒಂಡು ಡ್ರೆಸ್ ತಯಾರಿಸಿ ಕೊಡಲು ಇಂತಿಷ್ಟು ದರ ನಿಗದಿಪಡಿಸಲಾಗಿರುತ್ತದೆ.

    60 ಸಾವಿರ ಮಾಸ್ಕ್ ಮಾರಾಟ: ಕರೊನಾ ಸಂಕಷ್ಟದ ಕಾಲವನ್ನು ಸದ್ವಿನಿಯೋಗ ಪಡಿಸಿಕೊಂಡ ಮಹದೇವ ಅವರು ಶಿಗ್ಲಿ ಸೇರಿ ಸುತ್ತಲಿನ ಗ್ರಾಮ ಪಂಚಾಯಿತಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ಮತ್ತು ಎಸ್​ಎಸ್​ಎಲ್​ಸಿ ಪರೀಕ್ಷಾ ವಿದ್ಯಾರ್ಥಿಗಳಿಗೆ ಒಟ್ಟು 60 ಸಾವಿರಕ್ಕೂ ಹೆಚ್ಚು ಮಾಸ್ಕ್ ಸಿದ್ಧಪಡಿಸಿ ಮಾರಾಟ ಮಾಡಿದ್ದಾರೆ. ಜತೆಗೆ ಸಾವಿರಾರು ಮಾಸ್ಕ್​ಗಳನ್ನು ಉಚಿತವಾಗಿ ವಿತರಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

    ಕಳೆದ ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿಯೇ ಗಾರ್ವೆಂಟ್ಸ್ ಕೆಲಸ ಮಾಡುತ್ತಿದ್ದೆವು. ಕರೊನಾ ಭೀತಿಯಿಂದ ಬೆಂಗಳೂರು ಬಿಟ್ಟು ಗ್ರಾಮಕ್ಕೆ ಬಂದಾಗ ಉದ್ಯೋಗವಿಲ್ಲದೆ ಜೀವನ ಕಷ್ಟವಾಗಿತ್ತು. ಮಹದೇವ ಅವರ ಪರಿಚಯವಾಗಿ ಅವರಿಂದ ಬಟ್ಟೆ ಪಡೆದು ಅವರ ಸಲಹೆಯಂತೆ ಉಡುಪು ಹೊಲಿದು ಕೊಡುತ್ತೇವೆ. ನಿತ್ಯ ನಮ್ಮ ಮನೆಯ ಕೆಲಸದ ಜತೆಗೆ ತಿಂಗಳಿಗೆ 6 ಸಾವಿರ ರೂ. ದುಡಿಯುತ್ತಿದ್ದೇವೆ. ನನ್ನಂತಹ ಅನೇಕ ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಬದುಕಿಗೆ ಆಸರೆಯಾಗಿದೆ.
    | ನಾಗರತ್ನಾ ಕಲ್ಲೋಳಗಿಮಠ, ಟೇಲರ್

    ಪ್ರಾರಂಭದಲ್ಲಿ ನಮ್ಮ ಕುಟುಂಬದವರು ಮಾತ್ರ ಮಾಡುತ್ತಿದ್ದ ಉದ್ಯೋಗ, ದೇಶಪಾಂಡೆ ಫೌಂಡೇಷನ್ ಸೇರಿ ವ್ಯಾಪಾರಸ್ಥರ ಸಹಕಾರದಿಂದ ಬೇಡಿಕೆ ಹೆಚ್ಚಲು ಕಾರಣವಾಯಿತು. ಇದರಿಂದ ನಾನಷ್ಟೇ ಅಲ್ಲದೆ ಅನೇಕ ಬಡ ಮಹಿಳೆಯರಿಗೆ ಮನೆಯಲ್ಲಿಯೇ ಉದ್ಯೋಗ ಕಲ್ಪಿಸಲು ಸಾಧ್ಯವಾಗಿರುವುದು ಸಂತಸ ತಂದಿದೆ ಮತ್ತು ತನ್ನ ಜವಾಬ್ದಾರಿ ಹೆಚ್ಚಿಸಿದೆ.
    | ಮಹದೇವ ಬದಾಮಿ, ಅನುಪಮ ಡ್ರೆಸಸ್​ನ ಮಾಲೀಕರು ಶಿಗ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts