More

    ರೇವಣ್ಣ ಬಸವನಗುಡಿ ನಿವಾಸದಲ್ಲಿ ಸ್ಥಳ ಮಹಜರ್

    ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಸೋಮವಾರ ಎಚ್.ಡಿ.ರೇವಣ್ಣ ಅವರ ಬಸವನಗುಡಿ ನಿವಾಸಕ್ಕೆ ಸಂತ್ರಸ್ತೆಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.

    ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಆರೋಪಿಗಳಾಗಿದ್ದಾರೆ. ಈ ಹಿಂದೆ ಸಂತ್ರಸ್ತೆಯು ರೇವಣ್ಣ ಅವರ ಹೊಳೆನರಸೀಪುರದಲ್ಲಿನ ನಿವಾಸ ಮತ್ತು ಬಸವನಗುಡಿಯಲ್ಲಿನ ನಿವಾಸದಲ್ಲಿ ಮನೆಗೆಲಸ ಮಾಡಿಕೊಂಡಿದ್ದಾಗ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಆರೋಪ ಕೇಳಿ ಬಂದಿದೆ.

    ಸತತ ೫ ಗಂಟೆ ಸ್ಥಳ ಮಹಜರು:
    ಎಸ್‌ಐಟಿ ಅಧಿಕಾರಿಗಳು ಮೇ ೪ ರಂದು ಹೊಳೆನರಸೀಪುರದ ನಿವಾಸಕ್ಕೆ ಸಂತ್ರಸ್ತೆಯನ್ನು ಕರೆದೊಯ್ದು ಭವಾನಿ ರೇವಣ್ಣ ಮತ್ತು ವಕೀಲರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದ್ದರು. ಸೋಮವಾರ ಪೊಲೀಸ್ ಭದ್ರತೆಯಲ್ಲಿ ಸಂತ್ರಸ್ತೆಯನ್ನು ಬಸವನಗುಡಿಯಲ್ಲಿನ ನಿವಾಸಕ್ಕೆ ಕರೆತಂದು ಸತತ ೫ ಗಂಟೆ ಸ್ಥಳ ಮಹಜರು ನಡೆಸಿದರು. ಮನೆಯ ಪಡಸಾಲೆ, ಪಾರ್ಕಿಂಗ್, ಅಡುಗೆ ಮನೆ, ಬಾಲ್ಕನಿ, ಸ್ನಾನದ ಗೃಹ ಸೇರಿ ಹಲವು ಮನೆಯ ಹಲವು ಸ್ಥಳಗಳಲ್ಲಿ ಮಹಜರು ನಡೆಸಿದ್ದಾರೆ. ಈ ವೇಳೆ ಸಂತ್ರಸ್ತೆ ಯಾವ ಯಾವ ಸ್ಥಳಗಳಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಯಿತು ಎಂದು ಎಳೆ ಎಳೆಯಾಗಿ ವಿವರಿಸಿದ್ದಾರೆ ಎನ್ನಲಾಗಿದೆ.

    ಬಿಗಿ ಭದ್ರತೆಯಲ್ಲಿ ನಡೆದ ಮಹಜರು:
    ಸ್ಥಳ ಮಹಜರು ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಸವನಗುಡಿ ಠಾಣೆ ಪೊಲೀಸರು ರೇವಣ್ಣ ಅವರ ನಿವಾಸದ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದರು. ಬಳಿಕ ಎಸ್‌ಐಟಿ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಸಂತ್ರಸ್ತೆಯನ್ನು ವಾಹನದಲ್ಲಿ ಕರೆತಂದು ಸ್ಥಳ ಮಹಜರು ನಡೆಸಿದರು.

    ಏಕಪಕ್ಷೀಯವಾಗಿ ಮಹಜರು:
    ಎಸ್‌ಐಟಿ ಅಧಿಕಾರಿಗಳು, ನನ್ನ ಕಕ್ಷಿದಾರರಾದ ಶಾಸಕ ರೇವಣ್ಣ ಅವರಿಗೆ ಸೇರಿದ ಬಸವಗುಡಿಯಲ್ಲಿರುವ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ ವೇಳೆ ಮನೆಯೊಳಗೆ ತನ್ನನ್ನು ಬಿಡಲಿಲ್ಲ ಎಂದು ರೇವಣ್ಣ ಪರ ವಕೀಲ ಗೋಪಾಲ್ ಎಸ್‌ಐಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಜರು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ನಮಗೆ ನೋಟಿಸ್ ನೀಡಲಾಗಿತ್ತು. ಆದರೆ ನಮಗೆ ಮನೆಯ ಒಳಗಡೆ ಬಿಡಲಿಲ್ಲ. ಎಸ್‌ಐಟಿ ಅವರು ಒಂದು ಪಕ್ಷ ಮತ್ತು ಒಂದು ಏಜೆಂಟ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts