More

    ಮಹಾಶಿವರಾತ್ರಿ ಹಬ್ಬಕ್ಕೆ ಕೋಟೆನಾಡು ಸಜ್ಜು

    ಚಿತ್ರದುರ್ಗ: ಮಂಗಳಕರನಾದ ಮಹಾದೇವನನ್ನು ಶ್ರದ್ಧಾ-ಭಕ್ತಿಯಿಂದ ಆರಾಧಿಸುವ ಮೂಲಕ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲು ಕೋಟೆನಾಡಿನ ಹಲವು ಶಿವ ದೇಗುಲಗಳು ಸೇರಿ ಇತರೆಡೆ ಸಿದ್ಧತೆಗಳು ಭರದಿಂದ ಸಾಗಿವೆ.

    ಶುಕ್ರವಾರ ನಡೆಯಲಿರುವ ಹಬ್ಬದ ಅಂಗವಾಗಿ ಗುರುವಾರ ನಗರದ ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆ, ಮೆದೇಹಳ್ಳಿ ರಸ್ತೆ, ಸಂತೆಹೊಂಡ, ಆನೆಬಾಗಿಲು, ಗಾಂಧಿ ವೃತ್ತದಲ್ಲಿ ಪುಷ್ಪ, ಹಣ್ಣು ಸೇರಿ ಪೂಜಾ ಸಾಮಗ್ರಿ ಖರೀದಿಸಲು ಜನ ಮುಗಿಬಿದ್ದ ದೃಶ್ಯ ಕಂಡುಬಂದಿತು.

    ಪ್ರತಿ ವರ್ಷ ನಡೆಯುವ ಹಬ್ಬದ ವೇಳೆ ಕೋಟೆ ಆವರಣದಲ್ಲಿನ ಹಿಂಡಬೇಶ್ವರ, ಸಂಪಿಗೆ ಸಿದ್ದೇಶ್ವರ, ಕರಿವರ್ತಿ ಈಶ್ವರ, ಏಕನಾಥೇಶ್ವರಿ, ಬೆಟ್ಟದ ಗಣಪತಿ ದೇಗುಲಗಳಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿದ್ದು, ರಾತ್ರಿ ಇಡೀ ದರ್ಶನಕ್ಕೆ ಭಕ್ತರಿಗೆ ಅವಕಾಶವಿದೆ.

    ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ವೀರಶೈವ ಸಮಾಜದಿಂದ ಬೆಳಗ್ಗೆ 5ರಿಂದ 9.30ರವರೆಗೂ ಸಾಮೂಹಿಕ ರುದ್ರಾಭಿಷೇಕ ಆಯೋಜಿಸಲಾಗಿದೆ. ನಂತರ ಸ್ವಾಮಿಗೆ ವಿಶೇಷಾಲಂಕಾರ ಸೇವೆ ಜರುಗಲಿದೆ. ಇಡೀ ದಿನ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, 10 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ.

    ದೊಡ್ಡಪೇಟೆ ಕಂಬಳಿ ಬೀದಿಯ ಬೀರಗಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ಬೆಳಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಸಂಜೆ ಪ್ರಾರ್ಥನೆ, ರಾತ್ರಿ ಇಡೀ ಭಜನೆ ಜರುಗಲಿದೆ.

    4 ಯಾಮಗಳ ಪೂಜೆ: ಜೋಗಿಮಟ್ಟಿ ರಸ್ತೆಯ ಕೂಡಲೀ ಶೃಂಗೇರಿ ಮಹಾಸಂಸ್ಥಾನ ಶಾಖಾಮಠದಲ್ಲಿನ ಚಂದ್ರಮೌಳೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, 4 ಯಾಮಗಳ ವಿಶೇಷ ಪೂಜೆ ಜರುಗಲಿದೆ. ಸಂಜೆ 6.30ರಿಂದ 9ರವರೆಗೂ ಮೊದಲ, ರಾತ್ರಿ 9.30ರಿಂದ 12ರವರೆಗೂ ಎರಡನೇ, ತಡರಾತ್ರಿ 12.30ರಿಂದ 3ರವರೆಗೂ ಮೂರನೇ, 3.30ರಿಂದ ಬೆಳಗ್ಗೆ 6ವರೆಗೂ ನಾಲ್ಕನೇ ಯಾಮ ಪೂಜೆ ನಡೆಯಲಿದೆ.

    ಕೋಟೆ ರಸ್ತೆಯ ಗಾರೆಬಾಗಿಲು ಈಶ್ವರ, ಕರಿವರ್ತಿ ಈಶ್ವರ, ಕೆಳಗೋಟೆಯ ಬೇಡರ ಕಣ್ಣಪ್ಪ, ಗಾರೆಹಟ್ಟಿಯ ಮಹಾಬಲೇಶ್ವರ, ಚಿಕ್ಕಪೇಟೆಯ ಮಲ್ಲಿಕಾರ್ಜುನಸ್ವಾಮಿ, ಉಜ್ಜಿನಮಠದ ರಸ್ತೆಯ ಉಮಾ ಮಹೇಶ್ವರ, ವಾಸವಿ ಮಹಲ್‌ನ ನಗರೇಶ್ವರ, ಕಾಶಿ ವಿಶ್ವೇಶ್ವರ, ಭೈರವೇಶ್ವರ, ವೀರಭದ್ರೇಶ್ವರ ಸೇರಿ ಹಲವು ದೇಗುಲಗಳಲ್ಲಿ ಶಿವರಾತ್ರಿ ಹಬ್ಬದಂದು ಮಹಾರುದ್ರಾಭಿಷೇಕ, ವಿಶೇಷಾಲಂಕಾರ ಸೇವೆಯೊಂದಿಗೆ ಪೂಜಾ ಕೈಂಕರ್ಯಗಳು ಜರುಗಲಿವೆ. ಹಲವೆಡೆ ವಿದ್ಯುತ್ ದೀಪಾಲಂಕಾರ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಮಹಾರುದ್ರನ ದೇಗುಲಗಳು ಹೊರತುಪಡಿಸಿ ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಬರಗೇರಮ್ಮ, ಕಣಿವೆಮಾರಮ್ಮ, ಕಾಳಿಕಮಠೇಶ್ವರಿ, ಗೌರಸಂದ್ರ ಮಾರಮ್ಮ ದೇಗುಲಗಳಲ್ಲಿಯೂ ವಿಶೇಷ ಪೂಜೆಗಳು ನಡೆಯಲಿವೆ.

    ಮಾರುಕಟ್ಟೆಗೆ ಲಗ್ಗೆ ಇಟ್ಟ ಕಲ್ಲಂಗಡಿ: ಶಿವರಾತ್ರಿಯಲ್ಲಿ ಉಪವಾಸ ವ್ರತಾಚರಣೆಯನ್ನು ಅನೇಕರು ಮಾಡುವುದರಿಂದಾಗಿ ಸಾಮಾನ್ಯವಾಗಿ ಹಣ್ಣುಗಳಿಗೆ ಬೇಡಿಕೆ ಹೆಚ್ಚು. ಅದರಲ್ಲೂ ಕರಬೂಜ, ಕಲ್ಲಂಗಡಿ ಮಾರುಕಟ್ಟೆಗೆ ಹೇರಳವಾಗಿ ಲಗ್ಗೆ ಇಟ್ಟಿವೆ.

    ಕೆ.ಜಿ. ಕಲ್ಲಂಗಡಿ 25ರಿಂದ 30ರೂ., ಕರಬೂಜ 30ರಿಂದ 40ರೂ., ಸಪೋಟ 80ರೂ., ಕಿತ್ತಳೆ 60 ರೂ., ಸೇಬು 150ರಿಂದ 200ರೂ., ದ್ರಾಕ್ಷಿ 100ರಿಂದ 120ರೂ., ಬಾಳೆಹಣ್ಣು 70ರಿಂದ 80ರೂ., ತೆಂಗಿನ ಕಾಯಿ 20ರಿಂದ 30ರೂ., ಬಟನ್ಸ್ 300ರಿಂದ 400ರೂ., ಸಗಟು ಮಾರುಕಟ್ಟೆಯಲ್ಲಿ ತಲಾ 1ಸಾವಿರ ರೂ.ಗೆ ಗುಣಮಟ್ಟದ ಹಳದಿ, ಬಿಳಿ, ಕಲರ್ ಸೇವಂತಿ 6ರಿಂದ 8, ಕನಕಾಂಬರ 18 ಮಾರಿನಂತೆ ಮಾರಾಟವಾದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts