More

    ಮಹಾರಾಷ್ಟ್ರಮೀನುಗಾರರಿಂದ ಥಳಿತ

    ಕಾರವಾರ: 12 ನಾಟಿಕಲ್ ಮೈಲ್ ಒಳಗೆ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಏಳು ಮೀನುಗಾರರನ್ನು ಮಹಾರಾಷ್ಟ್ರ ಮೀನುಗಾರರು ಹಿಡಿದು ಥಳಿಸಿದ ಘಟನೆ ಮಂಗಳವಾರ ನಡೆದಿದೆ.

    ಮಲ್ಪೆ ಮೂಲದ ಅನಿಕೇತ ಶೆಟ್ಟಿ ಎಂಬುವವರಿಗೆ ಸೇರಿದ ಶ್ರೀ ಲಕ್ಷ್ಮೀ ಹೆಸರಿನ ಬೋಟ್​ನ ಮೀನುಗಾರರಿಗೆ ಮಹಾರಾಷ್ಟ್ರ ದೇವಗಡ ಸಮೀಪ ತೊಂದರೆ ಉಂಟಾಗಿದೆ. ಚಾಲಕ ಹೊನ್ನಾವರ ಮಂಕಿಯ ರಾಮ ಸೇರಿ ಉತ್ತರ ಕನ್ನಡ ಜಿಲ್ಲೆಯ ಏಳು ಮೀನುಗಾರರು ಬೋಟ್​ನಲ್ಲಿದ್ದರು.

    ‘ಮಂಗಳವಾರ ತೀರದಿಂದ 12 ನಾಟಿಕಲ್ ಮೈಲ್ ಹೊರಗೇ ನಾವು ಮೀನುಗಾರಿಕೆ ನಡೆಸುತ್ತಿದ್ದೆವು. ಆದರೆ, ದೇವಗಡದ ಸುಮಾರು 15 ಬೋಟ್​ಗಳು ಬಂದು ಮುತ್ತಿಗೆ ಹಾಕಿದವು. ಅಕ್ರಮವಾಗಿ ಮೀನುಗಾರಿಕೆ ನಡೆಸಿದ್ದೀರಿ ಎಂದು ಆರೋಪಿಸಿ ನಮ್ಮ ಮೇಲೆ ಹಲ್ಲೆ ನಡೆಸಲಾಯಿತು. ಹಿಡಿದ ಮೀನು, ಕೆಲವು ಅವಶ್ಯ ಸಾಮಗ್ರಿಗಳನ್ನು ಕಸಿದುಕೊಂಡು, ದಡಕ್ಕೆ ತಂದು ಮಹಾರಾಷ್ಟ್ರ ಕರಾವಳಿ ಕಾವಲುಪಡೆ ಪೊಲೀಸರಿಗೆ ಒಪ್ಪಿಸಲಾಯಿತು. ಎಲ್ಲರನ್ನೂ ಗೃಹ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ದೂರವಾಣಿ ಮೂಲಕ ಬಂಧಿತ ಮೀನುಗಾರರು ತಮ್ಮ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದಾರೆ.

    ನಿಷೇಧಿತ ಪ್ರದೇಶದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಮಹಾರಾಷ್ಟ್ರ ಮೀನುಗಾರಿಕೆ ಇಲಾಖೆ 1.5 ಲಕ್ಷ ರೂ. ದಂಡ ವಿಧಿಸುವುದಾಗಿ ತಿಳಿಸಿದೆ. ಬೋಟ್​ನ ಮಾಲೀಕರು ಮೀನುಗಾರರು ಹಾಗೂ ಬೋಟ್ ಬಿಡಿಸಿಕೊಳ್ಳಲು ಹೊರಟಿದ್ದಾರೆ ಎನ್ನಲಾಗಿದೆ.

    ಹಿಂದೆಯೂ ಹಲ್ಲೆ ನಡೆದಿತ್ತು: ಮಹಾರಾಷ್ಟ್ರ ಗಡಿಯಲ್ಲಿ ಮೀನುಗಾರಿಕೆಗೆ ತೆರಳುವ ರಾಜ್ಯದ ಮೀನುಗಾರರ ಮೇಲೆ ಹಲ್ಲೆ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ನಡೆದಿತ್ತು. ವರ್ಷದ ಹಿಂದೆ ಸುವರ್ಣ ತ್ರಿಭುಜ ಬೋಟ್ ಸಹ ಇದೇ ಭಾಗದಲ್ಲಿ ಮುಳುಗಡೆಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts