More

    ಮಹಾಬಲೇಶ್ವರ ಮಂದಿರದ ತುರ್ತು ಕೆಲಸಕ್ಕೆ ಹಿನ್ನಡೆ


    ಗೋಕರ್ಣ: ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದ ಆಡಳಿತ ಹಸ್ತಾಂತರ ಪೂರ್ಣಗೊಂಡು ಕೇವಲ ಒಂದೂವರೆ ತಿಂಗಳು ಮುಗಿದಿದೆ. ಸುಪ್ರೀಂಕೋರ್ಟ್ ಆದೇಶದಂತೆ ನೂತನ ಮೇಲುಸ್ತುವಾರಿ ಸಮಿತಿ ಅಧಿಕಾರ ಸ್ವೀಕರಿಸಿದೆ. ಆದರೆ, ಕಾನೂನಾತ್ಮಕವಾಗಿ ಆಗಬೇಕಾದ ಕೆಲವು ಅಗತ್ಯ ಆಡಳಿತಾತ್ಮಕ ಪ್ರಕ್ರಿಯೆಯ ವಿಳಂಬದಿಂದಾಗಿ ಮಂದಿರದಲ್ಲಿ ತುರ್ತಾಗಿ ಆಗಬೇಕಾದ ಕೆಲಸಗಳಿಗೆ ಹಿನ್ನಡೆ ಉಂಟಾಗಿದೆ.
    ತೌಕ್ತೆ ಮಾಡಿದ ಹಾನಿ:
    ಮೇ ತಿಂಗಳಲ್ಲಿ ಉಂಟಾದ ತೌಕ್ತೆ ಚಂಡ ಮಾರುತಕ್ಕೆ ಮಂದಿರದ ಅಮೃತಾನ್ನ ಭೋಜನ ಶಾಲೆಯ ಪ್ರವೇಶ ದ್ವಾರದಲ್ಲಿರುವ ಕೌಂಟರ್ ಮೇಲಿನ ಛಾವಣಿಗೆ ಹಾನಿಯಾಗಿದೆ. ಛಾವಣಿಯ ಮುಂಭಾಗ ತುಂಡಾಗಿ ಶೀಟ್​ಗಳು ಹಾರಿಹೋಗಿವೆ. ಇದರ ದುರಸ್ತಿ ತ್ವರಿತವಾಗಿ ಆಗದೇ ಹೋದಲ್ಲಿ ಭೋಜನಶಾಲೆಯ ಉಳಿದ ಭಾಗಕ್ಕೂ ಹಾನಿಯಾಗುವ ಸಂಭವವಿದೆ.
    ಗರ್ಭಗುಡಿಗೆ ನೀರು:
    ಕಳೆದ ಕೆಲ ದಿನದ ಹಿಂದೆ ಸುರಿದ ಭಾರಿ ಮಳೆಗೆ ಸಮುದ್ರದ ಹಿನ್ನೀರು ನುಗ್ಗಿ ಬಂದ ಪರಿಣಾಮ ಗರ್ಭಗುಡಿ ಕೆಲ ಕಾಲ ಜಲಾವೃತವಾಗಿ ಆತ್ಮಲಿಂಗ ಮುಳುಗುವಂತಾಯಿತು. ಇದು ಇದೇ ಮೊದಲ ಬಾರಿಗೆ ಉಂಟಾದ ತೊಂದರೆಯಲ್ಲ. ಇದು ಕಳೆದ ನಾಲ್ಕೈದು ದಶಕಗಳಿಂದ ಸಾಗಿ ಬಂದ ವಿಪತ್ತಾಗಿದೆ. ಸಮುದ್ರದ ಉಬ್ಬರದ ವೇಳೆ ಭಾರಿ ಮಳೆ ಸುರಿದರೆ ಆ ಸಮಯದಲ್ಲಿ ಸಮುದ್ರದ ಹಿನ್ನೀರು ಮಂದಿರದ ಪೂಜೆ ಮಾಡಿದ ನೀರನ್ನು ಹೊರ ಸಾಗಿಸುವ ಸೋಮಸೂತ್ರ ನಾಲೆ ಮೂಲಕ ಗರ್ಭಗುಡಿಗೆ ನುಗ್ಗುತ್ತದೆ. ಈ ಹಿಂದಿನ ಶ್ರೀಮಠದ ಆಡಳಿತ ಇದನ್ನು ತಡೆಯಲು ಅನೇಕ ಪ್ರಯತ್ನ ಮಾಡಿತ್ತು. ಸೋಮಸೂತ್ರದ ನೀರನ್ನು ಪಂಪ್ ಮೂಲಕ ಹೊರ ಹಾಕುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವರ್ಷ ಅದೇ ಸೋಮಸೂತ್ರದ ಒಂದು ಬದಿಯ ಗೋಡೆ ಕುಸಿದು ನೀರು ಒಳ ಸೇರಲು ಸುಲಭದ ದಾರಿ ಮಾಡಿಕೊಟ್ಟಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ. ಚಿಕ್ಕ ನೀರಾವರಿ ಇಲಾಖೆ ಮೂಲಕ ಈ ಬಗ್ಗೆ ಸರ್ವೆ ಮಾಡಿಸಿ ಪರಿಹಾರ ಮಾರ್ಗ ರೂಪಿಸಲಾಗುವುದು ಎಂದು ಮಂದಿರದ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿಗಳು ತಿಳಿಸಿದ್ದಾರೆ.
    ಆರ್ಥಿಕ ನಿರ್ವಹಣೆ
    ಒಟ್ಟಾರೆಯಾಗಿ ಮಂದಿರದಲ್ಲಿ ಜರೂರಾಗಿ ಆಗಲೇ ಬೇಕಾದ ಕಾಮಗಾರಿಗಳಿಗೆ ಹಣಕಾಸಿನ ಅಗತ್ಯವಿದೆ. ಈ ಹಿಂದಿನ ಆಡಳಿತ ಮಂಡಳಿ ಸಾಕಷ್ಟು ಹಣವನ್ನು ಬ್ಯಾಂಕ್​ಗಳಲ್ಲಿ ಇಟ್ಟು ಹೋಗಿದೆ. ಆದರೆ, ಕೆಲವು ಬ್ಯಾಂಕ್ ಪ್ರಕ್ರಿಯೆಗಳು ಇನ್ನೂ ಪೂರ್ತಿಯಾಗದೆ ಇರುವುದರಿಂದ ಈ ಕೆಲಸಗಳಲ್ಲಿ ವಿಳಂಬ ಗತಿ ಬಂದಿದೆ. ಮಂದಿರದ ದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈಗಿರುವ ವಿವಿಧ ಬ್ಯಾಂಕ್​ಗಳಲ್ಲಿನ ವ್ಯವಹಾರವನ್ನು ಏಕಸೂತ್ರಕ್ಕೆ ತರಲಾಗುತ್ತಿದೆ. ಇದರ ಜೊತೆಗೆ ಬ್ಯಾಂಕ್​ಗಳ ವ್ಯವಹಾರ ನಿರ್ವಹಣೆ ಮತ್ತು ಚೆಕ್​ಗಳಿಗೆ ಯಾರು ಯಾರು ಸಹಿ ಮಾಡುವುದು ಎನ್ನುವುದರ ಬಗ್ಗೆಯೂ ನಿರ್ಣಯ ತಳೆಯಲಾಗುತ್ತಿದೆ.

    ಮಂದಿರಕ್ಕೆ ತುರ್ತಾಗಿ ಕೆಲವು ಕೆಲಸಗಳು ಆಗಲೇ ಬೇಕಾಗಿವೆ. ಇವುಗಳು ಮೇಲುಸ್ತುವಾರಿ ಸಮಿತಿ ಗಮನಕ್ಕೂ ಬಂದಿದೆ. ಇವುಗಳಿಗೆ ಸಂಬಂಧಿಸಿದಂತೆ ಆರ್ಥಿಕ ನಿರ್ವಹಣೆಯ ಬಗ್ಗೆ ಕಾನೂನು ಪ್ರಕಾರ ಆಗಬೇಕಾದ ಕೆಲಸಗಳು ಮುಂದುವರಿದಿದ್ದು, ಅವುಗಳು ಕ್ಷಿಪ್ರದಲ್ಲಿ ಪೂರ್ತಿಯಾಗುವ ನಿರೀಕ್ಷೆಯಿದೆ.
    | ಮಹಾಬಲ ಜಿ. ಉಪಾಧ್ಯ, ಮೇಲುಸ್ತುವಾರಿ ಸಮಿತಿ ಸದಸ್ಯ


    ದಶಕಗಳಿಂದಲೂ ಭಾರಿ ಮಳೆ ವೇಳೆ ಮಂದಿರದ ಗರ್ಭಗುಡಿ ಜಲಾವೃತವಾಗುತ್ತಿದೆ. ಇದಕ್ಕೆ ವಿಸ್ತ್ರತವಾದ ಸಮೀಕ್ಷೆ ನಡೆಸಿ ಸಮಸ್ಯೆಯನ್ನು ಕಾಯಂ ಆಗಿ ಕೊನೆಗೊಳಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದ ಇಲಾಖೆಯ ಸಹಾಯ ಪಡೆಯಲಾಗುತ್ತಿದೆ. ಸಮೀಕ್ಷೆ ಆಧರಿಸಿ ಅಗತ್ಯ ಕಾಮಗಾರಿಯ ಬಗ್ಗೆ ಯೋಜಿಸಲಾಗುವುದು.
    | ಅಜಿತ ಎಂ.ರೈ, ಕಾರ್ಯದರ್ಶಿ ಮೇಲುಸ್ತುವಾರಿ ಸಮಿತಿ ವಿಭಾಗೀಯ ಅಧಿಕಾರಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts