More

    ಮಹಾನಗರ ಪಾಲಿಕೆಗೆ ಕೃಷ್ಣಪ್ಪ ಮೇಯರ್ ; ಮೀಸಲಾತಿ ಬಲದಿಂದ ಒಲಿದ ಅದೃಷ್ಟ ;ಜೆಡಿಎಸ್‌ನ ನಾಜಿಮಾಬಿ ಉಪಮೇಯರ್ ; ಜೆಡಿಎಸ್, ಕಾಂಗ್ರೆಸ್ ಮೈತ್ರಿ

    ತುಮಕೂರು: ಮಹಾನಗರ ಪಾಲಿಕೆ ಮೇಯರ್ ಆಗಿ 32ನೇ ವಾರ್ಡ್‌ನ ಬಿಜೆಪಿ ಸದಸ್ಯ ಬಿ.ಜಿ.ಕೃಷ್ಣಪ್ಪ ಹಾಗೂ ಉಪಮೇಯರ್ ಆಗಿ 29ನೇ ವಾರ್ಡ್ ಜೆಡಿಎಸ್ ಸದಸ್ಯೆ ನಾಜಿಮಾಬಿ ಶುಕ್ರವಾರ ಅವಿರೋಧ ಆಯ್ಕೆಯಾದರು.
    ಎಸ್‌ಟಿಗೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಕಾಂಗ್ರೆಸ್, ಜೆಡಿಎಸ್‌ನಲ್ಲಿ ಸದಸ್ಯರೇ ಇಲ್ಲದಿದ್ದ ಕಾರಣಕ್ಕೆ ಕೃಷ್ಣಪ್ಪ ಆಯ್ಕೆ ನಿರೀಕ್ಷಿತವಾಗಿತ್ತು. ಹಾಗಾಗಿ, ಮೀಸಲಾತಿ ಬಲದಿಂದ ಬರೋಬ್ಬರಿ ಹನ್ನೊಂದು ವರ್ಷದ ಬಳಿಕ ಪಾಲಿಕೆಯ ಆಡಳಿತದ ಚುಕ್ಕಾಣಿ ಬಿಜೆಪಿಗೆ ನಿರಾಯಾಸವಾಗಿ ಒಲಿಯಿತು.

    ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು 29ನೇ ವಾರ್ಡ್ ಸದಸ್ಯೆ ನಾಜಿಮಾಬಿ ಅವರನ್ನು ಕಣಕ್ಕಿಸಿದ್ದವು. ಸ್ಪಷ್ಟ ಬಹುಮತ ಹೊಂದಿದ್ದ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ವಿರುದ್ಧ ಗೆಲುವು ಅಸಾಧ್ಯ ಎಂಬುದನ್ನು ಅರಿತಿದ್ದ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅವಿರೋಧ ಆಯ್ಕೆಗೆ ಸಹಕಾರ ನೀಡಿತು.
    ಶುಕ್ರವಾರ ಬೆಳಗ್ಗೆ 11ಕ್ಕೆ ಪಾಲಿಕೆ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆರ್.ಜಿ.ನವೀನ್‌ರಾಜ್ ಸಿಂಗ್ ನಡೆಸಿಕೊಟ್ಟರು, ಎರಡೂ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದ ಕಾರಣಕ್ಕೆ ಅವಿರೋಧ ಆಯ್ಕೆ ಘೋಷಿಸಿ ನೂತನ ಮೇಯರ್, ಉಪಮೇಯರ್‌ಗೆ ಹೂಗುಚ್ಚ ನೀಡಿ ನಿರ್ಗಮಿಸಿದರು.

    ಪಾಲಿಕೆಯಲ್ಲಿ ಬಿಜೆಪಿ 12 ಸದಸ್ಯರು, ಪಕ್ಷೇತರ ಸದಸ್ಯ ವಿಷ್ಣುವರ್ಧನ್ ಹಾಗೂ ಮತದಾನದ ಹಕ್ಕು ಹೊಂದಿದ್ದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಂಸದ ಜಿ.ಎಸ್.ಬಸವರಾಜು ಮತಗಳು ಸೇರಿ ಒಟ್ಟು 15 ಸಂಖ್ಯೆಯ ಬಲ ಹೊಂದಿದೆ. ಜೆಡಿಎಸ್ ತನ್ನ 10 ಸದಸ್ಯರು, ಪಕ್ಷೇತರ ಸದಸ್ಯ ಶಿವರಾಮ್ ಹಾಗೂ ವಿಧಾನ ಪರಿಷತ್ ಸದಸ್ಯ ಕಾಂತರಾಜು ಸೇರಿ 12 ಮತ ಹಾಗೂ ಕಾಂಗ್ರೆಸ್ 10 ಸದಸ್ಯರ ಜತೆ ಒಬ್ಬರು ಪಕ್ಷೇತರರ ಬೆಂಬಲವಿತ್ತು. ಇಷ್ಟೆಲ್ಲಾ ಒಂದಾಗಿದ್ದರೆ ಮೈತ್ರಿಗೆ ಅಧಿಕಾರ ಪಡೆಯುವುದು ಸುಲಭವಾಗಿತ್ತು.
    ಚುನಾವಣೆ ನಡೆದರೆ ಅಧಿಕಾರ ಹಿಡಿಯುವುದು ಅಸಾಧ್ಯ ಎಂದೆಣಿಸಿದ್ದ ಬಿಜೆಪಿಗೆ ಸರ್ಕಾರ ಘೋಷಿಸಿದ ಮೀಸಲಾತಿ ಲಾಭ ತಂದಿದ್ದು, ಜೆಡಿಎಸ್‌ಗೆ ಉಪಮೇಯರ್ ಸ್ಥಾನ ಹಾಗೂ ಕಾಂಗ್ರೆಸ್‌ಗೆ ವಿರೋಧ ಪಕ್ಷದ ಸ್ಥಾನ ಉಳಿದಿದೆ. ಮೇಯರ್ ಬಿ.ಜಿ.ಕೃಷ್ಣಪ್ಪ ಹಾಗೂ ಉಪಮೇಯರ್ ನಾಜಿಮಾಬಿ ಅವರನ್ನು ಸಂಸದ ಜಿ.ಎಸ್.ಬಸವರಾಜ್, ಶಾಸಕ ಜಿ.ಬಿ.ಜ್ಯೋತಿಗಣೇಶ್ ಸನ್ಮಾನಿಸಿದರು. ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.

    ಸ್ಥಾಯಿ ಸಮಿತಿಗೆ ಆಯ್ಕೆ: ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಸದಸ್ಯರಾಗಿ ಟಿ.ಎಂ.ಮಹೇಶ್, ಎಂ.ಸಿ.ನವೀನಾ, ನಳಿನಾ ಇಂದ್ರಕುಮಾರ್, ಎಚ್.ಎಂ.ದೀಪಶ್ರೀ, ವೀಣಾ ಬಿ.ಜಿ, ಎಚ್.ಎಸ್.ನಿರ್ಮಲಾ, ಎ.ಶ್ರೀನಿವಾಸ ಆಯ್ಕೆಯಾದರು.
    ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಸೈಯದ್ ನಯಾಜ್, ಲಕ್ಷ್ಮೀನರಸಿಂಹ ರಾಜು, ಕೆ.ಎಸ್.ಮಂಜುಳಾ, ಎಂ.ಪ್ರಭಾವತಿ, ಬಿ.ಎಸ್.ರೂಪಶ್ರೀ, ಶಿವರಾಮ, ಬಿ.ಎಸ್.ಮಂಜುನಾಥ ಆಯ್ಕೆಯಾದರು.
    ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿಗೆ ಧರಣೇಂದ್ರ ಕುಮಾರ್, ಶ್ರೀನಿವಾಸಮೂರ್ತಿ, ಲಲಿತಾ ರವೀಶ್, ನಾಸಿರಾ ಬಾನು, ಎಸ್.ಮಂಜುನಾಥ, ವಿಷ್ಣುವರ್ಧನ, ಎಂ.ಕೆ.ಮನು, ಲೆಕ್ಕಪತ್ರಗಳ ಸ್ಥಾಯಿ ಸಮಿತಿಗೆ ಇನಾಯತುಲ್ಲಾ ಖಾನ್, ಮುಜೀದಾ ಖಾನಂ, ಫರೀದ ಬೇಗಂ, ನೂರು ಉನ್ನೀಸಾ, ಗಿರಿಜಾ ವಿ.ಎಸ್, ಎಚ್.ಮಲ್ಲಿಕಾರ್ಜುನಯ್ಯ, ಷಕೀಲ್‌ಅಹಮ್ಮದ್ ಆಯ್ಕೆಯಾದರು.

    1 ವರ್ಷಗಳ ಬಳಿಕ ಬಿಜೆಪಿ ಮಹಾನಗರ ಪಾಲಿಕೆಯ ಅಧಿಕಾರ ಹಿಡಿದಿದ್ದು ನಗರಾಭಿವೃದ್ಧಿಗೆ ಪೂರಕವಾಗಲಿದೆ, ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಬಿಜೆಪಿ ಅರ್ಜಿ ಹಾಕಲಿಲ್ಲ. ನಗರದ ಅಭಿವೃದ್ಧಿಗೆ ನೂತನ ಮೇಯರ್, ಉಪಮೇಯರ್ ಶ್ರಮಿಸಬೇಕು.
    ಜಿ.ಬಿ.ಜ್ಯೋತಿಗಣೇಶ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts