More

    ಮಹಾನಗರ ಕಣದಲ್ಲಿ ತ್ರಿಕೋನ ಸಮರ

    ಬೆಳಗಾವಿ: ಗಡಿ, ಭಾಷೆಯ ಆಧಾರದ ಮೇಲೆ ನಡೆಯುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳ ಪ್ರವೇಶದಿಂದಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಅಲ್ಲದೆ, ರಾಜಕೀಯ ಪಕ್ಷಗಳಿಗೇ ಗೆಲುವು ಸಿಗುವಂತಾಗಲು ಪಕ್ಷೇತರ ಅಭ್ಯರ್ಥಿಗಳೇ ದಾರಿ ಮಾಡಿಕೊಟ್ಟಂತಾಗಿದೆ.

    ಮಹಾನಗರ ಪಾಲಿಕೆಯ 58 ವಾರ್ಡ್‌ಗಳಿಗೆ ಸೆ. 3ರಂದು ಜರುಗುತ್ತಿರುವ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ, ಜೆಡಿಎಸ್, ಎಐಎಂಐಎ ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 385 ಅಭ್ಯರ್ಥಿಗಳು ಕಣದಲ್ಲಿ ಸೆಣೆಸಲಿದ್ದಾರೆ.

    ಕೈ-ಕಮಲ ಹಣಾಹಣಿ: 41 ವಾರ್ಡ್‌ಗಳಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೆ, 17 ವಾರ್ಡ್‌ಗಳಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಮತ್ತೊಂದೆಡೆ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಸದಸ್ಯರು ಹಾಗೂ ಮರಾಠಿ ಭಾಷಿಕರ ಬಂಡಾಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸುತ್ತಿದ್ದು, ರಾಜಕೀಯ ಪಕ್ಷಗಳಿಗೆ ಗೆಲುವು ಸುಲಭವಾಗಿದೆ.
    ಮತಗಳ ವಿಭಜನೆ: ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 22 ವಾರ್ಡ್‌ಗಳಲ್ಲಿ ಬಿಜೆಪಿ, ಎಂಇಎಸ್ ಬೆಂಬಲಿತ ಮತ್ತು ಪಕ್ಷೇತರ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ. ಆದರೆ, ಪಕ್ಷೇತರರು ಅಧಿಕ ಪ್ರಮಾಣದಲ್ಲಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಮರಾಠಿ ಮತಗಳು ವಿಭಜನೆಯಾಗಲಿವೆ. ಇದರಿಂದ ಬಿಜೆಪಿಗೆ ಹೆಚ್ಚಿನ ಮತ ದಕ್ಕಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಬಂಡಾಯದ ಬಿಸಿ: ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 24 ವಾರ್ಡ್‌ಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ, ಹಾಗೂ ಎಐಎಂಐಎ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇತ್ತ, ರಾಜಕೀಯ ಪಕ್ಷದಿಂದ ಟಿಕೆಟ್ ವಂಚಿತರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ಇದು ಪಕ್ಷಗಳ ಗೆಲುವಿನ ಹಾದಿ ಕಠಿಣಗೊಳಿಸಿದೆ. ಇದರಿಂದಾಗಿ ಕೆಲವು ಅಭ್ಯರ್ಥಿಗಳ ಮನವೊಲಿಸುವ ಕೆಲಸವನ್ನು ಪಕ್ಷಗಳ ಮುಖಂಡರು ಮುಂದುವರಿಸಿದ್ದಾರೆ. ಆದರೆ, ಬಂಡಾಯ ಅಭ್ಯರ್ಥಿಗಳು ಮನಸ್ಸು ಬದಲಿಸುತ್ತಾರೋ, ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.

    ಒಂದೇ ವಾರ್ಡ್‌ನಲ್ಲಿ 19 ಜನ ಸ್ಪರ್ಧೆ

    ಮಹಾನಗರ ಪಾಲಿಕೆಯ ವಾರ್ಡ್-4ರಲ್ಲಿ ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಸೇರಿದಂತೆ ಒಟ್ಟು 19 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರಲ್ಲಿ ಎಂಇಎಸ್ ಬೆಂಬಲಿತ ಸೇರಿದಂತೆ 16 ಜನ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಈ ವಾರ್ಡ್‌ನಲ್ಲಿ ಮರಾಠಿ, ಕನ್ನಡಿಗರು ಅಧಿಕ ಪ್ರಮಾಣದಲ್ಲಿದ್ದಾರೆ. ಹೀಗಾಗಿ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, 5 ವಾರ್ಡ್‌ಗಳಲ್ಲಿ ತಲಾ ಒಬ್ಬರು ಪಕ್ಷೇತರು ಹಾಗೂ ವಾರ್ಡ್ 21ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಇಬ್ಬರೇ ಅಭ್ಯರ್ಥಿಗಳು ಸ್ಪರ್ಧಿಸಿರುವುದು ವಿಶೇಷವಾಗಿದೆ.

    ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚು

    ಮಹಾನಗರ ಪಾಲಿಕೆಯ 58 ವಾರ್ಡ್‌ಗಳಲ್ಲಿ 2,13,526 ಮಹಿಳಾ ಮತದಾರರು ಹಾಗೂ 2,14,838 ಪುರುಷ ಮತದಾರರು ಸೇರಿ ಒಟ್ಟು 4,28,364 ಮತದಾರರಿದ್ದಾರೆ. ಆದರೆ, 29 ವಾರ್ಡ್‌ಗಳಲ್ಲಿ ಮಹಿಳಾ ಮತದಾರರೇ ಅಧಿಕ ಪ್ರಮಾಣದಲ್ಲಿದ್ದು, ಇವರ ಮತ ಪಡೆಯಲು ಅಭ್ಯರ್ಥಿಗಳು ಕಸರತ್ತು ಆರಂಭಿಸಿದ್ದಾರೆ. ಅಲ್ಲದೆ, ವಾರ್ಡ್‌ಗಳ ಪುನರ್ ವಿಂಗಡಣೆಯಿಂದಾಗಿ ಪಕ್ಷಗಳ ಚಿಹ್ನೆಯಡಿ ಸ್ಪರ್ಧಿಸಿರುವ ಬಹುತೇಕ ಅಭ್ಯರ್ಥಿಗಳು ಮೊದಲ ಬಾರಿ ಮತ್ತು ಹೊಸ ಮುಖಗಳೇ ಆಗಿದ್ದರಿಂದ ಮತದಾರರನ್ನು ಸೆಳೆದುಕೊಳ್ಳಲು ಬಿಜೆಪಿ, ಕಾಂಗ್ರೆಸ್‌ನ ಹಾಲಿ, ಮಾಜಿ ಸಚಿವರು, ಶಾಸಕರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ.

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts