More

    ಮಳೆ ಸುರಿಸುವ ಗದ್ದಿಗೆ ಸಿದ್ದೇಶ್ವರ

    ಸಿದ್ದಾಪುರ: ಕೊಡಗಿನ ಗಡಿ ಮಾಲ್ದಾರೆ ಗ್ರಾಮ ಹಾಗೂ ಪಿರಿಯಾಪಟ್ಟಣದ ಲಿಂಗಪುರ ಗಡಿ ಭಾಗದಲ್ಲಿ ದುಬಾರೆ ಅರಣ್ಯದ ಒಳಭಾಗದ ಬೆಟ್ಟದ ತುದಿಯಲ್ಲಿರುವ ಪುರಾತನ ದೇಗುಲವೇ ಗದ್ದಿಗೆ ಶ್ರೀ ಸಿದ್ದೇಶ್ವರ. ಈತನನ್ನು ನಂಬಿದರೆ ಬರಗಾಲವೇ ಇಲ್ಲ, ಬೇಡಿದರೆ ಮಳೆ ಸುರಿಸುವ ಕರುಣಾಮಯಿ ಎನ್ನುವುದು ಭಕ್ತರ ನಂಬಿಕೆ.

    ಅಂದಾಜು 600 ವರ್ಷಗಳ ಹಿಂದೆ ಪವಾಡಪುರುಷ ಲಿಂಗರಾಜರು ಈ ಹಾದಿಯ ಮೂಲಕ ಕೊಡಗಿಗೆ ಪ್ರವೇಶಿಸಿದ ಸಂದರ್ಭ ಗದ್ದಿಗೆ ಬೆಟ್ಟದ ತುದಿಯಲ್ಲಿ ಸಿದ್ದೇಶ್ವರನ ದೇಗುಲ ಸ್ಥಾಪಿಸಿದರು. ಅಂದಿನಿಂದ ಇದು ಗದ್ದಿಗೆ ಸಿದ್ದೇಶ್ವರ ದೇವಸ್ಥಾನ ಎಂದೇ ಪ್ರಸಿದ್ಧಿಗೆ ಬಂತು.
    ಬೆಟ್ಟದ ತುದಿಯಲ್ಲಿನ ಗದ್ದಿಗೆ ಸಿದ್ದೇಶ್ವರ ದೇವಸ್ಧಾನಕ್ಕೆ ತಲುಪಲು ಸೂಕ್ತ ದಾರಿಯಿಲ್ಲ. ಹಾಗಾಗಿ ದೇವರ ದರ್ಶನಕ್ಕೆ ಬರುವವರು ಅರಣ್ಯದೊಳಗೆ ಒಂದೂವರೆ ಕಿಲೋಮೀಟರ್ ನಡೆದೇ ಸನ್ನಿಧಿ ತಲುಪಬೇಕು. ಇಲ್ಲಿ ಗದ್ದಿಗೆ ಸಿದ್ದೇಶ್ವರ, ಬಸವೇಶ್ವರ, ಪಾರ್ವತಿ, ಗಣಪತಿ, ವೀರಭದ್ರೇಶ್ವರ, ಲಕ್ಷ್ಮೀ ದೇವರ ಗುಡಿಗಳಿವೆ.

    ದೇವರ ದರ್ಶನಕ್ಕೆ ಬರುವ ಭಕ್ತರೆಲ್ಲರೂ ಸಿದ್ದೇಶ್ವರನ ಸ್ಮರಣೆ ಮಾಡುತ್ತಲೇ ಗುಡ್ಡವನ್ನು ಹತ್ತುತ್ತಾರೆ. ಈ ವೇಳೆ ಸ್ವಲ್ಪ ಯಾಮಾರಿದರೂ ಪ್ರಪಾತಕ್ಕೆ ಉರುಳಿ ಬೀಳುವ ಸಾಧ್ಯತೆ ಇದೆ. ಪರಿಸ್ಥಿತಿ ಹೀಗಿದ್ದರೂ ದೇವರ ಮೇಲಿನ ಅಪಾರವಾದ ನಂಬಿಕೆ ಮತ್ತು ಭಕ್ತಿಯಿಂದ ಬೆಟ್ಟವೇರುವುದು ಕಷ್ಟವೇನಲ್ಲ ಎನ್ನುತ್ತಾರೆ ಭಕ್ತರು.

    ಕೊಡಗಿನ ಮಾಲ್ದಾರೆ, ಚೆನ್ನಾಟಗಿ, ಗುಡ್ಲೂರು ಗ್ರಾಮ ಹಾಗೂ ಪಿರಿಯಾಪಟ್ಟಣ ತಾಲೂಕಿನ ಲಿಂಗಾಪುರ, ಕಂಪಲಾಪುರ, ಬೇಗೂರು ಸೇರಿದಂತೆ ಹಾಸನ, ಅರಕಲಗೂಡು ಮುಂತಾದ ಕಡೆಗಳಿಂದ ಹಿರಿಯರು, ಮಹಿಳೆಯರು, ಮಕ್ಕಳು ಬೆಟ್ಟವನ್ನು ಹತ್ತಿ ದೇವರ ದರ್ಶನವನ್ನು ಪಡೆದು ಧನ್ಯತೆ ಮೆರೆಯುತ್ತಾರೆ.

    ಬೆಟ್ಟದ ಸುತ್ತಮುತ್ತಲಿನ ಹಳ್ಳಿಗಳ ಜನರು ಶ್ರೀ ಸಿದ್ದೇಶ್ವರನಿಗೆ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಈತನನ್ನು ನಂಬಿದರೆ ಬರಗಾಲವೇ ಇಲ್ಲ ಎನ್ನುತ್ತಾರೆ ಭಕ್ತರು. ರೈತರು ವರ್ಷದ ಮೊದಲ ಬೆಳೆಯ ದವಸ ಧಾನ್ಯಗಳನ್ನು ಶ್ರೀ ಸಿದ್ದೇಶ್ವರ ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸುವ ವಾಡಿಕೆ ಇಂದಿಗೂ ನಡೆದುಕೊಂಡು ಬರುತ್ತಿದೆ. ಸಮೃದ್ಧ ಫಸಲು ಬರಲು ಈ ದೇವರ ಕೃಪೆ ಇರಬೇಕು ಎಂಬುದು ಈ ಭಾಗದ ರೈತಾಪಿ ವರ್ಗದವರ ನಂಬಿಕೆಯಾಗಿದೆ.

    ವಿಶೇಷ ಪೂಜಾ ದಿನಗಳು: ಗದ್ದಿಗೆ ಸಿದ್ದೇಶ್ವರ ದೇವಾಲಯಕ್ಕೆ ಆಡಳಿತ ಮಂಡಳಿ ಇದೆ. ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದೊಂದಿಗೆ ಮಹಾಶಿವರಾತ್ರಿ, ಕಾರ್ತಿಕ ಪೂಜೆ, ದೀಪಾವಳಿ, ಗೌರಿ ಗಣೇಶ ಹಬ್ಬಗಳನ್ನು ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ. ವಿಶೇಷ ದಿನಗಳಲ್ಲಿ ರುದ್ರಾಭಿಷೇಕ ಹಾಗೂ ಇನ್ನಿತರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ. ಶಿವರಾತ್ರಿ ಸಂದರ್ಭ 2000ಕ್ಕೂ ಹೆಚ್ಚು ಭಕ್ತರು ಇಲ್ಲಿ ಸಂಗಮಿಸುತ್ತಾರೆ. ಪೂಜೆ ಸಲ್ಲಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. ಆಡಳಿತ ಮಂಡಳಿ ಎಲ್ಲರಿಗೂ ಅನ್ನದಾನದ ವ್ಯವಸ್ಥೆಯನ್ನು ಮಾಡುತ್ತದೆ.

    ಪ್ರಕೃತಿ ಸೌಂದರ್ಯ ತಾಣ: ಹಸಿರನ್ನೇ ಹೊದ್ದುಕೊಂಡಂತೆ ಕಂಗೊಳಿಸುತ್ತಿರುವ ಗದ್ದಿಗೆ ಸಿದ್ದೇಶ್ವರ ಬೆಟ್ಟ ಮನಮೋಹಕ ನಿಸರ್ಗ ತಾಣವಾಗಿದೆ. ಬೆಟ್ಟ ಹತ್ತುವಾಗ ಎಲ್ಲಿ ನೋಡಿದರೂ ಅಲ್ಲಿ ಹಸಿರು ಕಾಣಿಸುತ್ತದೆ. ಕೊಡಗಿನ ಅರ್ಧ ಭೂ ಪ್ರದೇಶವನ್ನೇ ನಾವು ಇಲ್ಲಿಂದ ಕಾಣಬಹುದು. ಭಕ್ತರು ದೇವರ ದರ್ಶನ ಮಾಡುವುದರೊಂದಿಗೆ ಪ್ರಕೃತಿಯ ಸೌಂದರ್ಯವನ್ನೂ ಸವಿಯಬಹುದಾಗಿದೆ.

    ವಾರದ ಪ್ರತಿ ಸೋಮವಾರ ಅರಣ್ಯದೊಳಗೆ ಕಾಲ್ನಡಿಗೆ ಮೂಲಕ ಬೆಟ್ಟದ ತುದಿಗೆ ಬಂದು ಪೂಜೆ ಸಲ್ಲಿಸುತ್ತೇನೆ. ಹಲವಾರು ಬಾರಿ ಕಾಡುಪ್ರಾಣಿಗಳು ಎದುರಾಗಿದ್ದರೂ ದೇವರ ಕೃಪೆಯಿಂದ ಯಾವುದೇ ತೊಂದರೆ ಆಗಿಲ್ಲ. ಅನೇಕ ಭಕ್ತರಿಗೆ ಮನೆದೇವರು ಆದ ಕಾರಣ ಇಲ್ಲಿ ಶ್ರದ್ಧಾ-ಭಕ್ತಿಗಳಿಂದ ಪೂಜೆ ಸಲ್ಲಿಸುತ್ತಾರೆ. ಮಳೆ ಬಾರದಿದ್ದ ಸಂದರ್ಭ ದೇವರನ್ನು ಪ್ರಾರ್ಥಿಸಿದರೆ ವರ್ಷಧಾರೆಯಾಗುತ್ತದೆ. ಸಮೃದ್ಧ ಫಸಲು ಬರುತ್ತದೆ. ಹಾಗಾಗಿ ಈತ ಕೃಷಿಕರ ದೈವ. ನಂಬಿದವರನ್ನು ದೇವರು ಕೈಬಿಟ್ಟಿಲ್ಲ.
    ಮಲ್ಲಿಕ ಆಯಿರಬೀಡು ಅರ್ಚಕ

    ತಲುಪುವುದು ಹೇಗೆ ?: ಮಡಿಕೇರಿಯಿಂದ ಸಿದ್ದಾಪುರ ಮಾರ್ಗವಾಗಿ ಮಾಲ್ದಾರೆ ಗದ್ದಿಗೆ ಬೆಟ್ಟಕ್ಕೆ 40ಕಿ.ಮೀ. ದೂರವಿದೆ. ಮೈಸೂರಿನಿಂದ ಬರುವವರು ಪಿರಿಯಾಪಟ್ಟಣ ಮಾರ್ಗವಾಗಿ ಸನ್ನಿಧಿಗೆ 90 ಕಿ. ಮೀ. ಕ್ರಮಿಸಬೇಕು. ಹಾಸನದಿಂದ 101ಕಿ. ಮೀ. ಸಾಗಿಬಂದರೆ (ಅರಕಲಗೂಡು ಪಿರಿಯಾಪಟ್ಟಣ ಮಾರ್ಗ) ಕೊಡಗಿನ ಗಡಿ ಮಾಲ್ದಾರೆ ತಲುಪಬಹುದು. ದೂರದ ಊರುಗಳಿಂದ ಬರುವ ಭಕ್ತರು ಗಡಿಯಲ್ಲಿ ಇರುವ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಬೇಕು. ವನ್ಯ ಪ್ರಾಣಿಗಳ ಹಾವಳಿ ಇರುವ ಕಾರಣ ಒಬ್ಬರೇ ಅರಣ್ಯದೊಳಗೆ ಬೆಟ್ಟ ಹತ್ತಲು ಮುಂದಾಗಬಾರದು.

    ಸೌಕರ್ಯಗಳಿಲ್ಲ: ಬೆಟ್ಟದ ಮೇಲೆ ಭಕ್ತರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಕಾಡುತ್ತದೆ. ಇಲ್ಲ ವಿದ್ಯುತ್ ವ್ಯವಸ್ಥೆ ಇಲ್ಲ. ಬೆಟ್ಟ ಹತ್ತುವವರು ಕೆಳಗಿನಿಂದಲೇ ಕುಡಿಯುವ ನೀರಿನ ಬಾಟಲ್‌ಗಳನ್ನು ಹೊತ್ತೊಯ್ಯಬೇಕು. ಬೆಟ್ಟದಲ್ಲಿ ಮತ್ತು ದೇಗುಲದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲಾಗಿದೆ.ದೇವಸ್ಧಾನದ ಅಭಿವೃದ್ಧಿಗೆ ಸರ್ಕಾರ ಒಂದಷ್ಟು ಕ್ರಮ ಕೈಗೊಳ್ಳಬೇಕು ಎಂಬುದು ಭಕ್ತರ ಒತ್ತಾಯವಾಗಿದೆ. ಬೆಟ್ಟ ಹತ್ತಲು ನೆರವಾಗುವಂತೆ ಮೆಟ್ಟಿಲು, ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ‌್ಯಕ್ಕೆ ಜಿಲ್ಲಾಡಳಿತ ಆಸಕ್ತಿ ವಹಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts