More

    ಮಳೆ ಬಂದರೆ ಕರೊನಾ, ಬಾರದಿದ್ದರೆ ಕೆಎಫ್​ಡಿ ಭಯ

    ಕಾರವಾರ: ಉತ್ತರ ಕನ್ನಡದಲ್ಲಿ ಮಳೆ ಬಂದರೆ ಕರೊನಾ ಭಯ, ಮಳೆ ಬಾರದಿದ್ದರೆ ಮಂಗನ ಕಾಯಿಲೆಯ ಭಯ ಎದುರಿಸುವಂತಾಗಿದೆ.

    ಹೌದು, ವಿಶ್ವವೆಲ್ಲ ಕರೊನಾ ಮಾರಿಯಿಂದ ಕಂಗಾಲಾಗಿದ್ದರೆ, ಉತ್ತರ ಕನ್ನಡದಲ್ಲಿ ಕ್ಯಾಸನೂರು ಫಾರೆಸ್ಟ್ ಡಿಸೀಸ್(ಕೆಎಫ್​ಡಿ) ಎಂದು ಕರೆಯುವ ಮಂಗನ ಕಾಯಿಲೆಯ ಭಯವೂ ಹೆಚ್ಚುವರಿಯಾಗಿ ಕಾಡುತ್ತಿದೆ. ಆರೋಗ್ಯ ಅಧಿಕಾರಿಗಳು ಕರೊನಾ ನಿಯಂತ್ರಣಕ್ಕೆ ಕ್ರಮ ವಹಿಸುವ ಜತೆಗೆ ಮಂಗನ ಕಾಯಿಲೆ ತಡೆಯಲೂ ಹೋರಾಟ ನಡೆಸಬೇಕಿದೆ.

    ಇದುವರೆಗೆ ಸಿದ್ದಾಪುರದಲ್ಲಿ ಮಾತ್ರ ಕೆಎಫ್​ಡಿ ಅಟ್ಟಹಾಸ ಮೆರೆಯುತ್ತಿತ್ತು. ಈ ವರ್ಷ ಕಾಯಿಲೆಯಿಂದ ಒಂದು ಸಾವು ಸಂಭವಿಸಿದೆ. 33 ಜನರಲ್ಲಿ ರೋಗ ಖಚಿತವಾಗಿದೆ. ಈಗ ಹೊನ್ನಾವರದಲ್ಲಿ 12, ಕುಮಟಾ, ಅಂಕೋಲಾ ಹಾಗೂ ಭಟ್ಕಳ ತಾಲೂಕುಗಳಲ್ಲಿ ತಲಾ ಒಂದು ಪ್ರಕರಣಗಳು ಖಚಿತವಾಗಿವೆ. ಒಟ್ಟಾರೆ ರೋಗಿಗಳ ಸಂಖ್ಯೆ 50 ಕ್ಕೆ ಸಮೀಪಿಸುತ್ತಿದೆ.

    ಮಳೆಗಾಲ ಬಂದರೆ ಕಡಿಮೆ:

    ಕಳೆದ ಬೇಸಿಗೆಯಲ್ಲಿ ಮಾರಣಾಂತಿಕ ಕೆಎಫ್​ಡಿ ಅಟ್ಟಹಾಸ ಮೆರೆದಿದ್ದರಿಂದ ಈ ಬಾರಿ ಆಗಸ್ಟ್ , ಸೆಪ್ಟೆಂಬರ್ ಹೊತ್ತಿಗೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿತ್ತು. 1 ಲಕ್ಷದಷ್ಟು ಕೆಎಫ್​ಡಿ ನಿರೋಧಕ ಲಸಿಕೆಗಳನ್ನು ತರಿಸಿ, ಜನರಿಗೆ ನೀಡಿದೆ. ರೋಗ ಇರುವ ಭಾಗದಲ್ಲಿ ಡಿಎನ್​ಪಿ ತೈಲ ವಿತರಿಸಲಾಗಿದೆ. ಜನ ಲಸಿಕೆ ಪಡೆಯಲು ಹಿಂದೇಟು ಹಾಕಿದಾಗ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಿದೆ. ಈಗ ರೋಗ ಇರುವವರ ಮನೆಗಳ ಸುತ್ತ ಹಾಗೂ ಜಾನುವಾರುಗಳಿಗೆ ಉಣುಗು ನಿವಾರಕ ಕ್ರಮ ವಹಿಸುತ್ತಿದೆ. ಆದರೆ, ಇವೆಲ್ಲದನ್ನೂ ಮೀರಿ ರೋಗ ಹೆಚ್ಚುತ್ತಿದೆ. ಹೊಸ ಪ್ರದೇಶಗಳಿಗೆ ವಿಸ್ತರಿಸುತ್ತಿದೆ.

    ಸದ್ಯ ಬಿರು ಬೇಸಿಗೆಯಲ್ಲಿ ರೈತರು ಕಾಡಿಗೆ ತರಗೆಲೆ, ಕಟ್ಟಿಗೆ, ಜೇನು, ಹೀಗೆ ವಿವಿಧ ಕಾರಣಗಳಿಗೆ ಹೋಗುವುದರಿಂದ ರೋಗ ಹರಡುವ ಪ್ರಮಾಣ ಹೆಚ್ಚುತ್ತಿದೆ. ಇದಕ್ಕಿರುವ ಒಂದೇ ಮಾರ್ಗ ಎಂದರೆ ಉಣ್ಣೆ ಅಥವಾ ಉಣುಗುಗಳ ಮೂಲಕ ಹರಡುವ ಕೆಎಫ್​ಡಿಯು ಮಳೆಗಾಲ ಬಂದ ನಂತರ ತನ್ನಿಂದ ತಾನೇ ಕಡಿಮೆಯಾಗುತ್ತದೆ. ಏಕೆಂದರೆ ಮಳೆಯಲ್ಲಿ ಉಣುಗುಗಳು ಕಡಿಮೆಯಾಗುತ್ತವೆ. ಹಾಗಾಗಿ ಒಮ್ಮೆ ಮಳೆಗಾಲ ಬಂದರೆ ಸಾಕು ಎಂದು ಪ್ರಾರ್ಥಿಸುತ್ತಿದ್ದಾರೆ.

    ಕರೊನಾ ಭಯ:

    ಜಿಲ್ಲೆಯ ಭಟ್ಕಳದಲ್ಲಿ ಮಾತ್ರ 11 ಜನರಲ್ಲಿ ಕರೊನಾ ಸೋಂಕು ಖಚಿತವಾಗಿದೆ. ಈ ಪೈಕಿ ಈಗಾಗಲೇ 8 ಜನರು ಗುಣಮುಖರಾಗಿದ್ದಾರೆ. ಆದರೂ ಹೊರ ಜಿಲ್ಲೆಗಳಲ್ಲಿ ಸೋಂಕು ಬೆಳೆಯುತ್ತಿರುವ ಕಾರಣ ಜಿಲ್ಲೆಯೂ ಸಂಪೂರ್ಣ ಆತಂಕದಿಂದ ದೂರವಾಗಿಲ್ಲ. ಕರೊನಾ ವೈರಸ್ ತಂಪಿನ ವಾತಾವರಣದಲ್ಲಿ ಹೆಚ್ಚು ಬೆಳೆಯಲಿದೆ ಎಂದು ತಜ್ಞರು ಹೇಳುತ್ತಾರೆ. ಸದ್ಯ ಜಿಲ್ಲೆಯಲ್ಲಿ ಉಷ್ಣಾಂಶ ಅಧಿಕವಾಗಿದೆ. ಮಳೆ ಬಂದು ವಾತಾವರಣ ತಂಪಾದರೆ, ಕರೊನಾ ಇನ್ನಷ್ಟು ವ್ಯಾಪಿಸುವ ಆತಂಕವೂ ಜಿಲ್ಲೆಯ ಅಧಿಕಾರಿಗಳಲ್ಲಿದೆ.

    ಪ್ರಕರಣಗಳ ಬಗ್ಗೆ ಸ್ಪಷ್ಟತೆ ನೀಡದ ಇಲಾಖೆ

    ಜಿಲ್ಲೆಯಲ್ಲಿ ಖಚಿತವಾದ ಕೆಎಫ್​ಡಿ ಪ್ರಕರಣಗಳನ್ನು ಆರೋಗ್ಯ ಇಲಾಖೆ ಬಹಿರಂಗಪಡಿಸುತ್ತಿಲ್ಲ. ಮಂಗಗಳ ಸಾವೆಷ್ಟು; ಎಷ್ಟು ಸಕ್ರಿಯ ಕೆಎಫ್​ಡಿ ಪ್ರಕರಣ ಖಚಿತವಾಗಿದೆ ಮುಂತಾದ ವಿವರಗಳನ್ನು ಆರೋಗ್ಯ ಅಧಿಕಾರಿಗಳು ಪ್ರಕರಣದ ವಿವರ ನೀಡಲು ಹೆದರುತ್ತಿದ್ದಾರೆ. ಕೇಳಿದಲ್ಲಿ ಜಿಲ್ಲಾಡಳಿತದತ್ತ ಬೊಟ್ಟು ಮಾಡುತ್ತಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳು ಆರೋಗ್ಯ ಇಲಾಖೆಯತ್ತ ಅಧಿಕಾರಿಗಳನ್ನೇ ಕೇಳಿ ಎಂದು ಕೈ ತೊಳೆದುಕೊಳ್ಳುತ್ತಿದ್ದಾರೆ.

    ಜಿಲ್ಲೆಯ ಐದು ತಾಲೂಕುಗಳಲ್ಲಿ ಕೆಎಫ್​ಡಿ ಇರುವುದು ಖಚಿತವಾಗಿದೆ. ಎಲ್ಲೆಡೆ ಡಿಎನ್​ಪಿ ತೈಲ ವಿತರಿಸಲಾಗಿದೆ. ಲಸಿಕೆ ಹಾಕಲಾಗುತ್ತಿದೆ. ಜಾಗೃತಿ ಸಭೆ ನಡೆಸಲಾಗಿದೆ.

    | ಡಾ.ಜಿ.ಎನ್.ಅಶೋಕ ಕುಮಾರ್ ಡಿಎಚ್​ಒ, ಕಾರವಾರ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts