More

    ಮಳೆ ಅಬ್ಬರ, ಜನಜೀವನ ದುಸ್ತರ!

    ಬೆಳಗಾವಿ: ಜಿಲ್ಲಾದ್ಯಂತ ಸೋಮವಾರವೂ ವರುಣನ ಆರ್ಭಟ ಮುಂದುವರಿದಿದ್ದು, ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆಯಿಂದ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ನದಿಗಳಿಗೆ ನಿರ್ಮಿಸಿರುವ ಕೆಳಹಂತದ 8 ಸೇತುವೆ ಮುಳುಗಡೆಯಾಗಿದ್ದು, 20ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

    ಮಳೆ ಹೆಚ್ಚಿರುವ ಖಾನಾಪುರ ಹಾಗೂ ಬೆಳಗಾವಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸೋಮವಾರ ಜಿಲ್ಲಾಡಳಿತ ರಜೆ ಘೋಷಿಸಿದೆ. ಚಿಕ್ಕೋಡಿ ಭಾಗದಲ್ಲಿ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳಿಗೆ ಒಳಹರಿವು ಹೆಚ್ಚಳವಾಗಿದೆ. ಚಿಕ್ಕೋಡಿ ತಾಲೂಕಿನ ಯಡೂರ-ಕಲ್ಲೋಳ, ಕಾರದಗಾ-ಭೋಜ, ಭೋಜವಾಡಿ-ಕುನ್ನೂರ, ಮಲಿಕವಾಡ-ದತ್ತವಾಡ, ಸಿದ್ನಾಳ-ಅಕ್ಕೋಳ, ಜತ್ರಾಟ-ಭಿವಶಿ, ಮಮದಾಪುರ-ಹುನ್ನರಗಿ, ಕುನ್ನೂರ-ಬಾರವಾಡ ಸೇತುವೆಗಳು ಜಲಾವೃತವಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

    ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನಲ್ಲಿ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳಿಗೆ 4 ಅಡಿಯಷ್ಟು ನೀರು ಏರಿಕೆಯಾಗಿದೆ. ರಾಜಾಪುರ ಬ್ಯಾರೇಜ್ ಮೂಲಕ ದೂಧಗಂಗಾ ನದಿಗೆ 41,167 ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಘಟಪ್ರಭಾ ಜಲಾಶಯದಲ್ಲಿ 2.162 ಅಡಿಗೂ ಹೆಚ್ಚು ಸಂಗ್ರಹಗೊಂಡಿದ್ದು, 13,084 ಕ್ಯೂಸೆಕ್ ಒಳಹರಿವಿದೆ. ಮಲಪ್ರಭಾ ಜಲಾಶಯ 2071.40 ಅಡಿ ತುಂಬಿದ್ದು, 4,194 ಕ್ಯೂಸೆಕ್ ಒಳಹರಿವಿದೆ. ಬೆಳಗಾವಿ ಮಹಾನಗರದಲ್ಲಿ ಮಳೆಯು ಅವಾಂತರವನ್ನೇ ಸೃಷ್ಟಿಸಿದ್ದು, ತಗ್ಗು ಪ್ರದೇಶದಲ್ಲಿರುವ ಕೇಶವ ನಗರ, ಹನುಮಾನ ನಗರ, ಶ್ರೀನಗರ,ವೀರಭದ್ರ ನಗರ, ಓಂ ನಗರ, ಗಾಂಧಿ ನಗರ, ಹಿಂಡಲಗಾ ವ್ಯಾಪ್ತಿಯ ಜಯನಗರ, ಶಿವಾಜಿ ನಗರದ ಅನೇಕ ಮನೆಗಳು ಜಲಾವೃತಗೊಂಡಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಮುಂದೆ ಸಾಗಲು ಪರದಾಡಿದರು. ಸ್ಮಾರ್ಟ್‌ಸಿಟಿ ಯೋಜನೆಯಡಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ರಸ್ತೆಗಳಲ್ಲಿ ಸಮರ್ಪಕ ಗಟಾರ ವ್ಯವಸ್ಥೆ ಇಲ್ಲದೆ ಮಳೆ ನೀರೆಲ್ಲ ರಸ್ತೆಯಲ್ಲಿ ಹರಿದು ರಸ್ತೆಗಳು ನದಿಗಳಂತೆ ಗೋಚರಿಸುತ್ತಿವೆ. ಮನೆ ಮತ್ತು ಅಂಗಡಿ-ಮುಂಗಟ್ಟುಗಳಲ್ಲಿ ನುಗ್ಗಿದ್ದ ಮಳೆ ನೀರನ್ನು ಹೊರಚೆಲ್ಲುವಲ್ಲಿ ನಿರತರಾಗಿದ್ದರು.

    ಭಾರತ ನಗರದಲ್ಲಿ ಬಿರ್ಜೆ ಅವರ ಎರಡು ಅಂತಸ್ತಿನ ಮನೆ ಮತ್ತೊಂದು ಮನೆ ಮೇಲೆ ಬಿದ್ದಿದ್ದರಿಂದ ಶಾಂತಾ ಎಂಬ ಮಹಿಳೆ ಗಾಯಗೊಂಡಿದ್ದು, ಚಿಕಿತ್ಸೆ ಪಡೆದಿದ್ದಾರೆ. ವಡಗಾವಿ ಹಾಗೂ ಶಿವಾಜಿ ನಗರದಲ್ಲಿನ ಹಲವು ಮನೆಗಳು ಕುಸಿದು ಬಿದ್ದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts