More

    ಮಳೆಯಿಂದ ಭತ್ತದ ಗದ್ದೆಗಳಿಗೆ ಹಾನಿ

    ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ವಿವಿಧೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಹಾನಿಯಾದ ಸ್ಥಳಗಳಿಗೆ ಶುಕ್ರವಾರ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಕಲ್ಲರೆಜಡ್ಡಿಯ ಉಲ್ಲಾಸ್ ನುರೋನ, ಆನಂದ ಡಿಸೋಜ, ಫಾತೀಮ ಜೊಜೆ ಡಿಸೋಜ ಮುಂತಾದವರ ಗದ್ದೆ, ಅಡಕೆ ತೋಟಗಳಲ್ಲಿ ಹೊಸದಾಗಿ ನಾಟಿ ಮಾಡಿದ ಅಡಕೆ ಸಸಿಗಳು, ಕಾಳುಮೆಣಸುಗಳಿಗೆ ಹಾಕಿದ ಗೊಬ್ಬರ, ಮುಚ್ಚಿಗೆಗಳು ನೀರು ಪಾಲಾಗಿವೆ. ನಾಟಿ ಮಾಡಿದ ಭತ್ತದ ಗಿಡಗಳೆಲ್ಲ ಕೊಚ್ಚಿಕೊಂಡು ಹೋಗಿವೆ.
    ತುಡುಗುಣಿಯ ರತ್ನಾಕರ ಬಲ್ಸೆ, ರಾಜಾರಾಮ ರಾಯ, ಓಮನ್ ರಾಯ, ಹಂದಿಮನೆಯ ಹರೀಶ ಹೆಗಡೆ, ಪ್ರಕಾಶ ಹೆಗಡೆ ಮೊದಲಾದವರಿಗೆ ಸೇರಿದ ಜಮೀನುಗಳಲ್ಲಿಯೂ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ.
    ಸುಮಾರು ಹದಿನಾರು ಎಕರೆಗೂ ಹೆಚ್ಚು ಭತ್ತದ ಬೆಳೆಗೆ ಹಾನಿಯಾಗಿದೆ. ಅಡಕೆ ತೋಟದಲ್ಲಿ ಅಪಾರ ಪ್ರಮಾಣದ ನೀರು ಹರಿದಿರುವುದರಿಂದ ಅಡಿಕೆಗೆ ಕೊಳೆ, ಕಾಳು ಮೆಣಸಿನ ಬಳ್ಳಿಗಳು ರೋಗಕ್ಕೆ ತುತ್ತಾಗುವ ಸಂಭವವಿದೆ ಎಂದು ರೈತರು ಕಂಗಾಲಾಗಿದ್ದಾರೆ. ಗ್ರಾ.ಪಂ. ಅಧ್ಯಕ್ಷೆ ರೂಪಾ ಪೂಜಾರಿ, ಸದಸ್ಯರಾದ ಖೈತಾನ್ ಡಿಸೋಜ, ಅಶೋಕ ಪೂಜಾರಿ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts