More

    ಮಳೆಗೆ ಜನಜೀವನ ಅಸ್ತವ್ಯಸ್ತ

    ಹಳಿಯಾಳ: ಪಟ್ಟಣ ಸೇರಿ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಗುರುವಾರ ಸಂಜೆ ಮಳೆ ಸುರಿದಿದೆ.

    ಕೆಲವೆಡೆ ಮನೆಯ ಹೆಂಚುಗಳು ಕಿತ್ತು ಹೋಗಿವೆ. ತತ್ವಣಗಿ ಗ್ರಾಮದಲ್ಲಿ ಗುಡ್ಡದ ಮೇಲಿಂದ ನೀರು ಹರಿದು ಮನೆಗಳಿಗೆ ನುಗ್ಗಿದೆ. ಇನ್ನೂ ಕೆಲವೆಡೆ ಮನೆ ಮೇಲೆ ಮರಗಳು ಬಿದ್ದು ಹಾನಿಯಾಗಿದೆ. ಮನೆಯಲ್ಲಿದ್ದ ಬಟ್ಟೆ, ಪಾತ್ರೆ, ದಾನಿಗಳು ನೀಡಿದ ರೇಷನ್ ಕಿಟ್, ದಿನಸಿ ಸಾಮಗ್ರಿಗಳು ನೀರು ಪಾಲಾಗಿವೆ.

    ತತ್ವಣಗಿ ಗ್ರಾಮದಲ್ಲಿ ರೈತ ಮಹಿಳೆ ಬಸವ್ವ ಯಮನಪ್ಪ ಮೇತ್ರಿ ಅವರು 12 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿದ ಪಾಲಿಹೌಸ್ ಸಂಪೂರ್ಣ ಕಿತ್ತು ಹೋಗಿದೆ. ಇನ್ನುಳಿದಂತೆ ಅಪಾರ ಪ್ರಮಾಣದಲ್ಲಿ ಮಾವು ಹಾಗೂ ಬಾಳೆ ಬೆಳೆಗೆ ಹಾನಿ ಸಂಭವಿಸಿದ್ದು, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಎ.ಆರ್. ಗಿರಿಯಾಲ್ ನೇತೃತ್ವದ ತಂಡವು ಹಾನಿ ಸಮೀಕ್ಷಾ ಕಾರ್ಯ ಕೈಗೊಂಡಿದೆ.

    ಪಟ್ಟಣ ಸೇರಿ ಗ್ರಾಮಾಂತರ ಭಾಗದಲ್ಲಿ 20 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, 4 ವಿದ್ಯುತ್ ಪರಿವರ್ತಕಗಳು ಹಾನಿಗೀಡಾಗಿವೆ ಎಂದು ಹೆಸ್ಕಾಂ ಇಲಾಖೆಯ ಎ.ಇ.ಇ ರವೀಂದ್ರ ಮೆಟಗುಡ್ಡ ತಿಳಿಸಿದ್ದಾರೆ. ತಹಸೀಲ್ದಾರ್ ವಿದ್ಯಾಧರ ಗುಳಗುಳೆ, ತಾಪಂ ಇಒ ಪ್ರವೀಣಕುಮಾರ ಸಾಲಿ ಹಾಗೂ ಇನ್ನುಳಿದ ತಾಲೂಕಾಧಿಕಾರಿಗಳ ತಂಡವು ಗ್ರಾಮೀಣ ಭಾಗದಲ್ಲಿ ಪರಿಶೀಲನೆ ನಡೆಸಿದೆ.

    ಗ್ರಾಮಾಂತರ ಭಾಗಗಳಾದ ತತ್ವಣಗಿ, ಹೊಸುರ, ಬಿಕೆ ಹಳ್ಳಿ, ಕೆಸರೊಳ್ಳಿ, ಹಲಸಿ, ಮಂಗಳವಾಡ, ಕಳಸಾಪುರ, ಮುಂಡವಾಡ, ಬೆಳವಟಗಿ, ಗುಳೆದಕೊಪ್ಪ, ಶಿವಪುರ, ಕಾವಲವಾಡ, ದೊಡ್ಡಕೊಪ್ಪ, ತಟ್ಟಿಗೇರಿ, ಸಾಂಬ್ರಾಣಿ, ಗುಂಡೋಳ್ಳಿ ಮೊದಲಾದ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.



    ಮಹಾಸತಿ ಮಂದಿರಕ್ಕೆ ನುಗ್ಗಿದ ಮಳೆ ನೀರು

    ಕುಮಟಾ: ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಮಾಸ್ತಿಕಟ್ಟೆ ವೃತ್ತದ ಬಳಿಯ ಮಹಾಸತಿ ಮಂದಿರಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.

    ಮಣಕಿ ಮೈದಾನ ಹಾಗೂ ಕೊಪ್ಪಳಕರವಾಡಿಯಿಂದ ನೆಲ್ಲಿಕೇರಿವರೆಗಿನ ಮಳೆ ನೀರು ಹೆದ್ದಾರಿಯಂಚಿಗೆ ಹರಿದು ಮಹಾಸತಿ ಮಂದಿರದ ಎದುರಿನ ರಾಜ ಕಾಲುವೆ ಸೇರುತ್ತದೆ. ಮಣಕಿ ಮೈದಾನ ಬದಿ ವಿದ್ಯುತ್ ತಂತಿಗಳಿಗೆ ತಾಗುವ ಗಿಡಗಂಟಿ, ರೆಂಬೆಗಳನ್ನು ಹೆಸ್ಕಾಂನವರು ಕಡಿದು ಚಿಕ್ಕ ಟೊಂಗೆಗಳನ್ನು ಅಲ್ಲಲ್ಲೇ ಬಿಟ್ಟು ಹೋಗಿದ್ದರು. ಗುರುವಾರ ಸುರಿದ ಮಳೆಯಿಂದಾಗಿ ನೀರಿನೊಂದಿಗೆ ತೇಲಿ ಬಂದ ಮರದ ಚಿಕ್ಕ ಚಿಕ್ಕ ಕೊಂಬೆಗಳು ಚರಂಡಿ ಸೇರಿವೆ. ಇದರಿಂದಾಗಿ ಮಣಕಿ ಮೈದಾನ ಕಡೆಯಿಂದ ಹರಿದು ಬಂದ ಬಾರಿ ಪ್ರಮಾಣದ ನೀರು ಗಟಾರದಲ್ಲಿ ಕಟ್ಟಿಕೊಂಡು ಹೆದ್ದಾರಿಯ ಮೇಲಿಂದ ಇನ್ನೊಂದು ದಿಕ್ಕಿಗೆ ಹರಿದಿದೆ. ಹೀಗಾಗಿ ಪಕ್ಕದ ಮಹಾಸತಿ ಮಂದಿರಕ್ಕೆ ಮಳೆ ನೀರು ನುಗ್ಗಿದ್ದು ಮಂದಿರದ ತುಂಬಾ ಕೆಸರು ರಾಡಿ ತುಂಬಿದೆ.

    ಸ್ಥಳಕ್ಕೆ ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ಭೇಟಿ ನೀಡಿ ಪರಿಶೀಲಿಸಿದರು. ಮಹಾಸತಿ ಮಂದಿರದ ಮೊಕ್ತೇಸರ ಅನಂತರಾಯ ಪೈ ಮಾತನಾಡಿ, ಮಳೆಯ ನೀರು, ಮಣ್ಣು ಮಂದಿರಕ್ಕೆ ನುಗ್ಗಿ ಎಲ್ಲೆಡೆ ಹೊಲಸಾಗಿದೆ. ಮಂದಿರದ ಸ್ವಚ್ಛತಾ ಕಾರ್ಯ ನಡೆಸಿದ್ದೇವೆ. ಇಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡಬೇಕು. ಹೆದ್ದಾರಿ ಬದಿಯ ಗಟಾರಗಳನ್ನು ಸರಿಪಡಿಸಬೇಕು. ರಾಜ ಕಾಲುವೆ ಸ್ವಚ್ಛಪಡಿಸಬೇಕು ಎಂದು ಮನವಿ ಮಾಡಿದರು.

    ಕೂಡಲೆ ಗಟಾರ ಹಾಗೂ ರಾಜ ಕಾಲುವೆಯನ್ನು ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕು ಎಂದು ಮುಖ್ಯಾಧಿಕಾರಿ ಸುರೇಶ ಎಂ.ಕೆ. , ಇಂಜಿನಿಯರ್ ಹೇಮಚಂದ್ರ ನಾಯ್ಕ ಅವರಿಗೆ ಸೂಚಿಸಿದರು.







    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts