More

    ಮಳೆಗಾಲದೊಳಗೆ ಕೆರೆಗೆ ನೀರು

    ಲಕ್ಷ್ಮೇಶ್ವರ: ಬಾಲೆಹೊಸೂರಿನ ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಬಾಲೇಹೊಸೂರ ಗ್ರಾಮಸ್ಥರು ಬುಧವಾರ ತಹಸೀಲ್ದಾರ್ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಂಡರು.

    ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ‘ರೈತ ಪರವಾದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗದ ಗುತ್ತಿಗೆದಾರರನ್ನು ಹಾಗೂ ರೈತರ ಬೇಡಿಕೆಗಳಿಗೆ ಸ್ಪಂದಿಸದ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಬಾಲೇಹೊಸೂರ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಶೇ.50 ರಷ್ಟು ಆಗದಿದ್ದರೂ ಶೇ.80 ರಷ್ಟು ಬಿಲ್ ಪಾವತಿಸಲಾಗಿದೆ. ಗುತ್ತಿಗೆದಾರರು ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಮಳೆಗಾಲ ಆರಂಭವಾಗುವುದರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಕೈಗೊಳ್ಳಲಾಗುತ್ತದೆ’ ಎಂದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಗುತ್ತಿಗೆದಾರರ ತಾಳಕ್ಕೆ ತಕ್ಕಂತೆ ಕುಣಿದ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಂದ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದರು.

    ಕೆರೆ ಹೋರಾಟ ಸಮಿತಿ ಸಂಚಾಲಕರಾದ ಬಸವರೆಡ್ಡಿ ಹನಮರೆಡ್ಡಿ, ಫಕೀರೇಶ ಮ್ಯಾಟಣ್ಣವರ, ಜಿಪಂ ಸದಸ್ಯ ಎಸ್.ಪಿ. ಬಳಿಗಾರ, ಎಂ.ಎಸ್. ದೊಡ್ಡಗೌಡರ, ಚನ್ನಪ್ಪ ಜಗಲಿ, ರಾಮಣ್ಣ ಲಮಾಣಿ, ಜಯಕ್ಕ ಕಳ್ಳಿ ಮಾತನಾಡಿದರು. ಜಿ.ಆರ್. ಕೊಪ್ಪದ, ಸಿದ್ದಲಿಂಗಸ್ವಾಮಿ ಪಶುಪತಿಮಠ, ಯಲ್ಲಪ್ಪ ಸೂರಣಗಿ, ಬಸವರಾಜ ಗೂಳಣ್ಣವರ, ಅಮರೇಶ ತೆಂಬದಮನಿ, ಅಶೋಕ ಮಾಗಿ, ಮಾರುತಿ ಕೊಳಲ, ಹನುಮಂತಪ್ಪ ಸವಣೂರ ಇತರರು ಇದ್ದರು.

    ಕ್ಷಮೆ ಕೇಳಿದ ಅಧಿಕಾರಿ: ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಅವರು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿದರು. ಅಧಿಕಾರಿಗಳ ನಿರ್ಲಕ್ಷ್ಯಂದ ರೈತರಿಗಾದ ತೊಂದರೆಗೆ ಕ್ಷಮೆಯಾಚಿಸಿದರು. ಅಲ್ಲದೆ, ಮಳೆಗಾಲ ಆರಂಭವಾಗುವುದರ ಒಳಗಾಗಿ ಕೆರೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ದಯವಿಟ್ಟು ಪ್ರತಿಭಟನೆ ಕೈಬಿಡಬೇಕು. ಕಾಮಗಾರಿ ವೇಳೆ ರೈತರು ಗುತ್ತಿಗೆದಾರರಿಗೆ ಸಹಕಾರ ನೀಡಬೇಕು ಎಂದು ಕೋರಿದರು. ನಂತರ ಧರಣಿ ಕೈಬಿಟ್ಟ ಪ್ರತಿಭಟನಾಕಾರರು, ‘ಬೇಡಿಕೆ ಈಡೇರದಿದ್ದರೆ ನರಗುಂದ ಬಂಡಾಯದ ರೀತಿಯಲ್ಲಿ ಹೋರಾಟ ತೀವ್ರಗೊಳಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts