More

    ಮಳೆಗಾಲದಲ್ಲಿ ಭತ್ತ ಬೆಳೆಯುವುದೇ ಕಷ್ಟ

    ಮುಂಡಗೋಡ: ಮತ್ತೆ ಮಳೆಗಾಲ ಪ್ರಾರಂಭವಾದರೂ ಕಳೆದ ವರ್ಷ ಒಡೆದ ಚಿಗಳ್ಳಿ ಜಲಾಶಯದ ಒಡ್ಡು ರಿಪೇರಿಯಾಗದೇ ಇರುವುದು ಅಲ್ಲಿನ ರೈತರ ತೀವ್ರ ಆತಂಕಕ್ಕೆ ಕಾರಣವಾಗಿದೆ.

    2019ರ ಆಗಸ್ಟ್ 12ರಂದು ಸುರಿದ ಭಾರಿ ಮಳೆಗೆ ಜಲಾಶಯದ ಒಡ್ಡು ಒಡೆದು ಅಂದಾಜು 20 ಎಕರೆ ಪ್ರದೇಶದ ಭತ್ತದ ಬೆಳೆ ಸರ್ವನಾಶವಾಗಿತ್ತು. ಜತೆಗೆ ಇಡೀ ಜಲಾಶಯ ಖಾಲಿಯಾಗಿತ್ತು. ಅಷ್ಟೇ ಅಲ್ಲ, ಕೆಲವರ ಗದ್ದೆಯ ಮಣ್ಣು ಕೊಚ್ಚಿ ಹೋದರೆ, ಇನ್ನೂ ಕೆಲವರ ಗದ್ದೆಯಲ್ಲಿ ಹೂಳು ನಿಂತು ಕೃಷಿ ಮಾಡಲು ಬರದಂತೆ ಆಗಿತ್ತು. ಅಲ್ಲದೆ, ಮುಂಡಗೋಡ-ಶಿರಸಿ ರಸ್ತೆಯ ವಾಹನ ಸಂಚಾರ ಕೆಲ ಕಾಲ ಬಂದ್ ಆಗಿತ್ತು.

    ರಿಪೇರಿ ಇಲ್ಲ: 1978ರಲ್ಲಿ ನಿರ್ವಣವಾದ ಜಲಾಶಯ ಸಣ್ಣ ನೀರಾವರಿ ಇಲಾಖೆಗೆ ಸೇರಿದೆ. ಒಟ್ಟು 20.74 ಮೀಟರ್ ಎತ್ತರವಿದ್ದು, 910 ಮೀಟರ್ ಉದ್ದದ ತಡೆಗೋಡೆ ಇದೆ. 180 ಹೆಕ್ಟೇರ್ ಪ್ರದೇಶದಲ್ಲಿ ಜಲಾಶಯ ವ್ಯಾಪಿಸಿಕೊಂಡಿದ್ದು, 8.85 ಮಿಲಿಯನ್ ಕ್ಯೂಬಿಕ್ ಮೀ. ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಜಲಾಶಯದ ನೀರಿನಿಂದ ಬೇಸಿಗೆಯಲ್ಲಿ ಅಂದಾಜು 500 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲು ಅನುಕೂಲವಾಗುತ್ತಿತ್ತು. ಒಡ್ಡು ಒಡೆದಿದ್ದರಿಂದ ಬೇಸಿಗೆಯಲ್ಲಿ ಭತ್ತ ಬೆಳೆಯುವುದಿರಲಿ, ಈ ಬಾರಿ ಮಳೆಗಾಲದಲ್ಲಿ ಬೆಳೆಯುವುದೇ ಕಷ್ಟವಾಗಿದೆ. ಜಲಾಶಯದ ಒಡ್ಡು ಒಡೆದು 10 ತಿಂಗಳು ಕಳೆದರೂ ರಿಪೇರಿಯ ಬಗ್ಗೆ ಇಲಾಖೆ ಇತ್ತ ಕಣ್ಣೆತ್ತಿಯೂ ನೋಡಿಲ್ಲ.

    ಮತ್ತೆ ಆತಂಕ: ಕಳೆದ ವರ್ಷ ಜಲಾಶಯದ ಒಡ್ಡು ಒಡೆದಾಗ ಅಂಚಿನಲ್ಲಿದ್ದ ರಾಜೇಸಾಬ, ನಾಗರಾಜ ಕಮ್ಮಾರ ಹಾಗೂ ಇತರ ರೈತರ ಭತ್ತದ ಬೆಳೆಗೆ ಹಾನಿಯಾಗಿತ್ತು. ಸೋಮವಾರ ಸುರಿದ ಮಳೆಗೆ ಜಲಾಶಯದಲ್ಲಿ ಸಂಗ್ರಹವಾದ ಅಲ್ಪಸ್ವಲ್ಪ ನೀರು ನೇರವಾಗಿ ಗದ್ದೆಗಳಿಗೆ ಹರಿದು ಬರುತ್ತಿದೆ. ಇದರಿಂದ 15 ದಿನದ ಹಿಂದಷ್ಟೇ ಬಿತ್ತನೆ ಮಾಡಿದ್ದ ಭತ್ತದ ಸಸಿಗಳು ಕೊಚ್ಚಿಕೊಂಡು ಹೋಗಿವೆ. ಮಳೆ ಜಾಸ್ತಿಯಾದಲ್ಲಿ ಇನ್ನೂ ಹಲವು ರೈತರ ಗದ್ದೆಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ, ಚಿಗಳ್ಳಿ-ಮಡಸಾಲಿ ನಡುವೆ ಹಳ್ಳ ತುಂಬಿ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ವ್ಯತ್ಯಯ ಉಂಟಾಗಲಿದೆ.

    ನೀರಾವರಿ ಇಲಾಖೆ ಬಗ್ಗೆ ಆಕ್ರೋಶ: ಚಿಗಳ್ಳಿ ಡ್ಯಾಂ ಒಡೆದಿದ್ದು ಇದೇ ಮೊದಲಲ್ಲ. 2007ರಲ್ಲೂ ಒಡೆದು ಜಮೀನಿಗೆ ಹಾನಿಯಾಗಿತ್ತು. ಇಲಾಖೆಯ ಕಳಪೆ ನಿರ್ವಹಣೆಯಿಂದ 2019ರಲ್ಲಿ ಮತ್ತೆ ಒಡೆದು ಹೋಗಿದೆ. ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ ಬಗ್ಗೆ ರೈತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದರೂ ಮುಂಡಗೋಡ ಚಿಕ್ಕ ನೀರಾವರಿ ಇಲಾಖೆ ನಿದ್ರೆಯಿಂದ ಎಚ್ಚೆತ್ತಿಲ್ಲ. ಅಧಿಕಾರಿಗಳು ಡ್ಯಾಂ ನೋಡುವುದು ಹೋಗಲಿ ಕಚೇರಿಗೆ ಬರುವುದೂ ಅಪರೂಪವಾಗಿದೆ ಎಂಬುದು ರೈತರ ಆರೋಪವಾಗಿದೆ.

    ಜಲಾಶಯದ ಒಡ್ಡು ರಿಪೇರಿಗೆ 7 ಕೋಟಿ 70ಲಕ್ಷ ರೂ. ಟೆಂಡರ್ ಪ್ರಸ್ತಾವನೆಗೆ ಸರ್ಕಾರಕ್ಕೆ ಕಳುಹಿಸಲಾಗಿದೆ. ಮಂಜೂರಿಯಾಗಿ ಬಂದ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
    |ಗಿರೀಶ ಜೋಶಿ, ಮುಂಡಗೋಡ ಸಣ್ಣ ನೀರಾವರಿ ಇಲಾಖೆ ಎಇಇ

    ಕಳೆದ ವರ್ಷ ಜಲಾಶಯದ ಒಡ್ಡು ಒಡೆದು ಬಹಳಷ್ಟು ಬೆಳೆ ಹಾನಿಯಾಗಿದೆ. ಈ ಬಾರಿ ಒಡ್ಡು ಕಟ್ಟದೇ ಇದ್ದರೆ ಮತ್ತೆ ಬೆಳೆ ಹಾಳಾಗಲಿದೆ. ಅಲ್ಲದೆ, ಜಲಾಶಯದಲ್ಲಿ ನೀರು ಶೇಖರಣೆಯಾಗದಿದ್ದರೆ ಬೇಸಿಗೆ ಬೆಳೆ ಕೂಡ ಕೈಗೆ ಸಿಗುವುದಿಲ್ಲ.
    | ಪವನ ತಂಬಿ ಚಿಗಳ್ಳಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts