More

    ಮಳಿಗೆ ಹರಾಜು ಯಾವತ್ತು?

    ರಾಣೆಬೆನ್ನೂರ: ನಗರದ ಎಂ.ಜಿ. ರಸ್ತೆಯಲ್ಲಿ ನಗರಸಭೆಯಿಂದ ನಿರ್ವಿುಸಿದ 72 ನೂತನ ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡದ ಕಾರಣ ನಗರಸಭೆ ಖಜಾನೆ ಸೇರಬೇಕಿದ್ದ ಕೋಟ್ಯಂತರ ರೂ. ಆದಾಯಕ್ಕೆ ಕತ್ತರಿ ಬಿದ್ದಿದೆ.

    ರಾಜಕೀಯ ಪ್ರತಿಷ್ಠೆ, ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ಪೌರಾಡಳಿತ ನಿರ್ದೇಶನಾಲಯ ನೀಡಿರುವ 32 ಮಳಿಗೆಗಳ ಹರಾಜು ಸ್ಥಗಿತ ಆದೇಶದಿಂದ ನಗರಸಭೆಗೆ ಬರಬೇಕಿದ್ದ ಕೋಟ್ಯಂತರ ರೂ. ಆದಾಯಕ್ಕೆ ಕೊಕ್ಕೆ ಬಿದ್ದಿದೆ. ಮಳಿಗೆ ನಿರ್ವಿುಸಿ 2020ಕ್ಕೆ ಎರಡು ವರ್ಷವಾಗಿದೆ.

    ಏಕೆ ವಿಳಂಬ?: 2019ರ ಫೆಬ್ರವರಿಯಲ್ಲಿ ವಾಣಿಜ್ಯ ಮಳಿಗೆಗಳನ್ನು ಬಹಿರಂಗ ಹರಾಜು ಮಾಡಲು ನಗರಸಭೆ ಪ್ರಕಟಣೆ ಹೊರಡಿಸಿತ್ತು. ಆದರೆ, ಹಳೇ ಕಟ್ಟಡದಲ್ಲಿದ್ದ 32 ವ್ಯಾಪಾರಸ್ಥರು, ನೆಲ ಮಹಡಿಯ 32 ಮಳಿಗೆಗಳನ್ನು ಹಳಬರಿಗೇ ನೀಡಬೇಕು ಎಂದು ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಆಗ, ಕೋರ್ಟ್ ಹರಾಜಿಗೆ ತಡೆ ನೀಡಿತ್ತು. ನಂತರದಲ್ಲಿ ನ್ಯಾಯಾಲಯ ಮೆಟ್ಟಿಲೇರಿದ್ದವರು ಪ್ರಕರಣ ಹಿಂದೆ ಪಡೆದುಕೊಂಡರು. ನಂತರದಲ್ಲಿ 32 ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ತಡೆಯುವಂತೆ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿತು. ಇದು ರಾಜಕೀಯ ತಿರುವು ಪಡೆದುಕೊಂಡ ಕಾರಣ ನಗರಸಭೆಯವರು 32 ಮಳಿಗೆಗಳ ಜೊತೆಗೆ ಸಂಪೂರ್ಣ ಪ್ರಕ್ರಿಯೆ ಮುಂದೂಡಿ, ಸೂಕ್ತ ನಿರ್ದೇಶನಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದು ಕೈ ತೊಳೆದುಕೊಂಡರು. ಆದರೆ, ಈವರೆಗೂ ಜಿಲ್ಲಾಧಿಕಾರಿ ಹಾಗೂ ಪೌರಾಡಳಿತ ನಿರ್ದೇಶನಾಲಯದಿಂದ ಮಳಿಗೆ ಹರಾಜು ಕುರಿತು ಯಾವುದೇ ನಿರ್ದೇಶನ ಬಂದಿಲ್ಲ.

    ಕೋಟಿ ಕೋಟಿ ನಷ್ಟ: ನೆಲ ಮಹಡಿಯ 36 ಮಳಿಗೆಗಳ ನಿರ್ಮಾಣ ಕಾಮಗಾರಿ 2017ರಲ್ಲಿಯೇ ಮುಗಿದಿದೆ. 1ನೇ ಮಹಡಿಯ 36 ಮಳಿಗೆ ಕಾಮಗಾರಿ ಮುಗಿದು 1 ವರ್ಷ ಕಳೆದಿದೆ. ಹಳೇ ದರದ ಪ್ರಕಾರವೇ ಲೆಕ್ಕ ಹಾಕಿದರೆ ಎಲ್ಲ ಮಳಿಗೆಗಳ ಮುಂಗಡ ಹಣವಾಗಿ 5.40 ಕೋಟಿ ರೂ. ಬರುತ್ತಿತ್ತು. ತಲಾ ಒಂದು ಮಳಿಗೆಗೆ ತಿಂಗಳ ಬಾಡಿಗೆಯಾಗಿ 17 ಸಾವಿರ ರೂ.ನಂತೆ ಪ್ರತಿ ತಿಂಗಳು ಎಲ್ಲ ಅಂಗಡಿಗಳಿಂದ ಅಂದಾಜು 12 ಲಕ್ಷ ರೂ. ದೊರೆಯುತ್ತಿತ್ತು. ಇದೇ ಹಣವನ್ನು ನಗರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದಿತ್ತು. ಹರಾಜು ಪ್ರಕ್ರಿಯೆ ಮುಂದೂಡಿದಷ್ಟು ದಿನ ನಷ್ಟ ಆಗಲಿದೆಯೇ ಹೊರತು ಯಾವ ರೀತಿಯಿಂದಲೂ ಲಾಭವಿಲ್ಲ ಎಂಬುದು ಗಮನಾರ್ಹ ಸಂಗತಿ.

    ರಾಜಕೀಯ ಪ್ರತಿಷ್ಠೆ ಕಾರಣ

    2015ರಲ್ಲಿ ಮಳಿಗೆಗಳನ್ನು ತೆರವುಗೊಳಿಸುವ ಸಮಯದಲ್ಲಿ ಕೆ.ಬಿ. ಕೋಳಿವಾಡರು ಕ್ಷೇತ್ರದ ಶಾಸಕರಾಗಿದ್ದರು. ಅಂದಿನ ವ್ಯಾಪಾರಸ್ಥರು, ನೂತನ ಮಳಿಗೆ ನಿರ್ವಿುಸಿದ ಬಳಿಕ ತಮಗೆ ಪುನಃ ಬಾಡಿಗೆ ಕೊಡುವಂತೆ ಮನವಿ ಕೂಡ ಮಾಡಿಕೊಂಡಿದ್ದರು. 2019ರ ಫೆಬ್ರವರಿಯಲ್ಲಿ ಮಳಿಗೆ ಹರಾಜು ಸಮಯದಲ್ಲಿ ಆರ್. ಶಂಕರ ಶಾಸಕರಾಗಿದ್ದರು. ಆಗ ಎಲ್ಲರೂ ತಮ್ಮ ತಮ್ಮ ಬೆಂಬಲಿಗರಿಗೆ ಮಳಿಗೆ ಕೊಡಿಸಬೇಕು ಎಂಬ ಜಿದ್ದಾ ಜಿದ್ದಿಗೆ ಮುಂದಾಗಿದ್ದರು. ನಂತರ ಹರಾಜು ಪ್ರಕ್ರಿಯೆ ಮುಂದೂಡಲ್ಪಟ್ಟಿತ್ತು. ಈಗ ಅರುಣಕುಮಾರ ಪೂಜಾರ ಶಾಸಕರಾಗಿದ್ದಾರೆ. ಇವರಾದರೂ ಮುತುವರ್ಜಿ ವಹಿಸಿ ಮಳಿಗೆ ಹರಾಜಿಗೆ ಕ್ರಮ ಕೈಗೊಳ್ಳಬೇಕು ಎಂಬುದು ವ್ಯಾಪಾರಸ್ಥರ ಒತ್ತಾಯವಾಗಿದೆ.

    ಪಾಳುಬಿದ್ದ ಕಟ್ಟಡ

    ವಾಣಿಜ್ಯ ಮಳಿಗೆಗಳ ಹರಾಜು ಈವರೆಗೂ ಆಗದಿರುವ ಕಾರಣ ಸದ್ಯ ಸಂಪೂರ್ಣ ಕಟ್ಟಡ ಪಾಳು ಬಿದ್ದಿದೆ. ಪುಂಡ-ಪೋಕರಿಗಳಿಗೆ ಎಣ್ಣೆ ಹೊಡೆಯುವ ಹಾಗೂ ವ್ಯಾಪಾರಸ್ಥರಿಗೆ ತ್ಯಾಜ್ಯ ಎಸೆಯುವ ಸ್ಥಳವಾಗಿ ಮಾರ್ಪಟ್ಟಿದೆ. ಕೆಲವರು ಕಟ್ಟಡದ ಗೋಡೆಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಕಟ್ಟಡದ ಸುತ್ತಲೂ ದುರ್ನಾತ ಬೀರುತ್ತಿದೆ. ಮೆಟ್ಟಿಲುಗಳು ಸಂಪೂರ್ಣ ಕಸದಿಂದ ತುಂಬಿಕೊಂಡಿದ್ದು, ಕಟ್ಟಡದ ಬಳಿ ಸುಳಿದಾಡದಂತ ಸ್ಥತಿ ನಿರ್ವಣವಾಗಿದೆ.

    ನಗರಸಭೆ ನೂತನ ಮಳಿಗೆ ಹರಾಜು ಸ್ಥಗಿತಗೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ರ್ಚಚಿಸಿ ಆದಷ್ಟು ಬೇಗ ಹರಾಜು ಮಾಡಲಾಗುವುದು.
    | ಅರುಣಕುಮಾರ ಪೂಜಾರ, ಶಾಸಕ


    ಮಳಿಗೆ ಹರಾಜು ಕುರಿತು 2019ರ ಫೆಬ್ರವರಿಯಲ್ಲಿ ಉಂಟಾದ ಗೊಂದಲದ ಕುರಿತು ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದೆ. ಅಲ್ಲಿಂದ ಇನ್ನೂ ಯಾವುದೇ ಮಾರ್ಗದರ್ಶನ ಬಂದಿಲ್ಲ. ಮೇಲಿನ ಅಧಿಕಾರಿಗಳಿಂದ ಸೂಚನೆ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು.
    | ಡಾ. ಮಹಾಂತೇಶ, ನಗರಸಭೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts