More

    ಮಳಿಗೆಗೆ ನೀಡಿರುವ ಹಣ ಬಡ್ಡಿ ಸಮೇತ ನೀಡಿ

    ಬೆಳಗಾವಿ: ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಗುರುವಾರ ಕರೆಯಲಾಗಿದ್ದ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಕಾರ್ಯದರ್ಶಿ ಸೇರಿದಂತೆ ಆಡಳಿತಾಧಿಕಾರಿ ವಿರುದ್ಧ ಸ್ಥಳೀಯ ವರ್ತಕರು ಪ್ರತಿಭಟಿಸಿದರು.

    ಪ್ರಾಂಗಣದಲ್ಲಿನ ಮಳಿಗೆಗಳಿಗೆ ನೀಡಿರುವ ಹಣವನ್ನು ಬಡ್ಡಿ ಸಮೇತ ಮರಳಿಸುವುದು, ತರಕಾರಿ ಮೇಲೆ ಹೂಡಿಕೆ ಮಾಡಿರುವ ಬಂಡವಾಳ ಹಿಂತಿರುಗಿಸುವುದರ ಜತೆಗೆ ಸ್ಥಳೀಯ
    ವರ್ತಕರಿಗೆ ಉದ್ಯೋಗ ನೀಡಬೇಕು ಎಂದು ವರ್ತಕರು ಆಗ್ರಹಿಸಿದರು.

    ಬೆಳಗಾವಿಯ ಗಾಂಧಿನಗರದ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿರುವ ಖಾಸಗಿ ತರಕಾರಿ ಮಾರುಕಟ್ಟೆಗೆ ಎಪಿಎಂಸಿ ಕಾರ್ಯದರ್ಶಿ ಹಾಗೂ ನಿರ್ದೇಶಕರು ತಮ್ಮ ಅಧಿಕಾರದ ವ್ಯಾಪ್ತಿ ಮೀರಿ ಅನುಮತಿ ನೀಡಿದ್ದಾರೆ. ಇದರಿಂದ ಎಪಿಎಂಸಿಯಲ್ಲಿ ವ್ಯಾಪಾರ-ವಹಿವಾಟು ಸಂಪೂರ್ಣ ಕುಸಿದು ಬಿದ್ದಿದೆ. ಜೀವನ ನಡೆಸುವುದೇ ದುಸ್ತರವಾಗಿದೆ. ಎಪಿಎಂಸಿ ಪ್ರಾಂಗಣದಲ್ಲಿ ಮಳಿಗೆಯನ್ನು ಖರೀದಿ ಮಾಡುವಾಗ ನೀಡಿದ ಹಣ ಬಡ್ಡಿ ಸಮೇತ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಖಾಸಗಿ ಮಾರುಕಟ್ಟೆ ನಿರ್ಮಿಸುವಾಗ ಪರವಾನಗಿ ನೀಡುವಲ್ಲಿ ಯಾವುದೇ ಮಾನದಂಡ ಪಾಲಿಸದೆ, ಒಂದು ಮಳಿಗೆಗೆ 10 ಲಕ್ಷ ರೂ.ನಂತೆ ಲಂಚ ಪಡೆದು, ಅನುಮತಿ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಬೆಳಗಾವಿ ನಗರದಲ್ಲಿ ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಾಣವಾಗಲು ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರವೇ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಎಪಿಎಂಸಿ ಅಧಿಕಾರಿಗಳು ಸರ್ಕಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತದೆ ಎಂದು ತಿಳಿದಿದ್ದರೂ ಖಾಸಗಿ ಮಾರುಕಟ್ಟೆಯ ಪರವಾಗಿ ಲಾಬಿ ಮಾಡುತ್ತಿದ್ದಾರೆ. ಅವರ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ. ಬೆಳಗಾವಿ ಎಪಿಎಂಸಿ ಕಾರ್ಯದರ್ಶಿ, ಪ್ರಾಂಗಣದಲ್ಲಿ
    ಮಳಿಗೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಪರವಾನಗಿ ನೀಡಲು 20 ಲಕ್ಷ ರೂ. ಲಂಚ ಪಡೆದುಕೊಂಡಿದ್ದಾರೆ. ಅದನ್ನೂ ಸಹ ನಮಗೆ ಮರಳಿ ನೀಡಬೇಕು ಎಂದು ಆಗ್ರಹಿಸಿದರು.

    ಎಪಿಎಂಸಿ ಕಾರ್ಯದರ್ಶಿ ಡಾ. ಕೆ.ಕೋಡಿಗೌಡ, ಅಧ್ಯಕ್ಷ ಯುವರಾಜ ಕದಂ, ಸತೀಶ ಪಾಟೀಲ, ಬಸನಗೌಡ ಪಾಟೀಲ, ಜಿ.ಎಂ. ಶಹಾಪುರಕರ, ಆಸೀಫ್ ಕಲಮನಿ, ರಾಜು ತಹಸೀಲ್ದಾರ್, ಎಸ್.ಬಿ. ಲಂಗೋಟಿ, ಎಸ್.ಸಿ. ಪಾಟೀಲ, ರೈತ ಮುಖಂಡ ಸಿದಗೌಡ ಮೋದಗಿ ಇತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts