More

    ಮಲೆನಾಡಲ್ಲಿ 8 ಕರೊನಾ ಪಾಸಿಟಿವ್

    ಶಿವಮೊಗ್ಗ: ಕರೊನಾ ಆತಂಕದಿಂದ ಇದುವರೆಗೂ ದೂರವಾಗಿ ಹಸಿರು ವಲಯದಲ್ಲೇ ಗುರುತಿಸಿಕೊಂಡಿದ್ದ ಮಲೆನಾಡಿನ ಶಿವಮೊಗ್ಗಕ್ಕೂ ತಬ್ಲಿಘಿಗಳ ನಂಟು ಹಬ್ಬಿದ್ದು, ಗುಜರಾತ್​ನ ಅಹಮದಾಬಾದ್​ನಿಂದ ಬಂದಿರುವ 9 ತಬ್ಲಿಘಿಗಳಲ್ಲಿ 8 ಮಂದಿಗೆ ಪಾಸಿಟಿವ್ ಬಂದಿದೆ.

    ಕಳೆದ ಐದು ದಿನದಲ್ಲಿ ಹೊರರಾಜ್ಯಗಳಿಂದ ಶಿವಮೊಗ್ಗ ಜಿಲ್ಲೆಗೆ 289 ಜನರು ಆನ್​ಲೈನ್​ನಲ್ಲಿ ಬುಕ್ಕಿಂಗ್ ಮಾಡಿ ಬಂದಿದ್ದು, ಎಲ್ಲರನ್ನೂ ವಿವಿಧೆಡೆ ಕ್ವಾರಂಟೈನ್​ಗೆ ಸೂಚಿಸಲಾಗಿದೆ. ಆದರೆ ಅದರಲ್ಲಿ ಶನಿವಾರವಷ್ಟೇ ಬಸ್ ಮೂಲಕ ಗುಜರಾತ್​ನಿಂದ ಬಂದ ಶಿಕಾರಿಪುರದ ಏಳು ಮತ್ತು ತೀರ್ಥಹಳ್ಳಿಯ ಒಬ್ಬರಲ್ಲಿ ಕರೊನಾ ಸೋಂಕು ಇರುವುದು ಖಚಿತಗೊಂಡಿದೆ.

    ಕ್ವಾರಂಟೈನ್​ನಲ್ಲಿದ್ದ ಎಲ್ಲ ಎಂಟು ಸೋಂಕಿತರನ್ನು ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ನರ್ಸ್​ಗಳು ಹಾಗೂ ಸಿಬ್ಬಂದಿಯನ್ನು 14 ದಿನ ಪ್ರತ್ಯೇಕ ಹೋಟೆಲ್​ನಲ್ಲಿ ಕ್ವಾರಂಟೈನ್​ಗೆ ಕಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಭಾನುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

    ನೇರವಾಗಿ ಗುಜರಾತ್​ನಿಂದ ಆನ್​ಲೈನ್​ನಲ್ಲಿ ಬುಕ್ ಮಾಡಿಕೊಂಡು ಬಂದಿದ್ದಾರೆ. ತಬ್ಲಿಘಿಗಳ ಟ್ರಾವೆಲ್ ಹಿಸ್ಟರಿ ಸಂಗ್ರಹಿಸಲಾಗುತ್ತಿದೆ. ಸೋಂಕಿತರು ದೆಹಲಿಯ ತಬ್ಲಿಘ್ ಜಮಾತ್​ಗೆ ಹೋಗಿರುವ ಬಗ್ಗೆ ಖಚಿತತೆ ಇಲ್ಲ. ಪಿ. 808 ರಿಂದ 815ರವರೆಗೆ ಸಂಖ್ಯೆ ನೀಡಲಾಗಿದೆ. ಆನ್​ಲೈನ್ ಬುಕ್ಕಿಂಗ್ ಮಾಡಿ ಬಂದಿರುವ 289 ಜನರನ್ನು ಎಲ್ಲಿಗೂ ಹೋಗಲು ಬಿಟ್ಟಿಲ್ಲ ಎಂದು ತಿಳಿಸಿದರು.

    25 ಸಿಬ್ಬಂದಿಗೂ ಕ್ವಾರಂಟೈನ್: ತಬ್ಲಿಘಿಗಳ ಪ್ರಥಮ ಸಂಪರ್ಕಕ್ಕೆ ಬಂದು ಆರೈಕೆ ಮಾಡಿರುವ 25 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕ ಕ್ವಾರಂಟೈನ್​ಗೆ ಸೂಚಿಸಲಾಗಿದೆ. ವಸತಿ ನಿಲಯದ ಎಲ್ಲ ಎಂಟು ಮಂದಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿತ್ತು. ಸೋಂಕು ದೃಢಪಟ್ಟ ಬಳಿಕ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದರು.

    ಗುಜರಾತ್​ನಿಂದ ಬಂದ 8 ತಬ್ಲಿಘಿಗಳಲ್ಲಿ ಪಾಸಿಟಿವ್ ಇದ್ದರೂ ಶಿವಮೊಗ್ಗ ಹಸಿರು ವಲಯದಲ್ಲೇ ಮುಂದುವರಿಯಲಿದೆ. ಜಿಲ್ಲಾಡಳಿತ, ಸರ್ಕಾರದ ನಿರ್ಧಾರದಂತೆ ಲಾಕ್​ಡೌನ್ ಮುಂದುವರಿಯಲಿದೆ. ಜನರು ಆತಂಕಗೊಳ್ಳುವ ಅಗತ್ಯವಿಲ್ಲ. ಮೈಮರೆಯುವಂತೆಯೂ ಇಲ್ಲ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts