More

    ಮಲೆನಾಡಲ್ಲಿ ಮತ್ತೊಂದು ಪಾಸಿಟಿವ್

    ಶಿವಮೊಗ್ಗ: ಲಾಕ್​ಡೌನ್ ನಿರ್ಬಂಧ ತೆರವಿನ ನಂತರ ಮುಂಬೈನಿಂದ ಬಂದು ಹೋಮ್ ಕ್ವಾರಂಟೈನ್​ನಲ್ಲಿದ್ದ ತೀರ್ಥಹಳ್ಳಿ ತಾಲೂಕಿನ ವ್ಯಕ್ತಿಯೊಬ್ಬರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಮಲೆನಾಡಿನಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.

    ತೀರ್ಥಹಳ್ಳಿ ತಾಲೂಕಿನ ಹಳ್ಳಿಯೊಂದರ 42 ವರ್ಷದ (ಪಿ.995) ವ್ಯಕ್ತಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಆತನನ್ನು ಗುರುವಾರ ಸಂಜೆಯೇ ಮೆಗ್ಗಾನ್ ಆಸ್ಪತ್ರೆಯ ಐಸೋಲೆಟೆಡ್ ವಾರ್ಡ್​ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದ 12 ಮಂದಿಯನ್ನು ಪತ್ತೆ ಹಚ್ಚಿ ಕ್ವಾರಂಟೈನ್​ಗೆ ಸೂಚಿಸಿದ್ದು, ದ್ವಿತೀಯ ಸಂಪರ್ಕಕ್ಕೆ ಬಂದವರ ಪತ್ತೆ ಕಾರ್ಯ ಮುಂದುವರಿಸಲಾಗಿದೆ.

    ಹಸಿರು ವಲಯದಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಹೊರ ರಾಜ್ಯಗಳಿಂದ ಬಂದವರಲ್ಲೇ ಸೋಂಕು ಕಾಣಿಸಿಕೊಳ್ಳುತ್ತಿದ್ದು, ತೀರ್ಥಹಳ್ಳಿ ತಾಲೂಕಿನಲ್ಲಿ ಇದು ಎರಡನೇ ಪ್ರಕರಣವಾಗಿದೆ. ಕಳೆದ ಶನಿವಾರವಷ್ಟೇ ಗುಜರಾತ್​ನ ಅಹಮದಾಬಾದ್​ನಿಂದ ಬಂದಿದ್ದ 9 ಜನ ತಬ್ಲಿಘಿಗಳಲ್ಲಿ 8 ಜನರಲ್ಲಿ ಸೋಂಕು ತಗುಲಿದ್ದು, ಅವರಲ್ಲಿ ತೀರ್ಥಹಳ್ಳಿಯ 27 ವರ್ಷ(ಪಿ.814)ದ ವ್ಯಕ್ತಿ ಸೇರಿದ್ದಾರೆ. ಉಳಿದಂತೆ ಶಿಕಾರಿಪುರ ತಾಲೂಕಿನ ಇಬ್ಬರು ವೃದ್ಧರು ಸೇರಿ ಏಳು ಮಂದಿಗೆ ಸೋಂಕು ದೃಢಪಟ್ಟಿತ್ತು.

    ಕ್ವಾರಂಟೈನ್ ಉಲ್ಲಂಘನೆ?: ಮುಂಬೈನಿಂದ ಬಂದಿದ್ದ ಈ ವ್ಯಕ್ತಿಗೆ ಹೋಮ್ ಕ್ವಾರಂಟೈನ್​ನಲ್ಲಿ ಇರಲು ಸೂಚನೆ ನೀಡಲಾಗಿತ್ತು. ಆದರೆ ಈ ವ್ಯಕ್ತಿ ಕ್ವಾರಂಟೈನ್ ಸೂಚನೆ ಉಲ್ಲಂಘಿಸಿ ಹಲವೆಡೆ ಸುತ್ತಾಡಿರುವ ಸುದ್ದಿ ಇದೆ. ಸಂಬಂಧಿಕರ ಮನೆ ಸೇರಿದಂತೆ ಕೆಲವೆಡೆ ಸುತ್ತಾಡಿರುವ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆತನ ಟ್ರ್ಯಾವೆಲ್ ಹಿಸ್ಟರಿ ಕಲೆ ಹಾಕುತ್ತಿದೆ.

    ಮೆಗ್ಗಾನ್​ಗೆ ಶಿಫ್ಟ್: ತೀರ್ಥಹಳ್ಳಿ ತಾಲೂಕಿಗೆ ಮುಂಬೈನಿಂದ ಬಂದ 42 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದ್ದು, ಮೆಗ್ಗಾನ್ ಆಸ್ಪತ್ರೆಯ ಐಸೋಲೆಟೆಡ್ ವಾರ್ಡ್​ಗೆ ಸ್ಥಳಾಂತರಿಸಲಾಗಿದೆ ಎಂದು ಡಿಸಿ ಕೆ.ಬಿ.ಶಿವಕುಮಾರ್ ಸ್ಪಷ್ಟಪಡಿಸಿದರು.

    ಆತನ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡುತ್ತಿದ್ದು, ಪ್ರಾಥಮಿಕ ಸಂಪರ್ಕಕ್ಕೆ ಬಂದ 12 ಜನರನ್ನು ಗುರುತಿಸಿ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ದ್ವಿತೀಯ ಸಂಪರ್ಕ ಹೊಂದಿದವರ ಪತ್ತೆ ಕಾರ್ಯ ಶುರುವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ತೀರ್ಥಹಳ್ಳಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಸೀಲ್​ಡೌನ್ ಅಧಿಕೃತ ಆದೇಶ ಹೊರಡಿಸಿಲ್ಲ. ಆದರೆ ಸೋಂಕಿತನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರ ಪತ್ತೆಗೆ ಕೆಲವು ಹಳ್ಳಿಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ದ್ವಿತೀಯ ಸಂಪರ್ಕ ಹೊಂದಿದವರ ಮಾಹಿತಿ ಸಿಕ್ಕ ಬಳಿಕ ಸೀಲ್​ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಪ್ರಸ್ತುತ 3,746 ಜನರ ಸ್ವಾಬ್ ಟೆಸ್ಟ್ ಮಾಡಿದ್ದು, 3,575 ವರದಿ ನೆಗೆಟಿವ್ ಬಂದಿವೆ. 165 ಸ್ಯಾಂಪಲ್ಸ್ ವರದಿ ಬರಬೇಕಿದೆ. ಇದುವರೆಗೆ 1,400 ಜನರು ಹೊರ ರಾಜ್ಯಗಳಿಂದ ಬರಲು ಅನುಮತಿ ನೀಡಿದ್ದು, 860 ಮಂದಿ ಬಂದಿದ್ದಾರೆ. 695 ಜನರ ಸ್ಯಾಂಪಲ್ಸ್ ಪಡೆದಿದ್ದು, 580 ಜನರ ವರದಿ ನೆಗೆಟಿವ್ ಬಂದಿದ್ದು, ಒಟ್ಟಾರೆ 9 ಪಾಸಿಟಿವ್ ದೃಢಪಟ್ಟಿದೆ ಎಂದರು.

    ಸ್ಟ್ಯಾಂಡರ್ಡ್ ಆಪರೇಟಿವ್ ಪ್ರಕ್ರಿಯೆಯಂತೆ ಚಿಕಿತ್ಸೆ ನೀಡಲಾಗುವುದು ಎಂದ ಅವರು ತಬ್ಲಿಘಿಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 25 ಅಧಿಕಾರಿ ಮತ್ತು ಸಿಬ್ಬಂದಿಯನ್ನು 5 ಅಥವಾ 6ನೇ ದಿನಕ್ಕೆ ಪರೀಕ್ಷಿಸಿ ಸ್ಯಾಂಪಲ್ಸ್ ಸಂಗ್ರಹಿಸಲಾಗುವುದು. 12ನೇ ದಿನ ಮತ್ತೆ ಸ್ವಾಬ್ ಪರೀಕ್ಷೆ ಮಾಡಿ, ನೆಗೆಟಿವ್ ಬಂದರೆ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

    ಮೂರ್ನಾಲ್ಕು ಗ್ರಾಮಗಳಲ್ಲಿ ಸೀಲ್​ಡೌನ್: ಮತ್ತೊಂದು ಕರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಗುರುವಾರ ರಾತ್ರಿ ತೀರ್ಥಹಳ್ಳಿ ತಾಲೂಕಿನ ಮೂರ್ನಾಲ್ಕು ಹಳ್ಳಿಗಳಲ್ಲಿ ಸೀಲ್​ಡೌನ್ ಮಾಡಲಾಗಿತ್ತು. ತಹಸೀಲ್ದಾರ್ ಡಾ. ಶ್ರೀಪಾದ, ತಾಪಂ ಇಒ ಆಶಾಲತಾ, ವೈದ್ಯಾಧಿಕಾರಿಗಳಾದ ಡಾ. ಅಶೋಕ, ಡಾ. ಅರುಣ್​ಕುಮಾರ್, ಸಿಪಿಐ ಗಣೇಶಪ್ಪ, ಸಿಒ ನಾಗೇಂದ್ರಪ್ಪ ಸಭೆ ಸೇರಿ ಕರೊನಾ ವೈರಸ್ ಹರಡದಂತೆ ಸೋಂಕಿತ ವಾಸವಾಗಿದ್ದ ಹಳ್ಳಿಯ ಸುತ್ತಮುತ್ತಲಿನ ಗ್ರಾಮಗಳನ್ನು ಕಂಟೈನ್ಮೆಂಟ್ ಹಾಗೂ ಬಫರ್ ಝೋನ್ ಎಂದು ಗುರುತಿಸಿ ಸೀಲ್​ಡೌನ್ ಮಾಡಲಾಗಿತ್ತು.

    ಈ ಗ್ರಾಮಗಳ ಆರೋಗ್ಯ, ಕುಡಿಯುವ ನೀರು ಸರಬರಾಜು, ಎಲ್ಲ ನಾಗರಿಕ ಸೌಲಭ್ಯ ಒದಗಿಸಲು ಮುಳಬಾಗಿಲು ಗ್ರಾಪಂ ಪಿಡಿಓ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಗ್ರಾಮಗಳ ವೃದ್ಧರನ್ನು ಮತ್ತು ಮಕ್ಕಳನ್ನು ಯಾವುದೇ ಕಾರಣದಿಂದ ಮನೆಯಿಂದ ಹೊರ ಬರದಂತೆ ನೋಡಿಕೊಳ್ಳಲು ತಡ ರಾತ್ರಿವರೆಗೂ ಡಿಸಿ ಕೆ.ಬಿ.ಶಿವಕುಮಾರ್ ತಾಲೂಕು ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ತಹಸೀಲ್ದಾರ್ ಮತ್ತು ಇತರೆ ಅಧಿಕಾರಿ ತಂಡ ಬೆಳಗಿನ ಜಾವ 4 ಗಂಟೆವರೆಗೂ ಈ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದ್ದು ಜನ ಜಾಗೃತಿ ಮೂಡಿಸಿದರು. ಶಾಸಕ ಆರಗ ಜ್ಞಾನೇಂದ್ರ ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗ್ಗೆ ನಿರಂತರವಾಗಿ ಸಭೆ ನಡೆಸಿದರು.

    ಕ್ವಾರಂಟೈನ್ ಹೆಲ್ಪ್​ಲೈನ್: ಜಿಲ್ಲೆಯಲ್ಲಿ ಕ್ವಾರೆಂಟೈನ್​ನಲ್ಲಿರುವ ವ್ಯಕ್ತಿಗಳಿ ಕುಂದು ಕೊರತೆ ಆಲಿಸಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಆರಂಭಿಸಲಾಗಿದೆ. ಕ್ವಾರೆಂಟೈನ್​ನಲ್ಲಿರುವ ವ್ಯಕ್ತಿಗಳು ತಮ್ಮ ಕುಂದುಕೊರತೆ, ಅಹವಾಲುಗಳನ್ನು ಸಹಾಯವಾಣಿ ಸಂಖ್ಯೆ 08182-220082 ಸಂರ್ಪಸಿ ದಾಖಲಿಸಬಹುದಾಗಿದೆ. ಜಿಪಂ ಕಟ್ಟಡದ 2ನೇ ಮಹಡಿಯ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕಂಟ್ರೋಲ್ ರೂಂ ಆರಂಭಿಸಲಾಗಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಧರ್ಮಪ್ಪ ತಿಳಿಸಿದ್ದಾರೆ.

    ಕರೊನಾ ಸೋಂಕಿತರ ಸಂಖ್ಯೆ 9ಕ್ಕೇರಿದ್ದರೂ ಶಿವಮೊಗ್ಗ ಹಸಿರು ವಲಯದಲ್ಲೇ ಮುಂದುವರಿಯಲಿದೆ. ಗುಜರಾತ್​ನಿಂದ 8 ಮತ್ತು ಮುಂಬೈನಿಂದ ಬಂದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಕ್ವಾರಂಟೈನ್​ನಲ್ಲಿದ್ದವರಲ್ಲಿ ಸೋಂಕು ದೃಢಪಟ್ಟಿದೆ. ಹಾಗಾಗಿ ಹಸಿರು ವಲಯಕ್ಕೆ ಧಕ್ಕೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts