More

    ಮನೆ ಮನೆಯಲ್ಲೂ ರೇಣುಕಾಚಾರ್ಯರ ಪೂಜಿಸಿ

    ಬೆಳಗಾವಿ: ರೇಣುಕಾಚಾರ್ಯರ ತತ್ತ್ವ ಸಿದ್ಧಾಂತವನ್ನು ಸಮಾಜಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಹುಕ್ಕೇರಿ ಹಿರೇಮಠದ ಶ್ರೀಗಳು ಗಣೇಶೋತ್ಸವದ ಮಾದರಿಯಲ್ಲಿ ರೇಣುಕ ಉತ್ಸವ ಆಯೋಜಿಸಿರುವುದು ಅಭಿಮಾನದ ಸಂಗತಿ ಎಂದು ಬೆಂಗಳೂರು ವಿಭೂತಿಪುರ ಸಂಸ್ಥಾನ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

    ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಮಾ.11ರಿಂದ 16ರ ವರೆಗೆ ಜಗದ್ಗುರು ರೇಣುಕಾಚಾರ್ಯ ಜಯಂತಿ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ‘ರೇಣುಕ ಉತ್ಸವ’ ಉದ್ಘಾಟಿಸಿ ಮಾತನಾಡಿದ ಅವರು, ಐದು ದಿನ ರೇಣುಕರ ಮಹಾಮೂರ್ತಿಗೆ ವಿಶೇಷ ಪೂಜೆ, ಸಿದ್ಧಾಂತ ಶಿಖಾಮಣಿ ಗ್ರಂಥಪಾರಾಯಣ, ರೇಣುಕ ವಿಜಯ ಪುರಾಣ ಪಠಣ ಮತ್ತು ರೇಣುಕರ ವಿಚಾರಧಾರೆಗಳನ್ನು ತಿಳಿಸುತ್ತಿದ್ದಾರೆ. ತನ್ಮೂಲಕ ಜಗದ್ಗುರು ರೇಣುಕಾಚಾರ್ಯರನ್ನು ಮನೆ ಮನೆಯಲ್ಲಿ ಪೂಜಿಸಬೇಕು ಎಂಬ ಸಂದೇಶ ಸಾರುತ್ತಿದ್ದಾರೆ. ಇದನ್ನು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರು. ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ ಅಬ್ಬಿಗೇರಿ ಮಾತನಾಡಿ, ಹುಕ್ಕೇರಿ ಶ್ರೀಗಳ ಆಶಯದಂತೆ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಎಲ್ಲರೂ ಆಚರಿಸುವ ಅವಶ್ಯಕತೆ ಇದೆ. ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದಿಂದ ಎಲ್ಲ ಭಾಗದಲ್ಲಿಯೂ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಗುವುದು ಎಂದರು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ವೀರಶೈವ ಲಿಂಗಾಯತ ಪರಂಪರೆಯ ಮಹಾತ್ಮರ ವಿಚಾರವನ್ನು ತಿಳಿಸಬೇಕೆಂದರೆ ನಾವೆಲ್ಲರೂ ಸಾರ್ವತ್ರಿಕವಾಗಿ ರೇಣುಕಾಚಾರ್ಯರ ಜಯಂತಿ ಆಚರಿಸುವಂತಾಗಬೇಕು. ಹುಕ್ಕೇರಿ ಹಿರೇಮಠ ಈ ಕಾರ್ಯ ಮಾಡುವ ಮೂಲಕ ಮಾದರಿಯಾಗಿದೆ ಎಂದರು.

    ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ ಮಾತನಾಡಿ, ಮನೆ ದೇವರು ಮತ್ತು ಮನೆ ಗುರುಗಳು ನಮಗೆ ಆದರ್ಶ ಪರಂಪರೆಯನ್ನು ಕಲಿಸಿರುತ್ತಾರೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಗುರುಗಳಾಗಿರುವ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಮಾ. 16ರಂದು ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಆಚರಿಸಿ, ಅವರು ಬೋಧಿಸಿರುವ ವಿಚಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ತಿಳಿಸಿದರು. ನಿಲಜಿ ಅಲೌಕಿಕ ಆಶ್ರಮದ ಶಿವಾನಂದ ಸ್ವಾಮೀಜಿ ಮಾತನಾಡಿ, ರೇಣುಕಾಚಾರ್ಯರ ಜಯಂತಿಗೆ ಎಲ್ಲ ಪರಂಪರೆಯ ಸ್ವಾಮೀಜಿಗಳೂ ಬಂದಿದ್ದಾರೆ. ಬೆಳಗಾವಿ ಕಾರಂಜಿಮಠದ ಶ್ರೀಗಳು ಆಗಮಿಸಿ ರೇಣುಕರ ಎಲ್ಲ ಸಮುದಾಯದ ಗುರುಗಳು ಎಂದು ತಿಳಿಸಿರುವುದು ಸಂತಸ ತಂದಿದೆ ಎಂದರು. ಸಾಹಿತಿ ಬಿ.ಎಸ್. ಗವಿಮಠ, ಬಸವ ಸಮಿತಿಯ ಮೋಹನ ಪಾಟೀಲ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಸವರಾಜ, ವಿಜಯ ಶಾಸ್ತ್ರೀ, ಚಂದ್ರಶೇಖರ ಶಾಸ್ತ್ರೀ, ಸಂಪತಕುಮಾರ ಶಾಸ್ತ್ರೀ, ಬುಡಾ ಇಂಜಿನಿಯರ್ ಮಹಾಂತೇಶ ಹಿರೇಮಠ, ವಿರುಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರ ಸಾಲಿಸವಡಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts