More

    ಮನೆ ಮನೆಗೆ ಕುಡಿಯುವ ನೀರಿನ ಸೌಲಭ್ಯ

    ಕಲಕೇರಿ: ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಾಗುತ್ತಿದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಪ್ರತಿ ಹಳ್ಳಿಗಳ ಪ್ರತಿಯೊಂದು ಮನೆಮನೆಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಜಲಜೀವನ ಮಿಷನ್ ಯೋಜನೆ ಜಾರಿಗೆ ತಂದಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

    ಕೇಂದ್ರ- ರಾಜ್ಯ ಸರ್ಕಾರ, ಜಿಪಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸಿಂದಗಿ ವತಿಯಿಂದ 2022-23ನೇ ಸಾಲಿನ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ನಳ ಸಂಪರ್ಕ ಯೋಜನೆ ಕಾಮಗಾರಿಗೆ ಗ್ರಾಮದ ಗುರು ವೀರಘಂಟೈ ಮಡಿವಾಳೇಶ್ವರ ದೇವಸ್ಥಾನದ ಹತ್ತಿರ ಭೂಮಿಪೂಜೆ ನೆರವೇರಿಸಿ ಭಾನುವಾರ ಅವರು ಮಾತನಾಡಿದರು.

    ಈ ಯೋಜನೆಯಡಿ ಕಲಕೇರಿ ಗ್ರಾಮಕ್ಕೆ ಅಂದಾಜು 3.52 ಕೋಟಿ ರೂ. ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಗ್ರಾಮಸ್ಥರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಕ್ಷೇತ್ರದಲ್ಲಿ ಬಹಳಷ್ಟು ಕಡೆ ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ಕೊರತೆಯಿದ್ದು, ಅವೆಲ್ಲವುಗಳನ್ನು ಸರಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಕಲಕೇರಿಯನ್ನು ಹೋಬಳಿ ಎಂದು ಘೋಷಿಸುವುದು ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾಗಿದ್ದು, ಈಗಾಗಲೇ ಕಂದಾಯ ಸಚಿವರ ಗಮನಕ್ಕೆ ತರಲಾಗಿದೆ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದ್ದು, ಈ ಕುರಿತು ನಿರಂತರ ಪ್ರಯತ್ನ ನನ್ನದಾಗಿರುತ್ತದೆ ಎಂದರು.

    ಜೆಜೆಎಂ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವುದರ ಜತೆಗೆ ಪ್ರತಿ ಮನೆಗೆ ನೀರಿನ ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಕಾಮಗಾರಿ ಪೂರ್ಣಗೊಳಿಸಲು ತಾಕೀತು ಮಾಡಿದರು.

    ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು, ಮುಖಂಡ ಶಾಂತಗೌಡ ಪಾಟೀಲ, ಗ್ರಾಪಂ ಸದಸ್ಯರಾದ ನಬಿಲಾಲ ನಾಯ್ಕೋಡಿ ಮಾತನಾಡಿದರು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಶಾಸಕರನ್ನು ಗೌರವಿಸಿ ಸನ್ಮಾನಿಸಿದರು.

    ಗ್ರಾಪಂ ಅಧ್ಯಕ್ಷ ರಾಜಹಮ್ಮದ ಸಿರಸಗಿ, ಮಡುಸಾವಕಾರ ಬಿರಾದಾರ, ಸಂಗಾರಡ್ಡಿ ದೇಸಾಯಿ, ವಿ.ಆರ್.ಝಳಕಿ, ಮಲಕಾಜಪ್ಪಗೌಡ ಬಿರಾದಾರ, ಸಾಯಬಣ್ಣ ಬಾಗೇವಾಡಿ, ಗುತ್ತಿಗೆದಾರ ಅಶೋಕ ಸಾಲಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts