More

    ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆ 18ರಿಂದ

    ಗದಗ: 17ನೇ ರಾಷ್ಟ್ರೀಯ ಸೀನಿಯರ್, ಜೂನಿಯರ್ ಮತ್ತು ಸಬ್ ಜೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್​ಶಿಪ್ ಫೆ.18ರಿಂದ ಫೆ.21ರವರೆಗೆ ತಾಲೂಕಿನ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ನೂತನವಾಗಿ ನಿರ್ವಿುಸಿರುವ ಮೌಂಟೇನ್ ಬೈಕ್ ಟ್ರ್ಯಾಕ್​ನಲ್ಲಿ ನಡೆಯಲಿದೆ.

    ವಿವಿಧ ರಾಜ್ಯದಿಂದ 600 ಸ್ಪರ್ಧಿಗಳು ಆಗಮಿಸುತ್ತಿದ್ದಾರೆ. ಅವರಿಗೆ ಊಟ, ವಸತಿ, ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ನಿಗಾ ವಹಿಸಲಾಗುತ್ತಿದೆ. ಕೋವಿಡ್-19 ಹಿನ್ನೆಲೆಯಲ್ಲಿ ವಸತಿ ಸ್ಥಳಗಳು, ಸ್ನಾನದ ಗೃಹ, ಶೌಚಗೃಹಗಳನ್ನು ಸ್ಯಾನಿಟೈಸ್ ಮಾಡಿಸಲಾಗುತ್ತಿದೆ.

    ಕಾರ್ಯಕ್ರಮದ ಯಶಸ್ಸಿಗೆ ಸ್ವಾಗತ ಸಮಿತಿ, ಸಂಘಟನಾ ಸಮಿತಿ, ಹಣಕಾಸು, ಪ್ರಚಾರ, ಆಹಾರ, ವೈದ್ಯಕೀಯ, ಸಾರಿಗೆ, ವೇದಿಕೆ, ನೋಂದಣಿ, ನ್ಯಾಯ ನಿರ್ಣಯ, ಭದ್ರತಾ, ಸೈಕ್ಲಿಂಗ್ ಟ್ರ್ಯಾಕ್ ಒಳಗೊಂಡಂತೆ ಒಟ್ಟು 13 ಸಮಿತಿಗಳನ್ನು ರಚಿಸಲಾಗಿದೆ. 19 ವರ್ಷದೊಳಗಿನ ಪುರುಷರ ವಿಭಾಗದಲ್ಲಿ 30 ಕಿಮೀ ಮತ್ತು 40 ಕಿಮೀ, ಮಹಿಳಾ ವಿಭಾಗದಲ್ಲಿ 20 ಕಿಮೀ ಮತ್ತು 40 ಕಿಮೀ ಸೈಕಲ್ ಓಟ ಸ್ಪರ್ಧೆ ಇರಲಿದೆ. ಪುರುಷ ಮತ್ತು ಮಹಿಳೆಯರ ಮಿಶ್ರ ರಿಲೆ ವಿಭಾಗದಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳಾ ಸ್ಪರ್ಧಿಗಳು ಭಾಗವಹಿಸುವರು.

    17ರಿಂದ 18 ವರ್ಷದ ಪುರುಷರ ಜೂನಿಯರ್ ವಿಭಾಗದಲ್ಲಿ 20 ಕಿಮೀ ಮತ್ತು 30 ಕಿಮೀ, ಮಹಿಳಾ ವಿಭಾಗದಲ್ಲಿ 15 ಕಿಮೀ ಮತ್ತು 20 ಕಿಮೀ ಓಟದ ಸ್ಪರ್ಧೆ ಇರಲಿದೆ. ರಿಲೆ ವಿಭಾಗದಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳಾ ಸ್ಪರ್ಧಿಗಳು ಭಾಗವಹಿಸುವರು.

    15ರಿಂದ 16 ವರ್ಷದ ಪುರುಷರ ಸಬ್ ಜೂನಿಯರ್ ವಿಭಾಗದಲ್ಲಿ 10 ಕಿಮೀ ಮತ್ತು 20 ಕಿಮೀ, ಮಹಿಳಾ ವಿಭಾಗದಲ್ಲಿ 10 ಕಿಮೀ ಮತ್ತು 15 ಕಿಮೀ ಸೈಕಲ್ ಓಟ ಸ್ಪರ್ಧೆ ಇರಲಿದೆ. 14 ವರ್ಷದೊಳಗಿನ ಬಾಲಕರಿಗೆ 10 ಕಿಮೀ ಮತ್ತು 15 ಕಿಮೀ, ಬಾಲಕಿಯರಿಗೆ 10 ಕಿ.ಮಿ, 15 ಕಿಮೀ ಸ್ಪರ್ಧೆ ಇರಲಿದೆ.

    ನೆಲಕ್ಕೆ ಕಾಲು ಹಚ್ಚದೆ ಸೈಕಲ್ ಓಡಿಸಬೇಕು: ಬಿಂಕದಕಟ್ಟಿ ಸಾಲುಮರದ ಸಸ್ಯೋದ್ಯಾನದಲ್ಲಿ ಒಟ್ಟು ನಾಲ್ಕು ಕಿಮೀ ಮೌಂಟೇನ್ ಬೈಕ್ ಟ್ರ್ಯಾಕ್ ನಿರ್ವಿುಸಲಾಗಿದೆ. ಗುಡ್ಡದಲ್ಲಿ ನಿರ್ವಿುಸಿರುವ ಈ ಟ್ರ್ಯಾಕ್ ಮಾರ್ಗದುದ್ದಕ್ಕೂ ಅಲ್ಲಿಲ್ಲಿ ಕೆಂಪು ಪಟ್ಟಿ ಅಂಟಿಸಿ ಗುರುತು ಮಾಡಲಾಗಿದೆ. ಕಾಲು ದಾರಿ ಮಾದರಿಯಲ್ಲಿರುವ ಟ್ರ್ಯಾಕ್​ನಲ್ಲಿ ಸ್ಪರ್ಧಿಗಳು ನೆಲಕ್ಕೆ ಕಾಲು ಹಚ್ಚದೆ ಸೈಕಲ್ ಓಡಿಸಬೇಕು. ನೆಲಕ್ಕೆ ಕಾಲು ಇಟ್ಟರೆ ಅಂತಹ ಸ್ಪರ್ಧಿ ಅನರ್ಹರಾಗುತ್ತಾರೆ. ಸ್ಪರ್ಧಿಗಳ ಸೈಕಲ್ ಓಟವನ್ನು ವೀಕ್ಷಿಸಲು ಪ್ರತಿ 100 ಮೀಟರ್​ಗೆ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. 30-40 ಕಿಮೀ ಓಡಿಸುವ ಸ್ಪರ್ಧಿಗಳು ನಾಲ್ಕು ಕಿಮೀ ಟ್ರ್ಯಾಕ್ ಅನ್ನು ಹತ್ತು ಸುತ್ತು ಹಾಕಬೇಕು.

    17ನೇ ರಾಷ್ಟ್ರೀಯ ಸೀನಿಯರ್, ಜ್ಯೂನಿಯರ್ ಮತ್ತು ಸಬ್ ಜ್ಯೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್​ಶಿಪ್ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಚಾಂಪಿಯನ್​ಶಿಪ್​ನ ಲಾಂಛನ ಶೀಘ್ರ ಬಿಡುಗಡೆ ಮಾಡಲಾಗುವುದು.
    | ಸುಂದರೇಶಬಾಬು ಜಿಲ್ಲಾಧಿಕಾರಿ

    ಹೊರ ರಾಜ್ಯಗಳಿಂದ ಬರುವ ಸ್ಪರ್ಧಿಗಳಿಗೆ ಆಹಾರ, ವಸತಿ, ಶೌಚಗೃಹ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಿಕೊಡಲಾಗುವುದು.
    |ಡಾ.ಆನಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts