More

    ಮನೆಯಲ್ಲೇ ಈದ್-ಉಲ್-ಫಿತ್ರ್

    ಹುಬ್ಬಳ್ಳಿ/ಧಾರವಾಡ: ಅವಳಿ ನಗರದಲ್ಲಿ ಮುಸ್ಲಿಂ ಸಮಾಜದವರು ಸೋಮವಾರ ರಂಜಾನ್ (ಈದ್-ಉಲ್-ಫಿತ್ರ್) ಹಬ್ಬವನ್ನು ಮನೆಯಲ್ಲಿಯೇ ಸರಳವಾಗಿ ಆಚರಿಸಿದರು. ಕರೊನಾ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರಲಿಲ್ಲ.

    ಬೆಳಗ್ಗೆ 9.30ರ ವೇಳೆಗೆ ಮಸೀದಿಯಲ್ಲಿ ಐವರು ಮಾತ್ರ ನಮಾಜ್ ಸಲ್ಲಿಸಿದರು. ಉಳಿದವರು ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಹಾಗೂ ಧರ್ಮಗುರುಗಳ ಕರೆಯನ್ನು ಮನ್ನಿಸಿ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು. ಕಳೆದ 2 ತಿಂಗಳು ಲಾಕ್​ಡೌನ್ ಜಾರಿಯಲ್ಲಿದ್ದರಿಂದ ಬಟ್ಟೆ ವ್ಯಾಪಾರ ಮಳಿಗೆಗಳು, ಟೇಲರ್ ಅಂಗಡಿಗಳು ಬಂದ್ ಇದ್ದಿದ್ದು ಇದ್ದಕ್ಕೆ ಕಾರಣ. ಹಾಗಾಗಿ ಈ ಬಾರಿ ಹೊಸ ಬಟ್ಟೆ ಖರೀದಿಗೆ ಅವಕಾಶವೇ ಇರಲಿಲ್ಲ. ಪ್ರತಿ ವರ್ಷ ರಂಜಾನ್ ಹಬ್ಬದ ಸಂಭ್ರಮದಲ್ಲಿ ತಮ್ಮ ಸ್ನೇಹಿತರನ್ನು ಮನೆಗೆ ಕರೆಯಿಸಿ ಭೋಜನ ವ್ಯವಸ್ಥೆ ಮಾಡುತ್ತಿದ್ದರು. ಆದರೆ, ಈ ಬಾರಿ ಬಹುತೇಕ ಕಡೆ ಮನೆಯ ಸದಸ್ಯರು ಮಾತ್ರ ಭೋಜನ ಸವಿದರು. ರಂಜಾನ್ ಹಬ್ಬದ ವಿಶೇಷ ಶೀರ್​ಕುರ್ವ ಮಾಡಿದ್ದರು. ತಮ್ಮ ಬಂಧು-ಬಳಗದವರಿಗೆ ಕರೆ ಮಾಡಿ ಹಬ್ಬದ ಶುಭಾಶಯ ಹೇಳಿಕೊಂಡರು.

    ಹುಬ್ಬಳ್ಳಿ ಕಿತ್ತೂರ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಪ್ರತಿ ವರ್ಷ ರಂಜಾನ್ ಹಬ್ಬದಂದು 25-30 ಸಾವಿರ ಜನ ಸಾಮೂಹಿಕ ಪ್ರಾರ್ಥನೆಗೆ ಸೇರುತ್ತಿದ್ದರು. ನಗರದ ಉಳಿದೆಡೆ ಸಹ ಈದ್ಗಾ ಮೈದಾನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ಬಾರಿ ಅಂಥ ದೃಶ್ಯಗಳು ಕಾಣಲಿಲ್ಲ. ಈದ್ಗಾ ಮೈದಾನಗಳು ಬಿಕೋ ಎನ್ನುತ್ತಿದ್ದವು. ಬಂದೋಬಸ್ತ್​ಗೆ ಹತ್ತಿಪ್ಪತ್ತು ಪೊಲೀಸ್​ರು ನಿಯೋಜನೆಗೊಂಡಿದ್ದರು. ಇದ್ದಂಥ ಎಲ್ಲ ಗೇಟ್​ಗಳನ್ನು ಬಂದ್ ಮಾಡಿ ಪ್ರವೇಶವನ್ನು ನಿರಾಕರಿಸಲಾಗಿತ್ತು. ಸೂಕ್ಷ್ಮ ಸ್ಥಳಗಳಲ್ಲಿ ಮಸೀದಿ ಸುತ್ತಲೂ ಪೊಲೀಸರು ಬಂದೋಬಸ್ತ್​ಗೆ ನಿಂತಿದ್ದರು.

    ಈದ್ಗಾ ಮೈದಾನಗಳಲ್ಲಿ ಐವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕೆಂದು ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಮನವಿ ಮಾಡಿತ್ತು. ಆದರೆ, ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ.

    ತೊರವಿಹಕ್ಕಲ ಪ್ರದೇಶದಲ್ಲಿ ಮುಸ್ಲಿಂ ಸಮಾಜದವರು ರಸ್ತೆಯ ಮೇಲೆ ನಮಾಜ್ ಸಲ್ಲಿಸಲು ಮುಂದಾಗಿದ್ದರು. ರಸ್ತೆಗೆ ಬಂದ ಜನರಿಗೆ ಮನೆಗೆ ತೆರಳುವಂತೆ ಪೊಲೀಸರು ಮನವಿ ಮಾಡಿದರು. ರಸ್ತೆಯಲ್ಲಿ ನಮಾಜ್​ಗೆ ಅವಕಾಶ ನೀಡಲಿಲ್ಲ. ಧಾರವಾಡದಲ್ಲಿ ಕೆಲವರು ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್​ಗಳನ್ನು ನೀಡಿದರು.

    ಕರೊನಾ ದೂರವಾಗಲಿ: ಹಳೇ ಹುಬ್ಬಳ್ಳಿ ಅಲ್ತಾಫ್ ನಗರದ ಮದೀನಾ ಮಸೀದಿಯಲ್ಲಿ ಮೌಲಾನಾ ಅಬ್ದುಲ್ ಹಕೀಂ ತಹಶೀಲ್ದಾರ ಪ್ರಾರ್ಥನೆ ಸಲ್ಲಿಸಿದರು. ಕರೊನಾ ಸೋಂಕಿನಿಂದ ದೇಶ ಎದುರಿಸುತ್ತಿರುವ ಸಂಕಷ್ಟಗಳು ದೂರವಾಗಿ ಜನರು ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ಪ್ರಾರ್ಥಿಸಲಾಯಿತು. ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರು, ಅಲ್ಲಾಭಕ್ಷ ಸವಣೂರು, ಎ.ಎಂ. ಮಸೂತಿ, ನನ್ನೇಸಾಬ ನಲ್ಲಿಕೊಪ್ಪ ಇದ್ದರು.

    ಸಂಸೆ್ಥಯ ಅಧ್ಯಕ್ಷ ಎಂ.ಸಿ. ಸವಣೂರ ಅವರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಳಿಕ ಶಾಸಕ ಪ್ರಸಾದ ಅಬ್ಬಯ್ಯ, ಅಲ್ತಾಫ್ ಕಿತ್ತೂರ, ಮೆಹಬೂಬ ಖಾನ್ ಪಠಾಣ, ಜತೆ ಸೇರಿ ಮೂರುಸಾವಿರ ಮಠಕ್ಕೆ ಭೇಟಿ ನೀಡಿ ಶ್ರೀಗಳನ್ನು ಸನ್ಮಾನಿಸಿದರು. ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ, ಮಲ್ಲಿಕಜಾನ್ ಸಿಕಂದರ, ಪ್ರಸನ್ನ ಮಿರಜಕರ, ಅಮರೇಶ ಹಿಪ್ಪರಗಿ, ಇತರರು ಇದ್ದರು.

    ಅಳ್ನಾವರ ತಾಲೂಕಲ್ಲಿ ಸರಳ ಆಚರಣೆ: ಅಳ್ನಾವರ ತಾಲೂಕಿನಾದ್ಯಂತ ರಂಜಾನ್ ಹಬ್ಬವನ್ನು ಮುಸ್ಲಿಮರು ಸರಳವಾಗಿ ಆಚರಿಸಿದರು. ಸರ್ಕಾರದ ಆದೇಶದಂತೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸದೆ ತಮ್ಮ ಮನೆಗಳಲ್ಲಿ ಕುಟುಂಬದವರೊಂದಿಗೆ ನಮಾಜ್ ಮಾಡಿದರು. ಮಹಾಮಾರಿ ಕರೊನಾ ಜಗತ್ತಿನಿಂದ ತೊಲಗಿ ಸರ್ವಜನಾಂಗಕ್ಕೂ ಸುಖ- ಶಾಂತಿ ನೀಡುವಂತೆ ಮುಸ್ಲಿಮರು ಅಲ್ಲಾನಲ್ಲಿ ಬೇಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts