More

    ಮನೆಗೇ ಅಡುಗೆ ಸಾಮಗ್ರಿ ಪೂರೈಕೆಗೆ ಅನುಮತಿ

    ವಿಜಯವಾಣಿ ಸುದ್ದಿಜಾಲ ಕಾರವಾರ

    ಮಾತೃಪೂರ್ಣ ಯೋಜನೆಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಮನೆಗಳಿಗೇ ಅಡುಗೆ ಸಾಮಗ್ರಿಗಳನ್ನು ಪೂರೈಸಲು ಅವಕಾಶ ನೀಡಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ, ಅದರಲ್ಲಿ ಕೆಲವು ಗೊಂದಲಗಳಿವೆ. ಹೀಗಾಗಿ, ಅಧಿಕಾರಿಗಳು ಜಾರಿ ಮಾಡಲು ಹಿಂದೇಟು ಹಾಕುವಂತಾಗಿದೆ.

    ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿಗಳಿಗೆ ಹೋಗಿ ಮಧ್ಯಾಹ್ನ ಪೌಷ್ಟಿಕ ಊಟ, ಮೊಟ್ಟೆ ಸವಿಯುವ ವ್ಯವಸ್ಥೆ ಸದ್ಯ ಇದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡಗಾಡು ಪ್ರದೇಶಗಳಿದ್ದು, ಮಳೆ, ಚಳಿ, ಬಿಸಿಲಲ್ಲಿ ಗರ್ಭಿಣಿ, ಬಾಣಂತಿಯರು ಅಂಗನವಾಡಿಗಳಿಗೆ ತೆರಳಿ ಊಟ ಮಾಡಲು ಒಪ್ಪುತ್ತಿಲ್ಲ. ಇದರಿಂದ ಯೋಜನೆಯಡಿ ಶೇ. 50 ಕ್ಕಿಂತ ಕಡಿಮೆ ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದಾರೆ. ಹಾಗಾಗಿ ಯೋಜನೆಯ ವೈಫಲ್ಯದ ಬಗ್ಗೆ ಜನಪ್ರತಿನಿಧಿಗಳಿಂದ ತೀವ್ರ ಆಕ್ಷೇಪ ಕೇಳಿ ಬಂದಿತ್ತು.

    ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದಲ್ಲಿ ಮಾತೃಪೂರ್ಣ ಅವೈಜ್ಞಾನಿಕವಾಗಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಯೋಜನೆಯಿಂದ ಜಿಲ್ಲೆಗೆ ವಿನಾಯಿತಿ ನೀಡಿ, ಆಹಾರ ತಯಾರಿಸಲು ಬೇಕಾದ ಪದಾರ್ಥಗಳನ್ನು ಸರ್ಕಾರ ಫಲಾನುಭವಿಗಳ ಮನೆಗೇ ಪೂರೈಸಲು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಕಳೆದ ಕೆಡಿಪಿ ಸಭೆಯಲ್ಲಿ ಸೂಚಿಸಿದ್ದರು. ಎಲ್ಲದರ ಫಲವಾಗಿ ಸರ್ಕಾರ ಮಾತೃಪೂರ್ಣದಲ್ಲಿ ಜಿಲ್ಲೆಯ ಗರ್ಭಿಣಿ, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ತೆರಳಿ ಊಟ ಮಾಡುವುದಕ್ಕೆ ವಿನಾಯಿತಿ ನೀಡಿದೆ.

    ಗೊಂದಲ: ಗುಡ್ಡಗಾಡು ಪ್ರದೇಶದ ಗರ್ಭಿಣಿ ಮತ್ತು ಬಾಣಂತಿಯರು ‘ಅಂಗನವಾಡಿ ಪ್ರದೇಶಗಳಿಗೆ ಬಂದು ಊಟ ಮಾಡಲು ತಮಗೆ ಕಷ್ಟವಾಗುತ್ತಿದೆ. ಮನೆಗಳಿಗೆ ಅಡುಗೆ ಸಾಮಗ್ರಿ ಪೂರೈಸಿ’ ಎಂದು ಮನವಿ ಮಾಡಿದಲ್ಲಿ ಮಳೆಗಾಲ ಮುಗಿಯುವವರೆಗೆ ಅಡುಗೆ ಸಾಮಗ್ರಿಗಳನ್ನು ಮನೆಗಳಿಗೇ ಪೂರೈಸಬಹುದು ಎಂದು ಕಳೆದ ವಾರ ಸುತ್ತೋಲೆ ಹೊರಡಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಮಾತ್ರ ಈ ಆದೇಶ ಅನ್ವಯವಾಗಲಿದೆ.

    ಆದರೆ, ಮಳೆಗಾಲ ಮುಗಿಯುವವರೆಗೆ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಸೂಚಿಸಿರುವುದು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಗೊಂದಲಕ್ಕೆ ಕಾರಣವಾಗಿದೆ. ಯಾವ ತಿಂಗಳವರೆಗೆ ಮನೆಗಳಿಗೆ ಆಹಾರ ಪೂರೈಸಬಹುದು ಎಂಬ ಸ್ಪಷ್ಟತೆ ಸುತ್ತೋಲೆಯಲ್ಲಿಲ್ಲ. ಅಲ್ಲದೆ, ಗುಡ್ಡಗಾಡು ಪ್ರದೇಶಗಳಿಗೆ ಸೀಮಿತವಾಗಿ ಎಂಬ ಪದವನ್ನು ಆದೇಶದಲ್ಲಿ ಸೇರಿಸಿದ್ದು, ಕರಾವಳಿಗೆ ಈ ಆದೇಶ ಅನ್ವಯವಾಗುವುದಿಲ್ಲವೇ..? ಎಂಬ ಅನುಮಾನವೂ ಅಧಿಕಾರಿಗಳಲ್ಲಿದೆ.

    ಮಾತೃಪೂರ್ಣ ಯೋಜನೆಯಡಿ ಮನೆಗಳಿಗೆ ಅಡುಗೆ ಸಾಮಗ್ರಿ ಪೂರೈಸುವ ಕುರಿತು ಸರ್ಕಾರದ ಆದೇಶದ ಬಗ್ಗೆ ಸ್ಪಷ್ಟತೆ ಕೋರಿ ಪತ್ರ ಬರೆಯಲಾಗುವುದು. ಆದೇಶವನ್ನು ಮುಂದಿನ ತಿಂಗಳಿನಿಂದ ಜಾರಿ ಮಾಡುವ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
    ಶ್ಯಾಮಲಾ ಸಿ.ಕೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts